LATEST NEWS
ಸಾಮಾಜಿಕ ಜಾಲತಾಣಗಳು ಅಣುಬಾಂಬುಗಳು : ಡಾ.ನಾಗತಿಹಳ್ಳಿ ಚಂದ್ರಶೇಖರ್
ಸಾಮಾಜಿಕ ಜಾಲತಾಣಗಳು ಅಣುಬಾಂಬುಗಳು : ಡಾ.ನಾಗತಿಹಳ್ಳಿ ಚಂದ್ರಶೇಖರ್
ಮೂಡಬಿದಿರೆ,ಡಿಸೆಂಬರ್ 01:ಇಂದಿನ ವಿಜ್ಞಾನ ತಂತ್ರಜ್ಞಾನದ ಯುಗದಲ್ಲಿ ಸಾಮಾಜಿಕ ಜಾಲತಾಣಗಳನ್ನು ಸಾಂಸ್ಕೃತಿಕ ಜಾಲತಾಣಗಳಾಗಿ ಪರಿವರ್ತಿಸದಿದ್ದರೆ, ಉಳಿಗಾಲವಿಲ್ಲ ಎಂದು ಖ್ಯಾತ ಚಲನಚಿತ್ರ ನಿರ್ದೇಶಕ ಡಾ. ನಾಗತಿಹಳ್ಳಿ ಚಂದ್ರಶೇಖರ್ ಆತಂಕ ವ್ಯಕ್ತಪಡಿಸಿದ್ದಾರೆ.
ಮೂಡಬಿದ್ರೆಯಲ್ಲಿ ಆರಂಭಗೊಂಡಿರುವ 14ನೇ ಆಳ್ವಾಸ್ ನುಡಿಸಿರಿ ಸಮ್ಮೇಳನಾಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಕನ್ನಡ ನಾಡು ನುಡಿ ಜಲದ ಕುರಿತ ಗಂಭೀರ ಚಿಂತನೆಗಳಿಗೆ ವೇದಿಕೆಯಾಗುವ ಆಳ್ವಾಸ್ ನುಡಿಸಿರಿ ರಾಷ್ಚ್ರೀಯ ಸಮ್ಮೇಳನಕ್ಕೆ ಇಂದು ಚಾಲನೆ ನೀಡಲಾಗಿದೆ.
ಜೈನಕಾಶಿ ಮೂಡಬಿದ್ರೆಯಲ್ಲಿ 3 ದಿನಗಳ ಕಾಲ ನಡೆಯುವ ಆಳ್ವಾಸ್ ನುಡಿಸಿರಿ ಸಮ್ಮೇಳನಕ್ಕೆ ಖ್ಯಾತ ವಿಮರ್ಶಕ ಡಾ. ಸಿ.ಎನ್. ರಾಮಚಂದ್ರ ಉದ್ಘಾಟಿಸಿದರು.
ಕರ್ನಾಟಕ ಬಹುತ್ವದ ನೆಲೆಗಳು ಪರಿಕಲ್ಪನೆಯಡಿ ನಡೆಯುತ್ತಿರುವ ಈ ಸಮ್ಮೇಳನದ ಸಮ್ಮೇಳನಾಧ್ಯಕ್ಷರಾಗಿ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಸಾಹಿತಿ ಮತ್ತು ಚಲನಚಿತ್ರ ನಿರ್ದೇಶಕರಾದ ಡಾ. ನಾಗತಿಹಳ್ಳಿ ಚಂದ್ರಶೇಖರ್ ತಮ್ಮ ಭಾಷಣದುದ್ದಕ್ಕೂನ ಬಹುತ್ವದ ನೆಲೆಗಳ ಮಹತ್ವ ಬಗ್ಗೆ ಬೆಳಕು ಚೆಲ್ಲಿದರು.
ಬಹುತ್ವವು ಶಕ್ತಿಯ ಮೂಲವಾಗಿದ್ದು , ಈ ಶಕ್ತಿಯ ಮೂಲವನ್ನು ಛಿದ್ರಗೊಳಿಸಬಾರದು , ಧ್ರುವೀಕರಣದಿಂದಾಗುವ ಅಪಾಯ ನಮ್ಮ ಬಹುತ್ಪದ ಶಕ್ತಿ ಮೂಲವನ್ನು ನಾಶ ಮಾಡುವುದೆಂದು ಅವರು ಹೇಳಿದರು.
ಬಹುತ್ವದ ಸಮಾಜ ನಾಶವಾದರೆ ಇಡಿ ಜನಾಂಗವೇ ನಾಶವಾದಂತೆ ಎಂದು ಅವರು ಅಭಿಪ್ರಾಯ ಪಟ್ಟರು. ಇಂದಿನ ಮಾಹಿತಿ ತಂತ್ರಜ್ಞಾನದ ಯುಗದಲ್ಲಿ ಚಹಾಕಪ್ಪಿನ ಕ್ರಾಂತಿಯಂತಹ ಪರಿಸ್ಥಿತಿ ನಿರ್ಮಾಣವಾಗಿದೆ.
ಸಾಮಾಜಿಕ ಜಾಲತಾಣಗಳು ವಿಷ ಬೀಜ ಬಿತ್ತುವ ಸಾಧನಗಳಾಗಿ ಬಳಕೆಯಾಗುತ್ತಿದೆ.
ಸಾಮಾಜಿಕ ಜಾಲತಾಣಗಳು ಸಾಂಸ್ಕೃತಿಕ ಜಾಲತಾಣಗಳಾಗಿ ಪರಿವರ್ತಿಸದಿದ್ದರೆ ಉಳಿಗಾಲವಿಲ್ಲ ಎಂದು ಅವರು ಆತಂಕ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಸಮೇಳನವನ್ನು ಉದ್ಘಾಟಿಸಿ ಮಾತನಾಡಿದ ಖ್ಯಾತ ವಿಮರ್ಶಕ ಡಾ. ಸಿ.ಎನ್ ರಾಮಚಂದ್ರ ಭಿನ್ನ ಸಂಸ್ಕೃತಿಯ, ಧರ್ಮಗಳ ಸಹಭಾಳ್ವೆ ಭಾರತೀಯತೆಯಲ್ಲಿ ಹಾಸು ಹೊಕ್ಕಿದೆ ಎಂದು ಹೇಳಿದರು.
ಸಮಾಜದಲ್ಲಿ ಅಸ್ಮಿತೆ ಹಾಗೂ ಅಧಿಕಾರ ಎದುರಾದಾಗ ಸಾಹಿತಿ, ಚಿತ್ರಾಕಾರರು ಸಮಸ್ಯೆ ಎದುರಿಸಬೇಕಾಗಿದೆ ಎಂದು ಅವರು ಆತಂಕ ವ್ಯಕ್ತಪಡಿಸಿದರು.
ಇದಕ್ಕೆ ಉತ್ತಮ ಉದಾಹರಣೆ ಪದ್ಮಾವತಿ ಚಿತ್ರಕ್ಕೆ ಕೇಳಿ ಬರುತ್ತಿರುವ ವಿರೋಧಗಳು ಎಂದು ಅವರು ಹೇಳಿದರು.
ಕಾರ್ಯಕ್ರಮದ ಅಂಗವಾಗಿ ಸಮ್ಮೇಳನಾಧ್ಯಕ್ಷರಾದ ಡಾ.ನಾಗತಿಹಳ್ಳಿ ಚಂದ್ರಶೇಖರ್ ಅವರಿಗೆ ಆಳ್ವಾಸ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಡಾ. ಎಂ. ಮೋಹನ್ ಆಳ್ವ ಸನ್ಮಾನಿಸಿದರು.
ಇದಕ್ಕೂ ಮೊದಲು ಭವ್ಯ ಮೆರವಣಿಗೆ ಮೂಲಕ ಸಮ್ಮೇಳಾನಾಧ್ಯಕ್ಷರು ಸಭಾಂಗಣಕ್ಕೆ ಕರೆತರಲಾಯಿತು.
ವಿಡಿಯೋ..