Connect with us

LATEST NEWS

ಶ್ರೀ ರಾಮ ವೈಭವ ಕಾರ್ಯಕ್ರಮದ ಉದ್ಘಾಟನೆ -ರಾಷ್ಟ್ರ ಕಾರ್ಯದಿಂದ ರಾಮರಾಜ್ಯ ಸಾಧ್ಯ – ಚಕ್ರವರ್ತಿ ಸೂಲಿಬೆಲೆ

ಮಂಗಳೂರು ಜನವರಿ 10: ವಿಭಿನ್ನ ಪರಂಪರೆಯನ್ನು ಹೊಂದಿರುವ ಭರತ ಖಂಡವನ್ನು ಆಳಿದ ಅದೆಷ್ಟೋ ಪುಣ್ಯಾತ್ಮರು ಭವ್ಯ ಪರಂಪರೆಯನ್ನು ಈ ಮಣ್ಣಿಗೆ ಅರ್ಪಿಸಿದ್ದಾರೆ. ಅಯೋಧ್ಯೆಯನ್ನು ಆಳಿದ ಶ್ರೀರಾಮ ಕೇವಲ ರಾಜನಾಗಿರಲಿಲ್ಲ ಧರ್ಮಪ್ರಜ್ಞೆಯದ್ಯೋತಕನಾಗಿದ್ದನು. ಭಾರತಕ್ಕೆ ಶ್ರೀರಾಮ ಹೆಸರೇ ಸಕಲರನ್ನು ಒಂದುಗೂಡಿಸುವಂತೆ,ಧರ್ಮದ ಜಾಗೃತಿಯನ್ನು ಎಚ್ಚರಿಸಿ ಭಕ್ತಿಯ ಪರಾಕಾಷ್ಠೆಯಲ್ಲಿ ಮಿಂದೇಳುವ ಅಪರಿಮಿತ ಆನಂದವನ್ನು ಉಂಟುಮಾಡುತ್ತದೆ ಎಂದು ನಾಡಿನ ಖ್ಯಾತ ಚಿಂತಕ, ವಾಗ್ಮಿಶ್ರೀ ಚಕ್ರವರ್ತಿ ಸೂಲಿಬೆಲೆಯವರು ಹೇಳಿದರು.

ಕೆನರಾ ಕಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿರುವ ಶ್ರೀ ಕೃಷ್ಣ ಮಂದಿರದಲ್ಲಿ ಕೆನರಾ ಸಮೂಹ ಶಿಕ್ಷಣ ಸಂಸ್ಥೆಗಳ ವತಿಯಿಂದ ನಡೆದ ಶ್ರೀರಾಮ ವೈಭವ ಕಾರ್ಯಕ್ರಮದ ಉದ್ಘಾಟನೆಯನ್ನು ನೆರವೇರಿಸಿ ಅವರು ಮಾತನಾಡುತ್ತಿದ್ದರು. ದಿನಾಂಕ 22/01/2024ರಂದು ಅಯೋಧ್ಯೆಯಲ್ಲಿ ನಡೆಯುವ ಐತಿಹಾಸಿಕ ಶ್ರೀ ರಾಮ ಮಂದಿರದ ಲೋಕಾರ್ಪಣೆ ಮತ್ತು ಭಗವಾನ್ ಶ್ರೀರಾಮನ ಪ್ರಾಣಪ್ರತಿಷ್ಠೆ ಕಾರ್ಯಕ್ರಮ ದೇಶದಾದ್ಯಂತ ಹೊಸ ಸಂಚಲನವನ್ನು ಉಂಟುಮಾಡಿದೆ.

ಕೆನರಾ ಸಮೂಹ ಶಿಕ್ಷಣ ಸಂಸ್ಥೆಗಳ ಆಡಳಿತ ಮಂಡಳಿಯೂ ಕೂಡ ಈ ನಿಟ್ಟಿನಲ್ಲಿ ಅನೇಕ ಕಾರ್ಯಕ್ರಮಗಳನ್ನು ಯೋಜಿಸಿಕೊಂಡಿದ್ದು ಶ್ಲಾಘನೀಯವಾಗಿದೆ.  ಹಿಂದುಗಳ ಬಹುದೇವತಾರಾಧನೆಯಲ್ಲಿ ಭಕ್ತಿಯೇ ಪ್ರಧಾನವಾಗಿದ್ದು ಯಾವುದೇ ಅಸೂಯೆ ಅಸಮಾಧಾನಗಳಿಗೆ ಅವಕಾಶವಿಲ್ಲ. ಇಲ್ಲಿ ಭಕ್ತಿಯ ಶಿಖರ ಕೇಂದ್ರ ಒಂದೇ ಆಗಿದೆ. ಶ್ರೀರಾಮ ನಮ್ಮೆಲ್ಲರ ಮನ ಮಂದಿರದಲ್ಲಿ ನೆಲೆಗೊಂಡು ಪೂಜೆಗೆ ಭಾಜನನಾದವನು. ಸಹಸ್ರಾರು ವರ್ಷಗಳ ಮಂದಿರ ಆಕ್ರಮಣಕಾರರ ವಿಕ್ಷಿಪ್ತ ಮನಸ್ಥಿತಿಗೆ ನಾಶವಾಗಿ ಹೋದರೂ ಆತ್ಮದಲ್ಲಿ ನೆಲೆಗೊಂಡ ರಾಮ ಭಕ್ತಿಯನ್ನು ನಾಶಗೊಳಿಸಲು ಸಾಧ್ಯವಾಗಲಿಲ್ಲ ಎಂಬುದಕ್ಕೆ ಅಯೋಧ್ಯೆಯ ರಾಮನ ಮಂದಿರದ ಪುನರ್ ನಿರ್ಮಾಣ ಹಾಗೂ ಪ್ರಾಣ ಪ್ರತಿಷ್ಠೆಯ ಕಾರ್ಯಕ್ರಮವೇ ಸಾಕ್ಷಿ.ಈ ರಾಮೋತ್ಸವ ಭಾರತೀಯರಲ್ಲಿ ಭರವಸೆ ,ಹೊಸ ಆಲೋಚನೆ, ಸಕಾರಾತ್ಮಕ ಚಿಂತನೆ, ತಾದಮ್ಯಭಕ್ತಿಯನ್ನು ಅನುರಣಿಸುವಂತೆ ಮಾಡುತ್ತಿರುವುದು ಅದ್ಭುತವೇ ಆಗಿದೆ.

ಶ್ರೀರಾಮನ ಸರಳ ಬದುಕು, ಆದರ್ಶ ಚಿಂತನೆಗಳು, ಗುಣಗಳು, ಗುರು ಭಕ್ತಿ, ಧರ್ಮ ಸಂಕಟಗಳನ್ನು ಪರಿಹರಿಸುತ್ತಿದ್ದ ರೀತಿ, ಸಹೋದರತ್ವ, ಜನರ ಮನಸ್ಸಿನಲ್ಲಿ ನೆಲೆಗೊಳ್ಳುವ ರೀತಿ ಹೀಗೆ ಅಸಾಧಾರಣ ವಿಚಾರಗಳನ್ನು ನಮ್ಮೊಳಗೆ ಧಾರಣೆ ಮಾಡಿಕೊಂಡಾಗ ಅಸಂತುಷ್ಟ ಮನಸ್ಸು ಪರಿವರ್ತನೆಗೊಳ್ಳುತ್ತದೆ.ಸ್ವಕಾರ್ಯಕ್ಕಿಂತ ರಾಷ್ಟ್ರ ಕಾರ್ಯಕ್ಕೆ ಆಂಜನೇಯನಂತೆ ನಮ್ಮೊಳಗಿನ ಅಗಾಧ ಶಕ್ತಿಯನ್ನು ವ್ಯಹಿಸಿದಾಗ ರಾಮ ರಾಜ್ಯದ ಕಲ್ಪನೆ ಸಾಕಾರಗೊಂಡು ಪರಮ ವೈಭವದ ಕಡೆಗೆ ಭಾರತ ಸಾಗುವುದರಲ್ಲಿ ಸಂಶಯವಿಲ್ಲ ಎಂದು ಅವರು ಈ ಸಂದರ್ಭದಲ್ಲಿ ಹೇಳಿದರು. ಶಾಲಾ ವಿದ್ಯಾರ್ಥಿಗಳಿಂದ ಭಜನಾ ಕಾರ್ಯಕ್ರಮ ನೆರವೇರಿತು.

Share Information
Continue Reading
Advertisement
Click to comment

Leave a Reply

Your email address will not be published. Required fields are marked *