Connect with us

    DAKSHINA KANNADA

    ಗುಂಡ್ಯಾ ಅರಣ್ಯ ಮರಗಳ್ಳರ ಸ್ವರ್ಗ,ಅಕ್ರಮ ತಡೆದ ಅಧಿಕಾರಿ ದಾಂಡೇಲಿಗೆ ವರ್ಗ

    ಗುಂಡ್ಯಾ ಅರಣ್ಯ ಮರಗಳ್ಳರ ಸ್ವರ್ಗ, ಅಕ್ರಮ ತಡೆದ ಅಧಿಕಾರಿ ದಾಂಡೇಲಿಗೆ ವರ್ಗ..

    ಪುತ್ತೂರು,ಡಿಸೆಂಬರ್ 01: ಸರಕಾರಿ ಅಧಿಕಾರಿಗಳಿಗೆ ಪ್ರಾಮಾಣಿಕತೆ, ದಕ್ಷತೆಯ ಭಾಷಣ ಬಿಗಿಯುವ ಜನಪ್ರತಿನಿಧಿಗಳು ಎಷ್ಟರ ಮಟ್ಟಿಗೆ ಇದಕ್ಕೆ ವಿರುದ್ಧವಾಗಿ ನಡೆದುಕೊಳ್ಳುತ್ತಾರೆ ಎನ್ನುವುದು ಎಲ್ಲರಿಗೂ ತಿಳಿದ ವಿಚಾರವೇ.

    ಜನಪ್ರತಿನಿಧಿಗಳು ಭಾಷಣದಲ್ಲಿ ಹೇಳಿದ್ದನ್ನು ನಿಜವೆಂದು ನಂಬಿಕೊಂಡು ತನ್ನ ಕೆಲಸದಲ್ಲಿ ದಕ್ಷತೆ, ಪ್ರಾಮಾಣಿಕತೆಯನ್ನು ತೋರಿಸಿದ್ದಲ್ಲಿ ಆ ಅಧಿಕಾರಿ ನೀರಿಲ್ಲದ ಕಡೆ ಎತ್ತಂಗಡಿ ಆಗೋದು ಶತಸಿದ್ಧ.

    ಹೌದು ಜನಪ್ರತಿನಿಧಿಗಳ ಭಾಷಣ ಕೇಳಿ ದಕ್ಷತೆಯಿಂದ ಕಾರ್ಯನಿರ್ವಹಿಸುತ್ತಿದ್ದ ಅಧಿಕಾರಿಯೊಬ್ಬರನ್ನು ದಾಂಡೇಲಿ ಕಾಡಿಗೆ ಕಳುಹಿಸಿದ ಘಟನೆ ದಕ್ಷಿಣಕನ್ನಡ ಜಿಲ್ಲೆಯಲ್ಲಿ ನಡೆದಿರುವುದು ತಡವಾಗಿ ಬೆಳಕಿಗೆ ಬಂದಿದೆ.

    ಜಿಲ್ಲೆಯ ಗುಂಡ್ಯಾ ರಕ್ಷಿತಾರಣ್ಯದಲ್ಲಿ ಮರಗಳ ಕಳ್ಳ ಸಾಗಾಟ ನಿರಂತರವಾಗಿ ನಡೆಯುತ್ತಿರುವುದು ಸಾಮಾನ್ಯ ವಿಚಾರ. ಈ ವಿಚಾರ ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ತಿಳಿದರೂ, ತಿಳಿಯದಂತೆ ನಟಿಸಿದರೇ ಅವರಿಗೆ ಕ್ಷೇಮ.

    ಆದರೆ ಇತ್ತೀಚೆಗೆ ಈ ಗುಂಡ್ಯಾ ರಕ್ಷಿತಾರಣ್ಯಕ್ಕೆ ಫಾರೆಸ್ಟರ್ ಆಗಿ ಬಂದ ಅಧಿಕಾರಿಯು ತನ್ನ ವ್ಯಾಪ್ತಿಯಲ್ಲಿ ನಡೆಯುತ್ತಿರುವ ಮರಗಳ ಮಾರಣ ಹೋಮ ಹಾಗೂ ಕಳ್ಳ ಸಾಗಾಟವನ್ನು ಸಹಿಸಲಿಲ್ಲ.

    ಮರಕಳ್ಳ ಸಾಗಾಟಗಾರರ ಮೇಲೆ ಕೇಸು ದಾಖಲಿಸಿ ಶಿಕ್ಷೆ ನೀಡಲು ಮುಂದಾದರು.

    ಈ ಬೆಳವಣಿಗೆಯಿಂದ ಬೇಸತ್ತ ಮರಕಳ್ಳ ಸಾಗಾಟಗಾರರ ಸಂಘದ ನಿಯೋಗವೊಂದು ಅರಣ್ಯ ಸಚಿವ ರಮಾನಾಥ ರೈಯವರ ಬಳಿ ಹೋಗಿ ತಮ್ಮ ಕಾರ್ಯಕ್ಕೆ ಅಡ್ಡಿಪಡಿಸುತ್ತಿರುವ ಅಧಿಕಾರಿಯ ವಿರುದ್ಧ ಕ್ರಮ ಜರುಗಿಸುವಂತೆ ಮನವಿ ಮಾಡಿದೆ.

     

    ತನ್ನ ಪತ್ನಿ ಮಕ್ಕಳೊಂದಿಗೆ ಶಿರಾಡಿ ಪರಿಸರದಲ್ಲೇ ವಾಸವಾಗಿರುವ ಈ ಅಧಿಕಾರಿಗೆ ಸಚಿವ ಈ ನಿರ್ಧಾರ ಗೊಂದಲಕ್ಕೂ ಕಾರಣವಾಗಿತ್ತು.

    ಪ್ರಾಮಾಣಿಕವಾಗಿ ಮರಗಳ್ಳರ ವಿರುದ್ಧ ಕಾರ್ಯಾಚರಣೆ ನಡೆಸಿದ್ದ ತನಗೆ ಈ ರೀತಿಯ ದಿಢೀರ್ ವರ್ಗಾವಣೆಗೆ ಕಾರಣವೇನು ಎನ್ನುವುದು ಮೊದಲಿಗೆ ಫ್ಲಾಶ್ ಆಗಿಲ್ಲ.

    ಬಳಿಕ ತನ್ನ ಸ್ನೇಹಿತ ವರ್ಗದಿಂದ ವರ್ಗಾವಣೆಯ ಕಾರಣ ತಿಳಿದುಕೊಂಡ ಈ ಅಧಿಕಾರಿ ಸ್ಥಳೀಯ ಕಾಂಗ್ರೇಸ್ ನ ಯುವಮೋರ್ಚಾದಲ್ಲಿ ಸಕ್ರಿಯರಾಗಿರುವ ಮುಖಂಡನೋರ್ವನ ಜೊತೆ ಸಚಿವರನ್ನು ಮೀಟ್ ಆಗಿದ್ದಾರೆ.

    ಇನ್ನು ಮುಂದೆ ಮರಗಳ್ಳರ ವಿರುದ್ಧ ಕಾರ್ಯಾಚರಣೆಯನ್ನು ನಿಲ್ಲಿಸುವುದಾಗಿ ಹಾಗೂ ಯಾವುದೇ ಕಾರಣಕ್ಕೂ ಮರಗಳ್ಳರ ವಿರುದ್ಧ ಕ್ರಮ ಜರಗಿಸುವುದಿಲ್ಲ ಎನ್ನುವ ಭರವಸೆಯ ಹಿನ್ನಲೆಯಲ್ಲಿ ಸಚಿವರು ಆ ಅಧಿಕಾರಿಯನ್ನು ಮತ್ತೆ ಗುಂಡ್ಯಾ ಮೀಸಲು ಅರಣ್ಯಕ್ಕೇ ಶಿಫ್ಟ್ ಮಾಡಿದ್ದಾರೆ ಎನ್ನಲಾಗಿದೆ. ಮಾಜಿ ಸೈನಿಕರಾಗಿರುವ ಈ ಅಧಿಕಾರಿ ಇದೀಗ ತನ್ನ ವ್ಯಾಪ್ತಿಯಲ್ಲಿ ನಡೆಯುತ್ತಿರುವ ಅವ್ಯವಹಾರಗಳು ಕಂಡರೂ ಕಾಣದಂತೆ ಕಾರ್ಯ ನಿರ್ವಹಿಸಬೇಕಾದ ಅನಿವಾರ್ಯತೆಯಲ್ಲಿದ್ದಾರೆ.

    ಗುಂಡ್ಯಾ ಅರಣ್ಯದಲ್ಲಿ ನಿರಂತರವಾಗಿ ಮರಗಳ ಕಳ್ಳ ಸಾಗಾಟ ನಡೆಯುತ್ತಿರುವ ಕುರಿತು ಪ್ರತಿದಿನವೂ ಪತ್ರಿಕೆಗಳಲ್ಲಿ ಹಾಗೂ ಮಾಧ್ಯಮಗಳಲ್ಲಿ ವರದಿಗಳು ಪ್ರಕಟವಾಗುತ್ತಿದ್ದರೂ, ಅರಣ್ಯ ಸಚಿವರು ಸೇರಿದಂತೆ ಅರಣ್ಯ ಅಧಿಕಾರಿಗಳು ಇವೆಲ್ಲವನ್ನೂ ಕಣ್ಣು ಮುಚ್ಚಿ ಸಹಿಸುತ್ತಿದ್ದಾರೆ.

    ಎಲ್ಲಾ ಪಕ್ಷಗಳಲ್ಲಿ ಗುರುತಿಸಿಕೊಂಡಿರುವ ಈ ಕಳ್ಳರು ತಮ್ಮ ತಮ್ಮ ನಾಯಕರ ಬಳಿ ತೆರಳಿ ತಮ್ಮ (ಅ) ವ್ಯವಹಾರಕ್ಕೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳುತ್ತಿದ್ದಾರೆ.

    ಈ ಹಿಂದೆ ಪತ್ರಿಕಾಗೋಷ್ಠಿಯಲ್ಲಿ ಅರಣ್ಯ ಸಚಿವರಲ್ಲಿ ಜಿಲ್ಲೆಯಲ್ಲಿ ನಡೆಯುತ್ತಿರುವ ಮರ ಕಳ್ಳ ಸಾಗಾಟ, ಅಕ್ರಮ ಮರಳು ಸಾಗಾಟದ ಕುರಿತು ಪ್ರಶ್ನಿಸಿದಾಗ ಸಚಿವರು ಎಲ್ಲಾ ಪಕ್ಷದವರೂ ಇದರಲ್ಲಿದ್ದಾರೆ ಎನ್ನುವ ಹಾರಿಕೆಯ ಉತ್ತರವನ್ನು ನೀಡಿದ್ದನ್ನು ಇಲ್ಲಿ ಸ್ಮರಿಸಬಹುದಾಗಿದೆ.

    ತಮ್ಮ ಮೇಲೆ ಯಾವುದೇ ಆರೋಪಗಳು ಬಂದರೂ ತಕ್ಷಣ ದೇವರ ಮುಂದೆ ಆಣೆ ಮಾಡುವೆ ಎನ್ನುವ ಸಚಿವರು ಈ ವಿಚಾರದಲ್ಲೂ ಆಣೆಗೆ ಹೊರಡುತ್ತಾರೋ ಎನ್ನುವುದನ್ನು ಕಾದು ನೋಡಬೇಕಿದೆ.

    Share Information
    Advertisement
    Click to comment

    You must be logged in to post a comment Login

    Leave a Reply