KARNATAKA
ಸ್ಯಾಂಡಲ್‍ವುಡ್ ಡ್ರಗ್ಸ್‌ಗೆ ಕೇರಳ ರಾಜಕೀಯದ ನಂಟು
ಬೆಂಗಳೂರು: ಸ್ಯಾಂಡಲ್‍ವುಡ್ ಡ್ರಗ್ಸ್ ಪ್ರಕರಣದ ತನಿಖೆಯನ್ನು ಪೊಲೀಸರು ಚುರುಕುಗೊಳಿಸಿದ್ದಾರೆ. ಬಂಧಿತ ವಿಚಾರಣೆಯಲ್ಲಿ ಡ್ರಗ್ಸ್ ಮಾಫಿಯಾದಲ್ಲಿ ಕೇರಳ ರಾಜಕೀಯ ನಾಯಕರ ಪುತ್ರನ ಲಿಂಕ್ ಇರುವ ಬಗ್ಗೆ ಸ್ಫೋಟಕ ಮಾಹಿತಿಗಳನ್ನು ಹೊರ ಹಾಕಿದ್ದಾನೆ ಎಂಬ ಮಾಹಿತಿ ಲಭಿಸಿದೆ.
ಕೇರಳದಲ್ಲಿ ಬೆಂಗಳೂರಿನ ಡ್ರಗ್ ಪ್ರಕರಣ ತಲ್ಲಣವನ್ನು ಉಂಟು ಮಾಡಿದೆ. ಪೊಲೀಸರ ಎದುರು ಡ್ರಗ್ಸ್ ದಂಧೆಯ ಸ್ಫೋಟಕ ಮಾಹಿತಿ ಬಿಚ್ಚಿಟ್ಟಿರುವ ಆರೋಪಿ ಅನೂಫ್, ದಂಧೆಯಲ್ಲಿ ಕೇರಳದ ಸಿಪಿಎಂ ಪಕ್ಷದ ಮಗನಿಂದ ಹಣ ಹೂಡಿಕೆ ಮಾಡಲಾಗಿದೆ. ಸಿಪಿಐ(ಎಂ) ಪಕ್ಷದ ಕೊಡಿಯೇರಿ ಬಾಲಕೃಷ್ಣನ್ ಅವರ ಮಗ ಬಿನೀಶ್ ಕೊಡಿಯೇರಿ ಹಣ ಹೂಡಿಕೆ ಮಾಡಿದ್ದ ಎಂದು ತಿಳಿಸಿದ್ದಾನೆ ಎಂದು ಮಾಧ್ಯಮವೊಂದು ವರದಿ ಮಾಡಿದೆ.
ಬಾಲಕೃಷ್ಣನ್ ಕೇರಳದ ಸಿಪಿಐ(ಎಂ) ಪಕ್ಷದ ಜನರಲ್ ಸೆಕ್ರೆಟರಿ ಆಗಿದ್ದಾರೆ. ಸದ್ಯ ಬಂಧಿತ ಅನೂಫ್ ಕೊರೊನಾ ಲಾಕ್‍ಡೌನ್‍ನಿಂದ ಕೊಚ್ಚಿಯಲ್ಲಿದ್ದ ಪಬ್ ಬಿಸಿನೆಸ್‍ನಲ್ಲಿ ಲಾಸ್ ಮಾಡಿಕೊಂಡು ಹಾಳಾಗಿದ್ದ ಜೀವನ್ನು ಸರಿ ಮಾಡಿಕೊಳ್ಳುತ್ತೇನೆ ಎಂದು ಹೇಳಿ ಬೆಂಗಳೂರಿಗೆ ಆಗಮಿಸಿದ್ದ. ಅದಕ್ಕೂ ಮುನ್ನವೇ ಆತ ಬೆಂಗಳೂರಿನಲ್ಲಿ ಹಲವು ಬಿಸಿನೆಸ್ ನಡೆಸಿದ ಅನುಭವ ಹೊಂದಿದ್ದ. ಆದರೆ ಈ ಬಾರಿ ಬೆಂಗಳೂರಿಗೆ ಬಂದಿದ್ದ ಆತ, ಆರೋಪಿ ಅನಿಕಾಳಿಂದ ಡ್ರಗ್ಸ್ ಪಡೆದು ಲಾಕ್‍ಡೌನ್ ಅವಧಿಯಲ್ಲಿ ಮಾರಾಟ ಮಾಡಿ ಲಕ್ಷಾಂತರ ರೂಪಾಯಿ ಸಂಪಾದನೆ ಮಾಡಿದ್ದ. 550 ರೂಪಾಯಿಗೆ ಒಂದು ಮಾತ್ರೆ ಎಂಬಂತೆ 1 ಲಕ್ಷದ 37 ಸಾವಿರ ರೂಪಾಯಿಗೆ ಡ್ರಗ್ಸ್ ಖರೀದಿ ಮಾಡಿದ್ದೆ ತನಿಖೆಯ ವೇಳೆ ಬಾಯ್ಬಿಟ್ಟಿದ್ದಾನೆ.
ಅನೂಫ್ ಕೇರಳದ ಸಿಪಿಎಂ ನಾಯಕ ಪುತ್ರನೊಂದಿಗೆ ಸಂಪರ್ಕ ಹೊಂದಿರುವುದನ್ನು ಒಪ್ಪಿಕೊಂಡಿದ್ದು, ಆತನ ಹಣದಿಂದಲೇ ಡ್ರಗ್ಸ್ ಖರೀದಿ ಮಾಡಿದ್ದೆ ಎಂದಿದ್ದಾನೆ. ಬೆಂಗಳೂರಿನಲ್ಲಿ ಪಬ್‍ವೊಂದನ್ನು ನೋಡಿಕೊಳ್ಳುತ್ತಿದ್ದ ಆರೋಪಿ ಅಲ್ಲಿಂದಲೇ ಡ್ರಗ್ ಮಾರಾಟ ಮಾಡುತ್ತಿದ್ದ. ಸದ್ಯ ಆರೋಪಿ ಸ್ಯಾಂಡಲ್‍ವುಡ್‍ನ ಯಾವ ನಟ, ನಟಿಯರು, ಗಣ್ಯರಿಗೆ ಸಪ್ಲೇ ಮಾಡಿದ್ದ ಎಂಬುದು ತನಿಖೆಯಲ್ಲಿ ಬೆಳಕಿಗೆ ಬರಬೇಕಿದೆ.
ಸದ್ಯ ಡ್ರಗ್ಸ್ ದಂಧೆಯ ಆರೋಪದ ಕುರಿತು ಪ್ರತಿಕ್ರಿಯೆ ನೀಡಿರುವ ಬಿನೀಶ್ ಕೊಡಿಯೇರಿ, ತನ್ನ ಸ್ನೇಹಿತ ಅನೂಫ್ ಡ್ರಗ್ಸ್ ವ್ಯವಹಾರದ ಬಗ್ಗೆ ಯಾವುದೇ ಮಾಹಿತಿ ಇಲ್ಲ. ಆದರೆ ಆತ ನನಗೆ 6 ರಿಂದ 7 ವರ್ಷಗಳಿಂದ ಪರಿಚಯ. ಬೆಂಗಳೂರಿನಲ್ಲಿ ರೆಸ್ಟೋರೆಂಟ್ ಬಿಸಿನೆಸ್ ಮಾಡುತ್ತಿದ್ದ. ಆದರೆ ಎನ್‍ಸಿಬಿ ಆತನನ್ನು ಬಂಧಿಸಿದ ಸುದ್ದಿ ಕೇಳಿ ಆಘಾತವಾಯಿತು. ಏಕೆಂದರೆ ನನಗೆ ಅಥವಾ ಆತನ ಪೋಷಕರಿಗೆ ಡ್ರಗ್ಸ್ ದಂಧೆಯ ಬಗ್ಗೆ ಯಾವುದೇ ಸುಳಿವು ಇರಲಿಲ್ಲ ಎಂದು ಸ್ಪಷ್ಟಪಡಿಸಿದ್ದಾನೆ.
ಇತ್ತ ನಿನ್ನೆಯೇ ಈ ಕುರಿತು ಹೇಳಿಕೆ ನೀಡಿದ್ದ ಐಯುಎಂಎಲ್ ಮುಖಂಡ ಕೆಎಫ್ ಫಿರೋಜ್, ಅನೂಫ್ ಹಾಗೂ ಬಿನೀಶ್ ಇಬ್ಬರು ಸ್ನೇಹಿತರು ಎಂದು ಮಾಧ್ಯಮಗಳ ಹೇಳಿದ್ದ. ಸದ್ಯದ ಮಾಹಿತಿ ಅನ್ವಯ ಆರೋಪವನ್ನು ಎದುರಿಸುತ್ತಿರುವ ಬಿನೀಶ್, ಹಲವು ವ್ಯವಹಾರ ನಡೆಸುತ್ತಿದ್ದ. ಅಲ್ಲದೇ ಚಿತ್ರರಂದ ಗಣ್ಯರೊಂದಿಗೂ ಸಂಪರ್ಕ ಹೊಂದಿದ್ದ ಎನ್ನಲಾಗಿದೆ.
ಬಿನೀಶ್ ಸಹೋದರ ಬಿನೊಯ್, ಮುಂಬೈ ಮೂಲದ 33 ವರ್ಷದ ಮಹಿಳೆಗೆ ಮದುವೆ ಹೆಸರಿನಲ್ಲಿ ಲೈಂಗಿಕ ಕಿರುಕುಳ ನೀಡಿದ್ದ ಹಾಗೂ ವಂಚಿಸಿದ ಪ್ರಕರಣದಲ್ಲಿ ವಿಚಾರಣೆ ಎದುರಿಸುತ್ತಿದ್ದಾನೆ. ಈ ಪ್ರಕರಣದ ವಿಚಾರಣೆ ಮುಂಬೈನಲ್ಲಿ ನಡೆಯುತ್ತಿದ್ದು, ಡಿಎನ್‍ಎ ಪರೀಕ್ಷೆಯ ಫಲಿಶಾಂಶಕ್ಕಾಗಿ ಪೊಲೀಸರು ಕಾಯುತ್ತಿದ್ದಾರೆ ಎಂದು ಸ್ಥಳೀಯ ಮಾಧ್ಯಮವೊಂದು ವರದಿ ಮಾಡಿದೆ.