KARNATAKA
ಕೊಡಗು – ನಾಲ್ವರ ಕೊಂದು ಪರಾರಿಯಾಗಿದ್ದ ಆರೋಪಿ ಅರೆಸ್ಟ್ – 2ನೇ ಗಂಡನೊಂದಿಗೆ ನಂಟಿನ ಸಂಶಯಕ್ಕೆ ಭೀಕರ ಹತ್ಯಾಕಾಂಡ

ಕೊಡಗು ಮಾರ್ಚ್ 29: ಕೊಡಗಿನ ಪೊನ್ನಂಪೇಟೆಯಲ್ಲಿ ನಡೆದ ಭೀಕರ ಹತ್ಯಾಕಾಂಡದ ಆರೋಪಿಯನ್ನು ಪೊಲೀಸರು ಘಟನೆ ನಡೆದ 6 ಗಂಟೆಯೊಳಗೆ ಅರೆಸ್ಟ್ ಮಾಡಿದ್ದಾರೆ. ಪತ್ನಿಯು ತನ್ನ 2ನೇ ಗಂಡನೊಂದಿಗೆ ಮತ್ತೆ ಅನ್ಯೋನ್ಯವಾಗಿರುವ ಸಂಶಯದಿಂದಲೇ ಈ ಕೊಲೆ ನಡೆದಿದೆ ಎಂದು ಹೇಳಲಾಗಿದೆ.
ಶುಕ್ರವಾರ ಮಧ್ಯಾಹ್ನ ಸುಮಾರು 01.30ರ ಸುಮಾರಿಗೆ ಪೊನ್ನಂಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯ ಬೇಗೂರು ಗ್ರಾಮ ಬಾಳಂಗಾಡು ಪ್ರದೇಶದ ಒಂಟಿ ಮನೆಯಲ್ಲಿ ನಾಲ್ಕು ಜನರ ಭೀಕರ ಕೊಲೆಯಾಗಿತ್ತು.
ಹತ್ಯೆಯಾದವರನ್ನು ಕರಿಯ (75) ಗೌರಿ (70) ನಾಗಿ (35) ಹಾಗೂ ಕಾವೇರಿ (7) ಎಂದು ಗುರುತಿಸಲಾಗಿದೆ. ಗಿರೀಶ್ (35) ಹತ್ಯೆಗೈದ ಆರೋಪಿಯಾಗಿದ್ದಾನೆ.

ಆರೋಪಿ ಗಿರೀಶ್ ನಾಗಿಯ ಮೂರನೇ ಗಂಡನಾಗಿದ್ದು, ಕಳೆದ ಒಂದು ವರ್ಷದಿಂದ ಒಟ್ಟಿಗೆ ನೆಲೆಸಿದ್ದರು. ಆದರೆ ನಾಗಿ ತನ್ನ ಎರಡನೇ ಪತಿಯೊಂದಿಗೆ ಮತ್ತೆ ಸಂಬಂಧ ಬೆಳೆಸಿದ್ದಾಳೆ ಎಂದು ಗಿರೀಶ್‌ಗೆ ಸಂಶಯ ವ್ಯಕ್ತವಾಗಿತ್ತು. ಇದರಿಂದ ಗುರುವಾರ ರಾತ್ರಿ ಎಲ್ಲರು ಮಲಗಿರುವಾಗ ನಾಲ್ವರನ್ನು ಕತ್ತಿಯಿಂದ ಕೊಚ್ಚಿ ಭೀಕರವಾಗಿ ಕೊಲೆ ಮಾಡಿ ಪರಾರಿಯಾಗಿದ್ದ. ಈ ಬಗ್ಗೆ ಮಾಹಿತಿ ಪಡೆದ ಪೊಲೀಸರು ಮತ್ತು ಅಪರಾಧ ಪತ್ತೆ ತಜ್ಞರ ತಂಡ ಘಟನಾ ಸ್ಥಳಕ್ಕೆ ಭೇಟಿ ನೀಡಿ ಅಪರಾಧ ಕೃತ್ಯದ ಕುರಿತು ಮಾಹಿತಿ ಹಾಗೂ ಸಾಕ್ಷ್ಯಾಧಾರಗಳನ್ನು ಕಲೆ ಹಾಕಿದ್ದರು.
ಬಳಿಕ ದೂರುದಾರರು ನೀಡಿದ ಮಾಹಿತಿ ಅನ್ವಯ ಪೊನ್ನಂಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಸಲಾಯಿತು. ತಲೆಮರೆಸಿಕೊಂಡಿರುವ ಆರೋಪಿ ಪತ್ತೆಗಾಗಿ ವಿರಾಜಪೇಟೆ ಉಪವಿಭಾಗ ಡಿಎಸ್‌ಪಿ ಅವರ ನೇತೃತ್ವದಲ್ಲಿ ವಿಶೇಷ ತನಿಖಾ ತಂಡವನ್ನು ರಚಿಸಿ ತನಿಖೆ ಕೈಗೊಂಡಿದ್ದರು. ಕೃತ್ಯ ನಡೆದ 6 ಗಂಟೆಯ ಒಳಗಾಗಿ ಕೇರಳದ ತಲಪುಳ ಎಂಬಲ್ಲಿ ಆರೋಪಿಯನ್ನು ಬಂಧಿಸಿದ್ದು, ಕಾನೂನು ಕ್ರಮ ಜರುಗಿಸಲಾಗಿದೆ.
1 Comment