Connect with us

    LATEST NEWS

    ಕೋವಿಡ್ ನಿರ್ವಹಣೆಯಲ್ಲಿರುವ ಸಿಬ್ಬಂದಿಗಳಿಗೆ ವಿಳಂಬಕ್ಕೆ ಆಸ್ಪದ ನೀಡದಂತೆ ವೇತನ ಪಾವತಿಸಲು ಸಚಿವರ ಸೂಚನೆ

    ಮಂಗಳೂರು ಅಗಸ್ಟ್ 24: ಕೋವಿಡ್ ಸೋಂಕಿನ ನಿರ್ವಹಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಸಿಬ್ಬಂದಿಗಳಿಗೆ ವಿಳಂಬಕ್ಕೆ ಆಸ್ಪದವಿಲ್ಲದಂತೆ ವೇತನ ನೀಡಬೇಕು, ತಪ್ಪಿದ್ದಲ್ಲಿ ಸಂಬಂಧಿಸಿದ ಅಧಿಕಾರಿಗಳ ವಿರುದ್ಧ ಕಾನೂನು ಬದ್ದ ಕ್ರಮ ಕೈಗೊಳ್ಳುವಂತೆ ಮೀನುಗಾರಿಗೆ, ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವರಾದ ಎಸ್. ಅಂಗಾರ ಅವರು ಜಿಲ್ಲಾಧಿಕಾರಿಯವರಿಗೆ ನಿರ್ದೇಶನ ನೀಡಿದರು.


    ಜಿಲ್ಲೆಯಲ್ಲಿ ಮೊದಲೇ ಕೋವಿಡ್ ಸೋಂಕಿನ ಪಾಸಿಟಿವಿಟಿ ಸೂಚ್ಯಂಕ ಹೆಚ್ಚಿದೆ. ಅದರ ನಿರ್ವಹಣೆ, ನಿಯಂತ್ರಣ ಹಾಗೂ ಶುಶ್ರೂಷೆಯಲ್ಲಿ ತೊಡಗಿರುವ ಸಿಬ್ಬಂದಿಗಳಿಗೆ ಕಾಲಕಾಲಕ್ಕೆ ವೇತನ ಪಾವತಿಸುವುದು ಸಂಬಂಧಿಸಿದ ಅಧಿಕಾರಿಗಳ ಕರ್ತವ್ಯ, ಈ ಹಿನ್ನೆಲೆಯಲ್ಲಿ ಲ್ಯಾಬ್ ಟೆಕ್ನಿಷಿಯನ್‍ಗಳು, ಸ್ಟಾಫ್ ನರ್ಸ್‍ಗಳು ಹಾಗೂ ಊಟ ಉಪಹಾರ ಒದಗಿಸುವ ಕ್ಯಾಂಟೀನ್‍ಗಳಿಗೆ ಕಾಲಕಾಲಕ್ಕೆ ಅವರ ವೇತನ ಪಾವತಿಸಬೇಕು. ಇದರಲ್ಲಿ ವಿಳಂಬ ತೋರುವ ತಹಶೀಲ್ದಾರರು ಹಾಗೂ ಸಂಬಂಧಿಸಿದ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಅಥವಾ ಅವರನ್ನು ಅಮಾನತು ಮಾಡುವಂತೆ ಸಚಿವರು ಸೂಚಿಸಿದರು.

    ಕೋವಿಡ್ ನಿರ್ವಹಣೆಗೆ ಅಗತ್ಯವಿರುವ ಎಲ್ಲಾ ಸೌಲಭ್ಯಗಳನ್ನು ಸರ್ಕಾರದಿಂದ ನೀಡಲಾಗುತ್ತಿದೆ. ಸಮಸ್ಯೆಗಳಿದ್ದಲ್ಲಿ ಇತ್ಯರ್ಥಪಡಿಸಿಕೊಂಡು ಕ್ರಮವಹಿಸಲು ತಿಳಿಸಲಾಗಿದೆ, ಆದಾಗ್ಯೂ ಅಧಿಕಾರಿಗಳ ಈ ವರ್ತನೆಯನ್ನು ಸಹಿಸಲು ಸಾಧ್ಯವಿಲ್ಲ ಎಂದರು.
    ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ ಅವರು ಮಾತನಾಡಿ, ಇದಕ್ಕೆ ಸಂಬಂಧಿಸಿದಂತೆ ಈ ತಿಂಗಳ ಅಂತ್ಯದೊಳಗೆ ಸಂಬಂಧಿಸಿದ ಅಧಿಕಾರಿಗಳ ವಿರುದ್ಧ ಕ್ರಮ ತೆಗೆದುಕೊಳ್ಳಲಾಗುವುದು. ಎಲ್ಲಾ ತಹಶೀಲ್ದಾರರು ತಿಂಗಳ 5 ತಾರೀಖಿನೊಳಗೆ ಸಂಬಂಧಿಸಿದ ಸಿಬ್ಬಂದಿಗಳಿಗೆ ವೇತನ ಪಾವತಿಸಬೇಕು, ಯಾವುದೇ ಕಾರಣಕ್ಕೂ ಬಾಕಿ ಉಳಿಸಬಾರದು. ಇಲ್ಲದಿದ್ದರೇ ಸಂಬಂಧಿಸಿದ ತಹಶೀಲ್ದಾರರಿಗೆ ನೋಟೀಸ್ ನೀಡಿ, ಶಿಸ್ತು ಕ್ರಮಕ್ಕೆ ಶಿಫಾರಸು ಮಾಡಲಾಗುವುದು ಎಂದು ಎಚ್ಚರಿಸಿದರು.

    ಜಿಲ್ಲೆಯಲ್ಲಿ ಕೋವಿಡ್ ಅನ್ನು ಪರಿಣಾಮಕಾರಿಯಾಗಿ ನಿಯಂತ್ರಿಸಲು ಎಲ್ಲಾ ತಾಲೂಕುಗಳಲ್ಲಿಯೂ ಹೆಚ್ಚಿನ ತಪಾಸಣೆ ನಡೆಸಬೇಕು, ಆದಷ್ಟು ಹೆಚ್ಚಾಗಿ ಸೋಂಕಿತರ ಪ್ರಾಥಮಿಕ ಸಂಪರ್ಕಿತರನ್ನು ಪತ್ತೆ ಹಚ್ಚಬೇಕು. ಜನ ಯಾವ ವೇಳೆಯಲ್ಲಿ ಹೆಚ್ಚಾಗಿ ಲಭ್ಯವಾಗುತ್ತಾರೋ ಆಗ ಪರೀಕ್ಷೆಗಳನ್ನು ನಡೆಸುವುದು ಉತ್ತಮ ಎಂದ ಜಿಲ್ಲಾಧಿಕಾರಿಯವರು, ಜಿಲ್ಲೆಯಲ್ಲಿ ಪ್ರತಿನಿತ್ಯ 11,000 ಪರೀಕ್ಷೆ ಮಾಡಲಾಗುತ್ತಿದೆ, ಅದನ್ನು 15 ಸಾವಿರಕ್ಕೆ ಹೆಚ್ಚಿಸಲಾಗುವುದು, ಸೋಂಕಿತ ವ್ಯಕ್ತಿಯ ಸಂಪರ್ಕಕ್ಕೆ ಬಂದ ಕನಿಷ್ಠ 20 ಮಂದಿಯನ್ನು ತಪಾಸಣೆ ಮಾಡಬೇಕು, ಪ್ರತಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿಯೂ 180 ರಿಂದ 200 ತಪಾಸಣೆಗಳು ಆಗಬೇಕು, ಪ್ರತಿ ಲ್ಯಾಬ್ ಟೆಕ್ನಿಷಿಯನ್‍ಗಳು 50 ಸ್ವ್ಯಾಬ್ ಟೆಸ್ಟಿಂಗ್ ಮಾಡಲೇಬೇಕು, ಎಲ್ಲಾ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ವಾಹನಗಳನ್ನು ಹಾಗೂ ಅಗತ್ಯ ಸಂಖ್ಯೆಯ ಲ್ಯಾಬ್ ಟೆಕ್ನಿಷಿಯನ್‍ಗಳನ್ನು ಒದಗಿಸಲಾಗಿದೆ ಎಂದರು.

    ಸಂಸದರಾದ ನಳೀನ್ ಕುಮಾರ್ ಕಟೀಲ್ ಅವರು ಮಾತನಾಡಿ, ಕೋವಿಡ್ ತಪಾಸಣೆಯನ್ನು ಮತ್ತಷ್ಟು ಹೆಚ್ಚಿಸಲು ಅಗತ್ಯವಿರುವ ಕ್ರಮ ಹಾಗೂ ಬೇಕಾದ ಸಿಬ್ಬಂದಿಗಳನ್ನು ಪಡೆದುಕೊಳ್ಳುವಂತೆ ತಿಳಿಸಿದರು

    Share Information
    Advertisement
    Click to comment

    You must be logged in to post a comment Login

    Leave a Reply