Connect with us

LATEST NEWS

ಉಡುಪಿ – ಧೀಮಂತ ರಾಜಕಾರಣಿ ಆಸ್ಕರ್ ಫೆರ್ನಾಂಡಿಸ್ ಅವರ ಪಾರ್ಥೀವ ಶರೀರದ ಅಂತಿಮ ದರ್ಶನ

ಉಡುಪಿ ಸೆಪ್ಟೆಂಬರ್ 14: ನಿನ್ನೆ ನಿಧನರಾದ ರಾಜ್ಯಸಭಾ ಸದಸ್ಯ ಹಾಗೂ ಕಾಂಗ್ರೇಸ್ ನ ಹಿರಿಯ ಮುಖಂಡ ಆಸ್ಕರ್ ಫೆರ್ನಾಂಡಿಸ್ ಅವರ ಪಾರ್ಥಿವ ಶರೀರವನ್ನು ಹುಟ್ಟೂರಾದ ಉಡುಪಿಗೆ ಇಂದು ತರಲಾಯಿತು.


ಮಂಗಳೂರಿನಿಂದ ಹೊರಟ ಆಸ್ಕರ್ ಅವರ ಪಾರ್ಥಿವ ಶರೀರಕ್ಕೆ ರಸ್ತೆಯುದ್ದಗಲ ಅಭಿಮಾನಿಗಳು ನಿಂತು ತಮ್ಮ ಶೃದ್ದಾಂಜಲಿ ಸಲ್ಲಿಸಿದರು. ನಂತರ ಆಸ್ಕರ್ ಫರ್ನಾಂಡಿಸ್ ಅವರ ಪಾರ್ಥಿವ ಶರೀರವನ್ನು ಉಡುಪಿಯ ಶೋಕಮಾತಾ ಚರ್ಚ್‌ಗೆ ತರಲಾಯಿತು. ಸಚಿವರಾದ ಕೋಟ ಶ್ರೀನಿವಾಸ ಪೂಜಾರಿ, ಮಾಜಿ ಸಚಿವ ಪ್ರಮೋದ್ ಮಧ್ವರಾಜ್, ವಿನಯ ಕುಮಾರ್ ಸೊರಕೆ, ವಿಧಾನ ಪರಿಷತ್ ಸದಸ್ಯ ಪ್ರತಾಪ್ ಚಂದ್ರ ಶೆಟ್ಟಿ, ಶಾಸಕ ಯು.ಟಿ.ಖಾದರ್, ಮುಖಂಡರಾದ ಮೊಯಿದ್ದೀನ್ ಭಾವ, ಜೆ.ಆರ್.ಲೊಬೊ, ಮಂಜುನಾಥ ಭಂಡಾರಿ ಸೇರಿದಂತೆ ಹಲವು ಗಣ್ಯರು ಚರ್ಚ್‌ಗೆ ಭೇಟಿ ನೀಡಿ ಅಂತಿಮ ದರ್ಶನ ಪಡೆದರು.


ಉಡುಪಿ ಧರ್ಮಪ್ರಾಂತ್ಯದ ಗುರುಗಳಾದ ಜೆರಾಲ್ಡ್ ಐಸಾಕ್ ಲೋಬೋ ಧಾರ್ಮಿಕ ವಿಧಿವಿಧಾನಗಳನ್ನು ನೆರವೇರಿಸಿದರು. ಈ ಸಂದರ್ಭ ಸಾಮೂಹಿಕ ಪ್ರಾರ್ಥನೆ ಸಲ್ಲಿಸಲಾಯಿತು. ಆಸ್ಕರ್ ಫರ್ನಾಂಡಿಸ್ ಕುಟುಂಬದ ಮೂಲ ಚರ್ಚ್ ಇದಾಗಿದೆ. ಬಳಿಕ ಪಾರ್ಥಿವ ಶರೀರವನ್ನು ಬ್ರಹ್ಮಗಿರಿಯ ಆಸ್ಕರ್ ಅವರ ನಿವಾಸಕ್ಕೆ ತಂದು ಸಾರ್ವಜನಿಕ ದರ್ಶನಕ್ಕಿಡಲಾಗಿತ್ತು. ಇಲ್ಲಿಯೂ ಧರ್ಮಗುರುಗಳು ಪ್ರಾರ್ಥನೆ ಸಲ್ಲಿಸಿದರು. ಬಳಿಕ ಕಾಂಗ್ರೆಸ್ ಕಚೇರಿಗೆ ಕೊಂಡೊಯ್ದು ಅಂತಿಮ ದರ್ಶನಕ್ಕೆ ಇಡಲಾಯಿತು. ದಾರಿಯುದ್ದಕ್ಕೂ ಕಾಂಗ್ರೆಸ್ ಕಾರ್ಯಕರ್ತರು ಹೂವಿನ ಮಳೆಗರೆಯುವ ಮೂಲಕ ಅಗಲಿದ ನಾಯಕನಿಗೆ ಶ್ರದ್ಧಾಂಜಲಿ ಸಲ್ಲಿಸಿದರು.