KARNATAKA
ಸಾಲದ ಸುಳಿಯಲ್ಲಿ ರಾಜ್ಯ ಸರ್ಕಾರ : ಮತದಾರನ ತಲೆಯ ಮೇಲೆ ತಲಾ 38,000 ಸಾಲ

ಸಾಲದ ಸುಳಿಯಲ್ಲಿ ರಾಜ್ಯ ಸರ್ಕಾರ : ಮತದಾರನ ತಲೆಯ ಮೇಲೆ ತಲಾ 38,000 ಸಾಲ
ಬೆಂಗಳೂರು,ಡಿಸೆಂಬರ್ 10 : ರಾಜ್ಯದ ಆಡಳಿತದ ಚುಕ್ಕಾಣಿ ಹಿಡಿದಿರುವ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಬಜೆಟ್ ಘೋಷಣೆ ಹೊರತಾಗಿಯೂ ಅನೇಕ ಜನಪ್ರಿಯ ಯೋಜನೆಗಳನ್ನು ಯಶಸ್ವಿಯಾಗಿ ಜಾರಿಗೆತಂದಿದೆ.
ಆದರೆ ಅದಕ್ಕೆ ಪೂರಕವಾಗಿ ಆದಾಯ ಸಂಗ್ರಹಣೆಯಲ್ಲಿ ಸರ್ಕಾರ ಸಂಪೂರ್ಣವಾಗಿ ಎಡವಿದೆ.

ಈ ಕಾರಣಗಳಿಂದಾಗಿ ರಾಜ್ಯ ಸರ್ಕಾರದ ಸಾಲದ ಮೊತ್ತ ಪ್ರಸಕ್ತ ಹಣಕಾಸು ವರ್ಷದ ಅಂತ್ಯಕ್ಕೆ 2.50 ಲಕ್ಷ ಕೋಟಿ ರೂ. ದಾಟುವ ಆತಂಕ ಎದುರಾಗಿದೆ.
ಈ ಸಾಲದ ಮೊತ್ತ ಈ ಪ್ರಮಾಣಕ್ಕೆ ಏರಿಕೆಯಾದರೆ ರಾಜ್ಯದ ಪ್ರತಿಯೊಬ್ಬ ಮತದಾರನ ತಲೆಯ ಮೇಲೆ ಸುಮಾರು 38 ಸಾವಿರ ರೂ.ಗಿಂತ ಹೆಚ್ಚು ಸಾಲದ ಹೊರೆ ಬೀಳಲಿದೆ.
2017-18ನೇ ಸಾಲಿನಲ್ಲಿ 1,86,561 ಕೋಟಿ ರೂ.ನ ಬಜೆಟ್ ಮಂಡಿಸಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಇದನ್ನು ಕಾರ್ಯರೂಪಕ್ಕೆ ತರಲು 1,44,892 ಕೋಟಿ ರೂ. ರಾಜಸ್ವ ಜಮೆಗಳ ಜತೆಗೆ 37,092 ಕೋಟಿ ರೂ. ಸಾಲ ಮಾಡುವ ಬಗ್ಗೆ ಪ್ರಸ್ತಾಪಿಸಿದ್ದರು.
ಆದರೆ ನಿರೀಕ್ಷಿತ ಆದಾಯ ವಸೂಲತಿ ಹಾಗೂ ವಿಪರೀತ ಖರ್ಚುವೆಚ್ಚಗಳಿಂದ ಈ ಸಾಲದ ಪ್ರಮಾಣ ಈ ವರ್ಷ 45 ಸಾವಿರ ಕೋಟಿ ರೂ. ದಾಟುವ ನಿರೀಕ್ಷೆ ಇದೆ.
ಇನ್ನೊಂದೆಡೆ ಮುಖ್ಯಮಂತ್ರಿ ಅನಿಲ ಭಾಗ್ಯ ಯೋಜನೆ, ಇಂದಿರಾ ಕ್ಯಾಂಟೀನ್ ಯೋಜನೆ ರಾಜ್ಯಾದ್ಯಂತ ವಿಸ್ತರಣೆ ಅನೇಕ ಜನಪ್ರಿಯ ಯೋಜನೆಗಳನ್ನು ಸರ್ಕಾರ ಘೋಷಿಸಿದೆ.
ಇದರಿಂದ ಬಜೆಟ್‌ನಲ್ಲಿ ಮೀಸಲಿಟ್ಟ ಅನುದಾನ ಹೊರತಾಗಿ ಹೆಚ್ಚಿನ ಮೊತ್ತವನ್ನು ಒದಗಿಸಬೇಕಾಗಿದೆ.
ರಾಜ್ಯದಲ್ಲಿ ಕಳೆದ ನಾಲ್ಕು ವರ್ಷ ಸತತ ಬರಗಾಲ ವ್ಯಾಪಿಸಿದ್ದ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಸಹಕಾರ ಬ್ಯಾಂಕ್‌ಗಳ ಮೂಲಕ ರೈತರು ಮಾಡಿದ್ದ 50 ಸಾವಿರ ರೂ.ವರೆಗಿನ ಸಾಲ ಮನ್ನಾ ಮಾಡಿದ್ದು, ಇದರಿಂದ ಬೊಕ್ಕಸದ ಮೇಲೆ 8165 ಕೋಟಿ ರೂ. ಹೆಚ್ಚುವರಿ ಹೊರೆ ಬಿದ್ದಿದೆ.
ಮುಂದಿ ವರ್ಷ ಚುನಾವಣೆಯ ವರ್ಷ ಆದ್ದರಿಂದ ಈ ಬಾರಿ ಸರ್ಕಾರಕ್ಕೆ ಹೆಚ್ಚುವರಿ ವೆಚ್ಚದ ಅನಿವಾರ್ಯತೆ ಸೃಷ್ಟಿಯಾಗಿರುವುದರಿಂದ ಸಾಲ ಮಾಡಲೇಬೇಕಾದ ಅನಿವಾರ್ಯ ಪರಿಸ್ಥಿತಿ ನಿರ್ಮಾಣವಾಗಿದೆ ಎನ್ನುತ್ತವೆ ಆರ್ಥಿಕ ಇಲಾಖೆ ಮೂಲಗಳು.
ಈಗಾಗಲೇ ಸರ್ಕಾರದ ಮೇಲೆ 2.05 ಲಕ್ಷ ಕೋಟಿ ಸಾಲವಿದೆ. ಪ್ರಸಕ್ತ ಆರ್ಥಿಕ ಸಾಲಿನಲ್ಲಿ 37,092 ಸಾವಿರ ಕೋಟಿ ಸಾಲ ಮಾಡುವ ಬಗ್ಗೆ ಪ್ರಸ್ತಾಪಿಸಲಾಗಿದ್ದು, ಆಗ ವರ್ಷಾಂತ್ಯಕ್ಕೆ ಸಾಲದ ಮೊತ್ತ 2,42,420 ಕೋಟಿ ರೂ. ತಲುಪಲಿದೆ ಎಂಬ ನಿರೀಕ್ಷೆ ಹೊಂದಲಾಗಿತ್ತು.
ಆದರೆ, ಈಗ ಆಗಿರುವ ಮತ್ತು ಮುಂದೆ ಆಗಲಿರುವ ಹೆಚ್ಚುವರಿ ವೆಚ್ಚ ಹೊಂದಾಣಿಕೆ ಮಾಡಲು ಇತರೆ ಇಲಾಖೆಗಳಿಗೆ ನೀಡಿರುವ ಅನುದಾನ ಕಡಿತಗೊಳಿಸಬೇಕಾಗುತ್ತದೆ.
ಶೀಘ್ರದಲ್ಲೇ ಚುನಾವಣೆ ಬರುತ್ತಿರುವುದರಿಂದ ಅನುದಾನ ಕಡಿತಗೊಳಿಸಿದರೆ ರಾಜಕೀಯವಾಗಿ ಸಮಸ್ಯೆ ಎದುರಿಸಬೇಕಾಗುತ್ತದೆ. ಹೀಗಾಗಿ ಹೆಚ್ಚುವರಿ ಸಾಲ ಪಡೆದೇ ಯೋಜನೆಗಳಿಗೆ ಹಣ ಒದಗಿಸಬೇಕು.
ಇದರಿಂದ ಸಾಲದ ಮೊತ್ತ 2.5 ಲಕ್ಷ ರೂ. ಮೀರಬಹುದು ಎಂದು ಅಂದಾಜಿಸಲಾಗಿದೆ.
2013ರಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಾಗ ಇದ್ದ ಸಾಲ- 1.12 ಲಕ್ಷ ಕೋಟಿ ರೂ. ಇದ್ದ ಸಾಲ 2017-18ರ ಅಂತ್ಯಕ್ಕೆ – 2.42 ಲಕ್ಷ ಕೋಟಿ ರೂ.ಆಗಲಿದೆ.