ಮೂಡಬಿದಿರೆ ಮೇ 29: ಎರಡು ಮಕ್ಕಳ ತಾಯಿ ಹಾಗೂ ಆಕೆಯ ಪ್ರಿಯಕರ ಬಾವಿಗೆ ಹಾರಿ ಆತ್ಮಹತ್ಯೆಗೆ ಶರಣಾದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಮೂಡಬಿದಿರೆ ತಾಲೂಕಿನ ಬಡಗಮಿಜಾರು ಮರಕಡ ಎಂಬಲ್ಲಿ ನಡೆದಿದೆ.

ಮೃತರನ್ನು ಮೂಡಬಿದಿರೆ ಬಡಗಮಿಜಾರು ನಿವಾಸಿ ವಿವಾಹಿತೆ ನಮಿಕ್ಷಾ ಶೆಟ್ಟಿ (29) ಹಾಗೂ ಆಕೆಯ ಪ್ರಿಯಕರ ಬಾಗಲಕೋಟೆ ಮೂಲದ, ಸದ್ಯ ನಿಡ್ಡೋಡಿ ನಿವಾಸಿ ಪ್ರಶಾಂತ್ ಮೃತಪಟ್ಟವರು.
ನಮೀಕ್ಷಾ ಶೆಟ್ಟಿಗೆ ವಿವಾಹವಾಗಿದ್ದು, ಇಬ್ಬರು ಪುಟ್ಟ ಗಂಡು ಮಕ್ಕಳಿದ್ದಾರೆ. ಇವರ ಪತಿ ಪುಣೆಯಲ್ಲಿ ಕೆಲಸ ಮಾಡುತ್ತಿದ್ದಾರೆ. ನಮೀಕ್ಷಾಗೆ ಪತಿಯೊಂದಿಗೆ ಸಂಸಾರ ಸರಿಬಾರದೇ, ತನ್ನ ಮಕ್ಕಳೊಂದಿಗೆ ತವರು ಮನೆಯಲ್ಲಿಯೇ ವಾಸವಾಗಿದ್ದರು. ಈ ನಡುವೆ, ನಮೀಕ್ಷಾಗೆ ಇನ್ಸ್ಟಾಗ್ರಾಂ ಮೂಲಕ ಪ್ರಶಾಂತ್ನ ಪರಿಚಯವಾಗಿತ್ತು. ಪ್ರಶಾಂತ್ಗೆ ಮದುವೆಯಾಗಿ ವಿಚ್ಛೇದನ ಕೂಡ ಆಗಿತ್ತು ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಪ್ರಿಯಕರ ಪ್ರಶಾಂತ್ ಆಗಾಗ ನಮೀಕ್ಷಾ ಶೆಟ್ಟಿ ಮನೆಗೆ ಬಂದು ಹೋಗುತ್ತಿದ್ದ. ಬುಧವಾರ ಮನೆಯಲ್ಲಿ ಯಾರೂ ಇಲ್ಲದ ವೇಳೆ ಬಂದಿದ್ದು, ಈ ಸಂದರ್ಭ ಇಬ್ಬರ ನಡುವೆ ಜಗಳವಾಗಿದೆ. ಈ ವೇಳೆ ಆಕೆ ಯಾವುದೋ ಕಾರಣಕ್ಕೆ ಬಾವಿಗೆ ಹಾರಿದ್ದಾಳೆ. ಅದರ ಬೆನ್ನಿಗೆ ಪ್ರಶಾಂತ್ ಕೂಡ ಬಾವಿಗೆ ಜಿಗಿದಿದ್ದಾನೆ ಎಂಬ ಮಾಹಿತಿ ಇದೆ ಎಂದು ಪೊಲೀಸರು ತಿಳಿಸಿದ್ದಾರೆ.
ಮಾಹಿತಿ ತಿಳಿದು ಸ್ಥಳಕ್ಕೆ ಬಂದ ಅಗ್ನಿಶಾಮಕ ಸಿಬ್ಬಂದಿ ಮೃತದೇಹಗಳನ್ನು ಬಾವಿಯಿಂದ ಮೇಲೆತ್ತಿದ್ದಾರೆ. ಈ ಬಗ್ಗೆ ಮೂಡುಬಿದಿರೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.