KARNATAKA
ಚಿಕ್ಕಮಗಳೂರು – ಮಗಳು ನಾದಿನಿ ಅತ್ತೆಯನ್ನು ಶೂಟ್ ಮಾಡಿ ಕೊಂದು….ತಾನು ಆತ್ಮಹತ್ಯೆಗೆ ಶರಣಾದ ವ್ಯಕ್ತಿ

ಚಿಕ್ಕಮಗಳೂರು ಎಪ್ರಿಲ್ 02: ಚಿಕ್ಕಮಗಳೂರಿನಲ್ಲಿ ಭೀಕರ ಹತ್ಯಾಕಾಂಡ ನಡೆದಿದ್ದು, ವ್ಯಕ್ತಿಯೊಬ್ಬ ಮಗಳು, ಅತ್ತೆ ಮತ್ತು ನಾದಿನಿಯನ್ನು ಬಂದೂಕಿನಿಂದ ಗುಂಡು ಹಾರಿಸಿ, ಬಳಿಕ ವ್ಯಕ್ತಿಯೋರ್ವ ತಾನೂ ಆತ್ಮಹತ್ಯೆಗೆ ಶರಣಾಗಿರುವಂತಹ ಭಯಾನಕ ಘಟನೆ ಚಿಕ್ಕಮಗಳೂರು ತಾಲೂಕಿನ ಮಾಗಲು ಗ್ರಾಮದಲ್ಲಿ ನಿನ್ನೆ ನಡೆದಿದೆ. ಮೃತರನ್ನು ಅತ್ತೆ ಜ್ಯೋತಿ(50), ನಾದಿನಿ ಸಿಂಧು(26), ಮಗಳು ಮೌಲ್ಯಾ(7) ಎಂದು ಗುರುತಿಸಲಾಗಿದೆ. ಆರೋಪಿ ರತ್ನಾಕರ್ ಕೃತ್ಯ ನಡೆಸಿ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಮಾಗಲು ಗ್ರಾಮದ ರತ್ನಾಕರ್ ಎಂಬವನು ನಾಡಬಂದೂಕಿನಿಂದ ಮೂವರನ್ನು ಭೀಕರ ಹತ್ಯೆ ಮಾಡಿ, ಆತನೂ ಬಂದೂಕಿನಿಂದ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ರತ್ನಾಕರ್ ಹೆಂಡತಿ ಬಿಟ್ಟು ಹೋಗಿದ್ದರಿಂದ ಮನನೊಂದು ಈ ದುಷ್ಕೃತ್ಯ ನಡೆಸಿದ್ದಾನೆ ಎಂದು ಹೇಳಲಾಗಿದೆ. ಶಾಲೆಯಲ್ಲಿ ಸಹಪಾಠಿಗಳು ನಿಮ್ಮ ಅಮ್ಮ ಎಲ್ಲಿ ಎಂದು ಕೇಳುತ್ತಾರೆ ಎಂದು ಅಪ್ಪ ರತ್ನಾಕರ್ ಬಳಿ ಮಗಳು ಅಳಲು ತೋಡಿಕೊಂಡಿದ್ದಳು. ಇದರಿಂದ ಮನನೊಂದಿದ್ದ ರತ್ನಾಕರ್ ಮಂಗಳವಾರ ರಾತ್ರಿ 10 ಗಂಟೆ ವೇಳೆಗೆ ಮನೆಗೆ ತೆರಳಿ, ಅತ್ತೆ, ನಾದಿನಿ ಹಾಗೂ ಮಗಳನ್ನು ನಾಡಬಂದೂಕಿನಿಂದ ಗುಂಡು ಹಾರಿಸಿ ಹತ್ಯೆ ಮಾಡಿದ್ದಾನೆ.

ಹತ್ಯೆಯ ಬಳಿಕ ರತ್ನಾಕರ್, ಸೆಲ್ಫಿ ವಿಡಿಯೋ ಮಾಡಿ ಸಂಸಾರದ ನೋವನ್ನು ತೋಡಿಕೊಂಡಿದ್ದಾನೆ. ನನ್ನ ಹೆಂಡತಿ ಮೋಸ ಮಾಡಿ ಹೋಗಿ 2 ವರ್ಷ ಆಯ್ತು. ಮಗಳನ್ನು ಬೇಡ ಅಂತ ಬಿಟ್ಟು ಹೋಗಿದ್ದಾಳೆ. ಈಗ ಶಾಲೆಯಲ್ಲಿ ನನ್ನ ಮಗಳಿಗೆ ಆಕೆಯ ಸ್ನೇಹಿತರು ನಿನ್ನ ಅಮ್ಮ ಎಲ್ಲಿ ಎಂದು ಕೇಳುತ್ತಾರೆ. ಮಗಳು ಆಲ್ಬಂನಿಂದ ಅಮ್ಮನ ಫೋಟೋ ತೆಗೆದುಕೊಂಡು ಹೋಗಿ ಈಕೆಯೇ ನನ್ನ ಅಮ್ಮ ಅಂತ ತೋರಿಸಿದ್ದಾಳೆ ಎಂದು ವಿಡಿಯೋದಲ್ಲಿ ರತ್ನಾಕರ್ ನೋವನ್ನು ವ್ಯಕ್ತಪಡಿಸಿದ್ದಾನೆ. ಮೂವರನ್ನು ಹತ್ಯೆ ಮಾಡಿದ ಬಳಿಕ ರತ್ನಾಕರ್ ತಾನು ಅದೇ ಬಂದೂಕಿನಿಂದ ಗುಂಡು ಹಾರಿಸಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ. ಘಟನೆಯಲ್ಲಿ ಮೃತ ಸಿಂಧು ಗಂಡ ಅವಿನಾಶ್ ಕಾಲಿಗೂ ಗುಂಡೇಟು ತಗುಲಿದ್ದು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಸ್ಥಳಕ್ಕೆ ಚಿಕ್ಕಮಗಳೂರು ಎಸ್ಪಿ ವಿಕ್ರಮ್ ಅಮಟೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಬಾಳೆಹೊನ್ನೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
1 Comment