ಶಬರಿಮಲೆಗೆ ಹರಿದು ಬರುತ್ತಿರುವ ಭಕ್ತರು ಪ್ರಾರಂಭದ 20 ದಿನದಲ್ಲೇ 69 ಕೋಟಿ ಮುಟ್ಟಿದ ಆದಾಯ

ಮಂಗಳೂರು ಡಿಸೆಂಬರ್ 8: ಮಹಿಳೆಯರ ಶಬರಿಮಲೆ ಪ್ರವೇಶ ವಿವಾದದ ನಡುವೆಯೂ ಶಬರಿಮಲೆ ಅಯ್ಯಪ್ಪನ ದರ್ಶನಕ್ಕೆ ಭಾರಿ ಸಂಖ್ಯೆಯಲ್ಲಿ ಭಕ್ತರು ಆಗಮಿಸುತ್ತಿದ್ದು, ಈ ಹಿನ್ನಲೆಯಲ್ಲಿ ದೇವಸ್ಥಾನದ ಆದಾಯದಲ್ಲಿ ಭಾರೀ ಏರಿಕೆಯಾಗಿದೆ.

ಮಂಡಲ ಪೂಜೆಗೆ ನವೆಂಬರ್​ 16 ರಿಂದ ಶಬರಿಮಲೆ ಅಯ್ಯಪ್ಪ ಸ್ವಾಮಿ ದೇವಸ್ಥಾನದ ಬಾಗಿಲು ತೆರೆಯಲಾಗಿದ್ದು, ಮೊದಲ 20 ದಿನದ ಆದಾಯ ಅಂದರೆ ಡಿಸೆಂಬರ್​ 6ರವರೆಗೆ ಬರೋಬ್ಬರಿ 69.39 ಕೋಟಿ ರೂ ಬಂದಿದೆ. ಕಳೆದ 2018-19ನೇ ಸಾಲಿನ ಯಾತ್ರಿಗಳ ಸೀಸನ್​ಗೆ ಹೋಲಿಸಿದರೆ 27.55 ಕೋಟಿ ರೂ. ಹೆಚ್ಚಾಗಿದೆ. ಕಳೆದ ಸೀಸನ್​ನಲ್ಲಿ ಒಟ್ಟು 41.84 ಕೋಟಿ ರೂ. ಆದಾಯ ಸಂಗ್ರಹವಾಗಿತ್ತು ಎಂದು ಟ್ರ್ಯಾವಂಕೂರ್​ ದೇವಸ್ವಂ ಮಂಡಳಿ(ಟಿಡಿಬಿ) ತಿಳಿಸಿದೆ.

“ಅರವನ ಪ್ರಸಾದ” ಮಾರಾಟದಿಂದ 28.6 ಕೋಟಿ ರೂ. ಹಾಗೂ “ಅಪ್ಪಂ ಪ್ರಸಾದ” ಮಾರಾಟದಿಂದ 4.2 ಕೋಟಿ ರೂ. ಆದಾಯ ಸಂಗ್ರಹವಾಗಿದೆ. ದೇವಾಲಯದ ಹುಂಡಿಯಲ್ಲಿ 23.58 ಕೋಟಿ ರೂ. ಸಂಗ್ರಹವಾಗಿದೆ.

ಈಗಾಗಲೇ ಸುಪ್ರೀಂಕೋರ್ಟ್ ತೀರ್ಪು ಪ್ರಶ್ನಿಸಿ ಮರುಪರುಶೀಲನಾ ಅರ್ಜಿ ಸಲ್ಲಿಕೆಯಾಗಿದ್ದು, ಸದ್ಯಕ್ಕೆ ವಿಚಾರಣೆ ನಡೆಸದೇ ವಿಸ್ತೃತ ಪೀಠಕ್ಕೆ ಪ್ರಕರಣವನ್ನು ವರ್ಗಾಯಿಸಲಾಗಿದೆ. ಇದರ ನಡುವೆ ನವೆಂಬರ್​ 16ರಂದು ಮಂಡಲ ಪೂಜೆಗೆ ದೇವಸ್ಥಾನದ ಬಾಗಿಲು ತೆರೆದಾಗ ಸಾಕಷ್ಟು ಮಹಿಳೆಯರು ದೇವರ ದರ್ಶನ ಪಡೆಯಲು ಪೊಲೀಸರ ಭದ್ರತೆಯಿಂದ ಆಗಮಿಸಿದರೂ ಕೂಡ ಭಕ್ತರ ಆಕ್ರೋಶದಿಂದ ಸಾಧ್ಯವಾಗದೇ ಹಿಂತಿರುಗಿದ್ದರು.

Facebook Comments

comments