Connect with us

FILM

‘ಮೂಸೆವಾಲಾ ರೀತಿ ನೀನೂ ಕೊನೆಯಾಗುವೆ’-ನಟ ಸಲ್ಮಾನ್‌ ಖಾನ್‌ಗೆ ಜೀವ ಬೆದರಿಕೆ

ಮುಂಬೈ, ಜೂನ್ 06: ಬಾಲಿವುಡ್‌ ನಟ ಸಲ್ಮಾನ್‌ ಖಾನ್‌ ಮತ್ತು ಅವರ ತಂದೆ ಸಲೀಂ ಖಾನ್‌ ಅವರಿಗೆ ಪತ್ರದ ಮೂಲಕ ಜೀವ ಬೆದರಿಕೆ ಹಾಕಲಾಗಿದೆ. ‘ನೀನೂ ಮೂಸೆವಾಲಾನ ರೀತಿ ಕೊನೆಯಾಗುತ್ತೀಯ’ ಎಂದು ಅನಾಮಿಕ ಪತ್ರದಲ್ಲಿರುವುದಾಗಿ ವರದಿಯಾಗಿದೆ.

ಸಿನಿಮಾ ಬರಹಗಾರ, ನಿರ್ಮಾಪಕ ಸಲೀಂ ಖಾನ್‌ ಅವರು ಬೆಳಗಿನ ವಾಯುವಿಹಾರದ ಸಮಯದಲ್ಲಿ ಕುಳಿತುಕೊಳ್ಳುವ ಸ್ಥಳದ ಬಳಿ ಅವರ ಭದ್ರತಾ ಸಿಬ್ಬಂದಿಗೆ ಪತ್ರ ಸಿಕ್ಕಿದೆ. ಅದರಲ್ಲಿ ಸಲ್ಮಾನ್‌ ಖಾನ್‌ ಮತ್ತು ಸಲೀಂ ಖಾನ್‌ ಇಬ್ಬರಿಗೂ ಜೀವ ಬೆದರಿಕೆ ಹಾಕಿರುವ ಹಿನ್ನೆಲೆಯಲ್ಲಿ ಪೊಲೀಸರು ಎಫ್‌ಐಆರ್‌ ದಾಖಲಿಸಿದ್ದಾರೆ.

ಕಳೆದವಾರ ಪಂಜಾಬ್‌ನ ಮಾನ್ಸಾ ಗ್ರಾಮದಲ್ಲಿ ಪಂಜಾಬಿ ಗಾಯಕ, ರಾಜಕಾರಣಿ ಸಿಧು ಮೂಸೆವಾಲಾ ಅವರ ಮೇಲೆ ಗುಂಡಿನ ದಾಳಿ ನಡೆಸಿ ಹತ್ಯೆ ಮಾಡಲಾಗಿದೆ. ಲಾರೆನ್ಸ್‌ ಬಿಷ್ಣೋಯಿ ಗ್ಯಾಂಗ್‌ ಆ ಕೃತ್ಯ ಎಸಗಿರುವುದಾಗಿ ಆರೋಪಿಸಲಾಗಿದೆ. ಅದೇ ಗ್ಯಾಂಗ್‌ 2018ರಲ್ಲಿ ಸಲ್ಮಾನ್‌ ಖಾನ್‌ ಅವರಿಗೆ ಜೀವ ಬೆದರಿಕೆ ಹಾಕಿತ್ತು.

ಬಿಷ್ಣೋಯಿ ಸಮುದಾಯವು ಕೃಷ್ಣಮೃಗವನ್ನು ಪೂಜನೀಯವಾಗಿ ಕಾಣುತ್ತದೆ. ಕೃಷ್ಣಮೃಗ ಬೇಟೆ ಪ್ರಕರಣದ ಸಂಬಂಧ ಸಲ್ಮಾನ್‌ಗೆ ಜೋಧಪುರದಲ್ಲಿ ಕೊಲೆ ಬೆದರಿಕೆ ಹಾಕಲಾಗಿತ್ತು. ಲಾರೆನ್ಸ್‌ ಬಿಷ್ಣೋಯಿ ಪ್ರಸ್ತುತ ದೆಹಲಿಯ ತಿಹಾರ್‌ ಜೈಲಿನಲ್ಲಿ ಶಿಕ್ಷೆ ಅನುಭವಿಸುತ್ತಿದ್ದಾನೆ. ಮೂಸೆವಾಲಾ ಹತ್ಯೆಯ ಬೆನ್ನಲ್ಲೇ ಸಲ್ಮಾನ್‌ ಖಾನ್‌ ಅವರಿಗೆ ಭದ್ರತೆ ಹೆಚ್ಚಿಸಿರುವ ಬಗ್ಗೆ ವರದಿಯಾಗಿದೆ. ಆದರೆ, ಮುಂಬೈ ಪೊಲೀಸರು ಅದನ್ನು ಅಲ್ಲಗಳೆದಿದ್ದಾರೆ. ಬಾಂದ್ರಾದ ಗ್ಯಾಲಕ್ಸಿ ಅಪಾರ್ಟ್‌ಮೆಂಟ್ಸ್‌ ಸುತ್ತಲೂ ಭದ್ರತೆ ಹೆಚ್ಚಿಸುವ ಸಾಧ್ಯತೆ ಇರುವುದಾಗಿ ಇಂಡಿಯಾ ಟುಡೆ ವರದಿ ಮಾಡಿದೆ.

Advertisement
Click to comment

You must be logged in to post a comment Login

Leave a Reply