Connect with us

    LATEST NEWS

    ಪುತ್ತೂರು ಪತ್ರಿಕಾ ಭವನಕ್ಕೆ ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ಭೇಟಿ, ರಾಜ್ಯಾಧ್ಯಕ್ಷರಿಗೆ ಮನವಿ ಪತ್ರ ನೀಡಿದ ಪುತ್ತೂರು ಪತ್ರಕರ್ತರ ಸಂಘ

    ಪುತ್ತೂರು, ಸೆಪ್ಟೆಂಬರ್ 12: ಪುತ್ತೂರು ಪತ್ರಿಕಾ ಭವನಕ್ಕೆ ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ಶನಿವಾರ ಭೇಟಿ ನೀಡಿ ಸಂಘದ ಕಾರ್ಯ ಚಟುವಟಿಕೆಗಳ ಬಗ್ಗೆ ಚರ್ಚೆ ನಡೆಸಿದರು. ಸಭೆಯ‌ ಬಳಿಕ ಪುತ್ತೂರು ಪತ್ರಕರ್ತರ ಸಂಘಧ ಹಿರಿಯ ಪದಾಧಿಕಾರಿಗಳು ಮತ್ತು ಸದಸ್ಯರು ರಾಜ್ಯಾಧ್ಯಕ್ಷರಿಗೆ ತಮ್ಮ ಮನವಿಯನ್ನು ಸಲ್ಲಿಸಿದರು.

    ತಾಲೂಕು ಪತ್ರಕರ್ತರ ಸಂಘ ಕಳೆದ 25 ವರ್ಷಗಳಿಂದ ಉತ್ತಮವಾಗಿ, ಸಾಮಾಜಿಕ ಕಳಕಳಿಯ ಚಟುವಟಿಕೆಗಳೊಂದಿಗೆ ಕಾರ್ಯ ನಿರ್ವಹಿಸುತ್ತಾ ಬಂದಿದೆ. ಕಳೆದ ಎರಡು ವರ್ಷಗಳ ಹಿಂದೆ ಸಂಘದ ಅಧ್ಯಕ್ಷರಾಗಿ ಆಯ್ಕೆಯಾಗಿದ್ದ ಶ್ರವಣ ಕುಮಾರ್ ನಾಳ ಅವರು ಆಡಳಿತ ಮಂಡಳಿಯ ಒಂದು ವರ್ಷದ ನಿಗದಿತ ಅಧಿಕಾರಾವಧಿ ಮೀರಿದ್ದರೂ, ಸಂಘದ ವಾರ್ಷಿಕ ಮಹಾಸಭೆ ಹಾಗೂ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆಯನ್ನು ವಿವಿಧ ನೆಪಗಳನ್ನೊಡ್ಡಿ ಮುಂದೂಡುತ್ತಲೇ ಬಂದಿದ್ದಾರೆ. ಅವರ ಏಕಪಕ್ಷೀಯ ನಿರ್ಧಾರಗಳಿಂದಾಗಿ ಬೆಳ್ಳಿಹಬ್ಬದ ಸಂಭ್ರಮದಲ್ಲಿರಬೇಕಾದ ಸಂಘ ನಿರ್ನಾಮವಾಗುವಂತಾಗಿದೆ.

    ಸಂಪನ್ಮೂಲಗಳನ್ನು ಕ್ರೋಢೀಕರಿಸಿದ ಬಳಿಕ ಪ್ರೆಸ್‍ಕ್ಲಬ್ ಕಟ್ಟಡದ ಅಭಿವೃದ್ಧಿ ಕಾರ್ಯ ಕೈಗೆತ್ತಿಕೊಳ್ಳುವ ಬದಲು ನೇರವಾಗಿ ಏಕಪಕ್ಷೀಯ ತೀರ್ಮಾನ ಕೈಗೊಂಡು ಕೋವಿಡ್ ಸಂದರ್ಭಲ್ಲಿ ಕಾಮಗಾರಿಗಳನ್ನು ನಡೆಸಿ, ಕೆಲಸ ನಿರ್ವಹಿಸಿದವರಿಗೆ ಹಣ ಪಾವತಿ ಮಾಡದೆ ಬಾಕಿ ಉಳಿಸಿದ ಕಾರಣ ಕೆಲಸ ಮಾಡಿದ ಗುತ್ತಿಗೆದಾರರು ಪ್ರೆಸ್ ಕ್ಲಬ್ ಎದುರು ಬಂದು ಗಲಾಟೆ ಮಾಡುವ ಅವಕಾಶಗಳನ್ನು ಮಾಡಿಕೊಟ್ಟಿರುವುದು ಸಂಘದ ದುರಂತವಾಗಿದೆ.

    ಪತ್ರಕರ್ತರು ಸಮಸ್ಯೆಗೊಳಗಾದ ಸಂದರ್ಭದಲ್ಲಿ ಅವರಿಗೆ ಸಹಾಯವಾಗುವ ಉದ್ದೇಶದಿಂದ ಸಂಘದ ಹಿರಿಯ ಪತ್ರಕರ್ತರು ಮೇಘಾ ಪಾಲೆತ್ತಾಡಿ ಅಧ್ಯಕ್ಷ ಮತ್ತು ಸಂಶುದ್ದೀನ್ ಸಂಪ್ಯ ಕಾರ್ಯದರ್ಶಿಯಾಗಿದ್ದ ಅವಧಿಯಲ್ಲಿ ನಾಟಕ ಪ್ರದರ್ಶನ ಕಾರ್ಯಕ್ರಮ ಹಮ್ಮಿಕೊಂಡು, ದಾನಿಗಳಿಂದ ಕಾಡಿಬೇಡಿ ಹಣ ಸಂಗ್ರಹಿಸಿ ಬ್ಯಾಂಕಿನಲ್ಲಿ `ಪತ್ರಕರ್ತರ ಕ್ಷೇಮ ನಿಧಿ’ ಠೇವಣಿಯಾಗಿ ಇರಿಸಿದ್ದರು. ಪ್ರತೀ ಸದಸ್ಯರ ಹೆಸರಿನಲ್ಲಿ ರೂ.25,000 ದಂತೆ ಠೇವಣಿಯಾಗಿ ಇರಿಸಿದ್ದ ಒಟ್ಟು ರೂ.5.75 ಲಕ್ಷ ಹಣವನ್ನು ಸಂಘದ ಬೈಲಾಕ್ಕೆ ವಿರುದ್ಧವಾಗಿ ಖಾಲಿ ಮಾಡುವ ಮೂಲಕ ಸಂಘದ ಆರ್ಥಿಕ ಸ್ಥಿತಿಯನ್ನು ಶೂನ್ಯಕ್ಕೆ ತಲುಪಿಸುವ ಮೂಲಕ ಶ್ರವಣ ಕುಮಾರ್ ಅವರು ಸಂಘವನ್ನು ಬೆಳ್ಳಿಹಬ್ಬದ ಕಾಲಘಟ್ಟದಲ್ಲಿ ಅಧಃಪತನಕ್ಕೆ ತಳ್ಳಿದ್ದಾರೆ.

    ಸಂಘದ ಅಭಿವೃದ್ಧಿಗಾಗಿ ನಯಾಪೈಸೆಯ ಕ್ರೋಢೀಕರಣ ಕಾರ್ಯವನ್ನು ಅವರು ನಡೆಸಿಲ್ಲ. ಕೆಲಸಗಳನ್ನು ಸ್ವತಃ ನಿರ್ವಹಿಸಿದ್ದರೂ ಸಂಘದ ಖಜಾಂಜಿಗೆ ಸರಿಯಾದ ಬಿಲ್ಲುಗಳನ್ನು ನೀಡಿಲ್ಲ. ಸಂಘದ ಖರ್ಚು-ವೆಚ್ಚಗಳಿಗೆ ಪ್ರಧಾನ ಉತ್ತರದಾಯಿತ್ವ ಅಧ್ಯಕ್ಷರಾಗಿದ್ದರೂ ಸರಿಯಾದ ಲೆಕ್ಕಪತ್ರವನ್ನು ಮಂಡಿಸುವ ಕೆಲಸವನ್ನು ಈ ತನಕವೂ ಮಾಡಿಲ್ಲ. ವಾರ್ಷಿಕ ಲೆಕ್ಕಪತ್ರದ ನೆಪದಲ್ಲಿ ಸಂಘದ ಮಹಾಸಭೆ ಮತ್ತು ನೂತನ ಪದಾಧಿಕಾರಿಗಳ ಚುನಾವಣೆಯನ್ನು ವಿವಿಧ ಕಾರಣಗಳನ್ನು ಬಳಸಿಕೊಂಡು ಮುಂದೂಡುತ್ತಲೇ ಬಂದಿದ್ದು, ಈ ದುರುದ್ದೇಶಗಳ ಹಿಂದೆ ಅವ್ಯವಹಾರದ ಸಂಶಯವಿದೆ.

    ಜಿಲ್ಲಾ ಪತ್ರಕರ್ತರ ಸಂಘದ ಚುನಾವಣೆ ಮುಗಿದ ಕೂಡಲೇ ತಾಲೂಕು ಸಂಘದ ಚುನಾವಣೆ ನಡೆಸುವ ಭರವಸೆ ನೀಡಿಕೊಂಡು ಬಂದಿದ್ದ ಅಧ್ಯಕ್ಷ ಶ್ರವಣ ಕುಮಾರ್ ನಾಳ ಅವರು ಜಿಲ್ಲಾ ಸಂಘದ ಚುನಾವಣೆಯಲ್ಲಿ ನಮ್ಮೆಲ್ಲರ ಬೆಂಬಲದಿಂದ ಜಿಲ್ಲಾ ಸಂಘದ ಸದಸ್ಯನಾಗಿ ಆಯ್ಕೆಯಾದ ಬಳಿಕ ತಾನೇ ಪುತ್ತೂರು ಸಂಘದ ಅಧ್ಯಕ್ಷನಾಗಿ ಮುಂದುವರಿಯಬೇಕು ಎಂಬ ದುರುದ್ದೇಶದಿಂದ ಮಹಾಸಭೆ ಮತ್ತು ಚುನಾವಣಾ ಪ್ರಕ್ರಿಯೆಗೆ ಅಡ್ಡಿಪಡಿಸುತ್ತಲೇ ಬಂದಿದ್ದಾರೆ.

    `ನಮಗೆ ಪುತ್ತೂರು ಪ್ರೆಸ್ ಕ್ಲಬ್‍ನಲ್ಲಿ ಜೀವ ಭಯದ ವಾತಾವರಣವಿದೆ’ ಎಂಬ ಕಾರಣ ನೀಡಿ ಸಂಘಕ್ಕೆ ರಾಜೀನಾಮೆ ಸಲ್ಲಿಸಿ ಸಂಘದಿಂದ ಹೊರ ಬಂದಿರುವ, ಸಂಘದ ಬಗ್ಗೆ ಹಲವಾರು ಬಾರಿ ಕೀಳು ಮಟ್ಟದ ವರದಿ ಪ್ರಕಟಿಸಿ, ಸಂಘದ ಸದಸ್ಯರನ್ನು ಭಯೋತ್ಪಾದಕರೆಂದು ಬಿಂಬಿಸುವ ಪ್ರಯತ್ನ ಮಾಡಿದ್ದ ಸ್ಥಳೀಯ ತಾಲೂಕು ಮಟ್ಟದ ಪತ್ರಿಕೆಯ ವರದಿಗಾರರೊಂದಿಗೆ ಹಾಗೂ ಆ ಪತ್ರಿಕೆಯೊಂದಿಗೆ ಗುರುತಿಸಿಕೊಂಡಿರುವ ನಾಲ್ವರು ಪತ್ರಕರ್ತರೊಂದಿಗೆ ಸೇರಿಕೊಂಡು ಅವರು ಸಂಘವನ್ನು ಛಿದ್ರಗೊಳಿಸುತ್ತಿರುವುದು ಆತಂಕಕಾರಿ ವಿಚಾರವಾಗಿದೆ.

    ಪುತ್ತೂರು ತಾಲೂಕು ಪತ್ರಕರ್ತರ ಸಂಘದಲ್ಲಿ ಪ್ರಸ್ತುತ (ಸ್ಥಳೀಯ ಪತ್ರಿಕೆಯೊಂದನ್ನು ಹೊರತುಪಡಿಸಿ) ಉಳಿದೆಲ್ಲಾ ಪತ್ರಿಕೆಗಳ ಹಾಗೂ ದೃಶ್ಯ ಮಾಧ್ಯಮಗಳ ಪ್ರತಿನಿಧಿಗಳು ಸದಸ್ಯರಾಗಿದ್ದಾರೆ. ಒಟ್ಟು 23 ಮಂದಿ ಸದಸ್ಯತ್ವ ಪಡೆದಿದ್ದು, ಪ್ರಸ್ತುತ 18 ಮಂದಿ ಮಾತ್ರ ಸದಸ್ಯರಿದ್ದಾರೆ. ಒಂದು ಮಾಧ್ಯಮದಿಂದ 3 ಮಂದಿಗೆ ಸದಸ್ಯರಾಗಲು ಅವಕಾಶ ಮಾಡಿಕೊಡಲಾಗಿದೆ. ಆದರೆ, ಈಗ ಶ್ರವಣ ಕುಮಾರ್ ಅವರು ಸಂಘದ ಆಡಳಿತವನ್ನು ತನ್ನ ಹಿಡಿತದಲ್ಲಿಟ್ಟುಕೊಳ್ಳಲು ನಾನಾ ಕಸರತ್ತುಗಳನ್ನು ನಡೆಸುತ್ತಿದ್ದಾರೆ. ಸ್ಥಳೀಯ ಪತ್ರಿಕೆಯ ಸುಮಾರು 21 ಮಂದಿಯನ್ನು ಸದಸ್ಯರಾಗಿ ಸೇರಿಸುವ ಪ್ರಯತ್ನ ಮಾಡುತ್ತಿದ್ದಾರೆ. ಪುತ್ತೂರು ಸಂಘದ ಸದಸ್ಯತ್ವ ಪಡೆಯದಿದ್ದರೂ ಜಿಲ್ಲಾ ಸಂಘದ ಸದಸ್ಯರಾದವರಿಗೆ ಇಲ್ಲಿ ಮತ ಚಲಾಯಿಸುವ ಹಕ್ಕು ಇದೆ ಎಂಬ ವಾದವನ್ನು ಮುಂದಿಟ್ಟು ಅವರನ್ನು ಸಂಘದ ಸದಸ್ಯರನ್ನಾಗಿಸುವ ಪ್ರಯತ್ನ ನಡೆಸುತ್ತಿದ್ದಾರೆ.

    ವಿವಿಧ ಮಾಧ್ಯಮಗಳ ಪ್ರತಿನಿಧಿಗಳಾದ 23 ಮಂದಿ ಸದಸ್ಯರನ್ನು ಹೊಂದಿರುವ ಸಂಘಕ್ಕೆ ಸ್ಥಳೀಯ ಪತ್ರಿಕೆಯೊಂದರ 21 ಮಂದಿಯನ್ನು ಸಂಘದ ಸದಸ್ಯರಾಗಿ ಸೇರಿಸಿಕೊಂಡಲ್ಲಿ ಏಕಪಕ್ಷೀಯ ಆಡಳಿತ ವ್ಯವಸ್ಥೆಗೆ ಅವಕಾಶವಾಗುದಿಲ್ಲವೇ? ಇಂತಹ ಸ್ಥಿತಿ ನಿರ್ಮಾಣವಾದರೆ ಬೇರೆ ಪತ್ರಿಕೆಯವರಿಗೆ ಅವಕಾಶ ಹಾಗೂ ಅವರ ಅಭಿಪ್ರಾಯಗಳಿಗೆ ಮನ್ನಣೆ ಸಿಗಲು ಸಾಧ್ಯವೇ? ಈ ಬಗ್ಗೆ ತಾವುಗಳು ತೀರ್ಮಾನ ಕೈಗೊಳ್ಳಬೇಕಾಗಿದೆ.

    ನಮ್ಮ ಬೇಡಿಕೆ: ಸಂಘದ ವಿರುದ್ದ ಹಾಗೂ ಸದಸ್ಯರ ವಿರುದ್ದ ನಿರಂತರವಾಗಿ ಸುಳ್ಳು ವರದಿಗಳನ್ನು ಪ್ರಕಟಿಸುತ್ತಾ, ಭಯೋತ್ಪಾದನಾ ಸಂಘ ಎಂದು ಬಿಂಬಿಸುತ್ತಾ ಸಮಾಜದಲ್ಲಿ ತಪ್ಪು ಅಭಿಪ್ರಾಯ ಮೂಡಿಸುತ್ತಿರುವ ಸ್ಥಳೀಯ ಪತ್ರಿಕೆಯ ಸದಸ್ಯರನ್ನು ಮತ್ತೆ ಸಂಘದ ಸದಸ್ಯರನ್ನಾಗಿ ಸೇರಿಸಿಕೊಳ್ಳುವುದಕ್ಕೆ ನಮ್ಮ ಆಕ್ಷೇಪವಿದೆ. ಆದರೂ ಸಾಮಾಜಿಕ ನ್ಯಾಯಕ್ಕೆ ಬೆಲೆ ನೀಡಿ ಸಂಘದಲ್ಲಿ ಈ ತನಕ ನೀಡಿರುವಂತೆ ಯಾವುದೇ ಒಂದು ಅಧಿಕೃತ ಪತ್ರಿಕಾ ಸಂಸ್ಥೆಯಿಂದ ಮೂವರಿಗೆ ಮತ್ತು ಟಿವಿ ಮಾಧ್ಯಮದಿಂದ ಇಬ್ಬರಿಗೆ ಅವಕಾಶ ನೀಡುವುದಕ್ಕೆ ನಮ್ಮ ಆಕ್ಷೇಪಗಳಿಲ್ಲ.

    ಸಂಘದಲ್ಲಿ ಗೊಂದಲ ಸೃಷ್ಟಿಸುತ್ತಿರುವ ಹಾಗೂ ಸಂಘದ ಹೆಸರಿಗೆ ಕಪ್ಪು ಚುಕ್ಕೆ ತರುವ ಕೆಲಸ ಮಾಡುತ್ತಿರುವವರಿಗೆ ಸೂಕ್ತ ಸೂಚನೆಯನ್ನು ನೀಡಿ, ಪ್ರಸ್ತುತವಿರುವ ಸಂಘದ ಸದಸ್ಯರ ಉಪಸ್ಥಿತಿಯಲ್ಲಿ ಲೆಕ್ಕಪತ್ರ ಮಂಡಿಸುವ ಹಾಗೂ ಚುನಾವಣೆ ನಡೆಸುವ ಮೂಲಕ ಸಮಸ್ಯೆ ಬಗೆಹರಿಸುತ್ತೀರಿ ಎಂದು ನಂಬುತ್ತೇವೆ.

    Share Information
    Advertisement
    Click to comment

    You must be logged in to post a comment Login

    Leave a Reply