LATEST NEWS
ಕಾಂಗ್ರೇಸ್ ಪಕ್ಷದ ವಿವಿಧ ಹುದ್ದೆಗಳಿಗೆ ಮುಸ್ಲಿಂ ಮುಖಂಡರ ರಾಜೀನಾಮೆಗೆ ಕಾರ್ಯಕರ್ತರ ಆಗ್ರಹ – ಗದ್ದಲಕ್ಕೆ ಕಾರಣವಾದ ಸಭೆ

ಮಂಗಳೂರು ಮೇ 29: ಬಂಟ್ವಾಳದ ರಹಿಮಾನ್ ಹತ್ಯೆ ಬೆನ್ನಲ್ಲೇ ದಕ್ಷಿಣ ಕನ್ನಡ ಜಿಲ್ಲೆಯ ಮುಸ್ಲಿಂ ಮುಖಂಡರು ಶಾದಿ ಮಹಲ್ ಸಭಾಂಗಣದಲ್ಲಿ ಸಭೆ ನಡೆಸಿದರು. ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಶಾಹುಲ್ ಹಮೀದ್ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಸಾಮೂಹಿಕ ರಾಜೀನಾಮೆ ನೀಡುವ ಬಗ್ಗೆ ಚರ್ಚೆ ನಡೆಯಿತು.
ಇದೇ ವೇಳೆ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಶಾಹುಲ್ ಹಮೀದ್ ಅವರು ಸಾಮೂಹಿಕ ರಾಜೀನಾಮೆಯಿಂದ ಹಿಂದೆ ಸರಿದಿದ್ದಾರೆ. ಸಿಎಂ ಸಿದ್ದರಾಮಯ್ಯ ಸೂಚನೆ ಹಿನ್ನೆಲೆಯಲ್ಲಿ ಒಂದು ವಾರ ಮುಂದೂಡುವುದಾಗಿ ಹೇಳಿದ್ದಾರೆ. ಈ ಹೇಳಿಕೆ ಬೆನ್ನಲ್ಲೇ ನೆರೆದಿದ್ದ ಮುಸ್ಲಿಮರು ಆಕ್ರೋಶಗೊಂಡಿದ್ದಾರೆ.ರಾಜೀನಾಮೆ ಕೊಡಲೇ ಬೇಕು ಎಂದು ಪಟ್ಟು ಹಿಡಿದರು. ಇಡೀ ಸಭೆ ಕಾರ್ಯಕರ್ತರ ಆಕ್ರೋಶಕ್ಕೆ ಕಾರಣವಾಯಿತು.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಭೀಕರ ಹತ್ಯೆಗಳ ಬೆನ್ನಿಗೆ ಕಾಂಗ್ರೆಸ್ ರಾಜೀನಾಮೆ ಪ್ರಕಟಿಸಲು ದ.ಕ ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತ ಮುಖಂಡರು ಗುರುವಾರ ನಗರದ ಬೋಳಾರದಲ್ಲಿರುವ ಶಾದಿಮಹಲ್‌ನ ಸಭಾಂಗಣದಲ್ಲಿ ಸಭೆ ಕರೆದಿದ್ದರು. ಕೊಳತ್ತಮಜಲ್ ನಲ್ಲಿ ದುಷ್ಕರ್ಮಿಗಳಿಂದ ಹತ್ಯೆಯಾದ ಅಬ್ದುಲ್ ರಹ್ಮಾನ್ ಅವರ ಅಂತ್ಯಸಂಸ್ಕಾರದ ವಿಧಿ ವಿಧಾನಗಳು ನಡೆಯುತ್ತಿದ್ದಂತೆ ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತ ಮುಖಂಡರು ರಾಜೀನಾಮೆ ನೀಡುವುದಾಗಿ ಸಾಮಾಜಿಕ ಜಾಲತಾಣಗಳಲ್ಲಿ ಪ್ರಕಟಿಸಿದ್ದರು. ಅದರಂತೆ ಗುರುವಾರ ಸಭೆ ಸೇರಿದಾಗ ಮುಖಂಡರು ಮಾತು ಬದಲಿಸಿ ಒಂದು ವಾರ ರಾಜೀನಾಮೆಯನ್ನು ಮುಂದೆ ಹಾಕಿ ಕಾದು ನೋಡುವ ತಂತ್ರದ ಮೊರೆ ಹೋಗಿರುವುದು, ಸಭೆಯಲ್ಲಿ ನೆರೆದಿದ್ದ ಕಾರ್ಯಕರ್ತರ ಆಕ್ರೋಶಕ್ಕೆ ಕಾರಣವಾಯಿತು.
ನಾವು ರಾಜೀನಾಮೆ ನೀಡುವ ತೀರ್ಮಾನದಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ ಎಂದು ಕಾರ್ಯಕರ್ತರು ಪಟ್ಟು ಹಿಡಿದಿದ್ದರಿಂದ ಸಭಾಂಗಣದಲ್ಲಿ ಏನು ನಡೆಯುತ್ತಿದೆ ಎಂದು ಯಾರಿಗೂ ಕೇಳಿಸದಷ್ಟು ಗದ್ದಲವುಂಟಾಯಿತು. ಕಾರ್ಯಕರ್ತರನ್ನು ಸಮಾಧಾನ ಪಡಿಸಲು ಮುಖಂಡರು ಹರಸಾಹಸ ಪಟ್ಟರು. ಕಾರ್ಯಕರ್ತರ ಆಕ್ರೋಶಕ್ಕೆ ಮಣಿದು ಮುಸ್ಲಿಂ ಮುಖಂಡರು ಒಬ್ಬಬ್ಬರಾಗಿಯೇ ರಾಜೀನಾಮೆ ಘೋಷಣೆ ಮಾಡಿದರು. ಸುಹೇಲ್ ಕಂದಕ್ ಮೊದಲು ಹುದ್ದೆಗೆ ರಾಜೀನಾಮೆ ಘೋಷಿಸಿದರು. ಆ ಬಳಿಕ ಶಾಹುಲ್ ಹಮೀದ್, ಎಂ.ಎಸ್. ಮುಹಮ್ಮದ್ ಸೇರಿದಂತೆ ಒಬ್ಬೊಬ್ಬರಾಗಿ ರಾಜೀನಾಮೆ ಘೋಷಿಸಿದರು.