BANTWAL
ಮುಸ್ಲೀಂ ಮನೆಯಲ್ಲಿ ಡಾ. ಕಲ್ಲಡ್ಕ ಪ್ರಭಾಕರ್ ಭಟ್
ಬಂಟ್ವಾಳ,ಸೆಪ್ಟೆಂಬರ್ 16 : ಆರ್ ಎಸ್ ಎಸ್ ಹಿರಿಯ ಮುಖಂಡ ಡಾ. ಕಲ್ಲಡ್ಕ ಪ್ರಭಾಕರ್ ಭಟ್ ಮುಸ್ಲಿಂ ಸಮುದಾಯದ ಸಮಾರಂಭದಲ್ಲಿ ಭಾಗವಹಿಸುವ ಮೂಲಕ ಎಲ್ಲರನ್ನೂ ನಿಬ್ಬೆರಗಾಗಿರಿಸಿದ್ದಾರೆ.
ಬಂಟ್ವಾಳದ ಕಲ್ಲಡ್ಕ ಶಾಲೆಯ ಬಳಿಯೇ ಹಕೀಂ ಎಂಬವರ ಮುಸ್ಲಿಂ ಕುಟುಂಬವೊಂದಿದ್ದು, ಡಾ. ಪ್ರಭಾಕರ್ ಭಟ್ ಅವರ ಕುಟುಂಬದೊಂದಿಗೆ ಉತ್ತಮ ಬಾಂಧಾವ್ಯ ಹೊಂದಿದ್ದರು. ಶುಕ್ರವಾರ ರಾತ್ರಿ ಹಕೀಂ ಮನೆಯಲ್ಲಿ ಮಗಳ ಮೆಹಂದಿ ಕಾರ್ಯಕ್ರಮ ಏರ್ಪಡಿಸಿದ್ದರು. ಈ ಕಾರ್ಯಕ್ರಮಕ್ಕೆ ಡಾ. ಕಲ್ಲಡ್ಕ ಪ್ರಭಾಕರ್ ಭಟ್ ಅವರ ಕುಟುಂಬಕ್ಕೆ ಆಹ್ವಾನ ನೀಡಿದ್ದರು. ಆ ಆಹ್ವಾನವನ್ನು ಡಾ. ಭಟ್ ಅವರು ಸ್ವೀಕರಿಸಿ, ಮುಸ್ಲಿಂ ಕುಟುಂಬದ ಮನೆಯಲ್ಲಿ ಮೆಹಂದಿ ಕಾರ್ಯಕ್ರಮದಲ್ಲಿ ಕುಟುಂಬ ಸಮೇತ ಭಾಗವಹಿಸಿದ್ದಾರೆ. ಕಲ್ಲಡ್ಕ ಭಟ್ ದಂಪತಿ ಸಮೇತ ಮದುವೆ ಮನೆಗೆ ಬಂದು ಹರಸಿದ್ದಾರೆ. ಯಾವಾಗಲೂ ಕೋಮು ಸಂಘರ್ಷದಲ್ಲಿ ಉರಿಯುತ್ತಿದ್ದ ಬಂಟ್ವಾಳ, ಕಲ್ಲಡ್ಕ ಪರಿಸರದಲ್ಲಿ ಡಾ. ಕಲ್ಲಡ್ಕ ಪ್ರಭಾಕರ್ ಭಟ್ ಮುಸ್ಲಿಂ ವಿರೋಧಿ ಎಂದೇ ಟೀಕೆಗೆ ಒಳಗಾಗಿದ್ದರು.
ಆದರೆ ಮುಸ್ಲೀಮ್ ಕುಟುಂಬದ ಸಮಾರಂಭದ ಆಹ್ವಾನ ಸ್ವೀಕರಿಸಿ ಕುಟುಂಬ ಸಮೇತ ಅವರ ಮನೆಗೆ ತೆರಳಿ ಹರಸಿರುವುದು ಹಲವರಿಗೆ ಅಚ್ಚರಿ ಮೂಡಿಸಿದೆ.
ಮಗಳ ಮೆಹಂದಿ ಕಾರ್ಯಕ್ರಮ ಕ್ಕೆ ಹಿಂದುತ್ವದ ಪ್ರಬಲ ಪ್ರತಿಪಾದಕ, ಆರ್ ಎಸ್ ಎಸ್ ನಾಯಕ ಪ್ರಭಾಕರ್ ಭಟ್ ಬಂದು, ಮಗಳನ್ನು ಆಶೀರ್ವದಿಸಿದ್ದು ಹಕೀಂ ಕುಟುಂಬಿಕರಿಗೂ ಸಂತಸ ತಂದಿದೆ.
ಆದರೆ ವಿರೋಧಿಗಳ ಟೀಕೆಗಳು ಮಾತ್ರ ಸ್ವಲ್ಲ ಜೋರಾಗಿಯೇ ಇವೆ. ಮುಂದಿನ ವಿಧಾನ ಸಭಾ ಚುನಾವಣೆಯ ಗುರಿಯನ್ನಿಟ್ಟುಕೊಂಡು ಡಾ. ಕಲ್ಲಡ್ಕ ಪ್ರಭಾಕರ್ ಭಟ್ ಅವರು ಈ ಮುಸ್ಲೀಂ ಸಮುದಾಯದ ಓಲೈಕೆಯ ನಡೆ ಅನುಸರಿಸುತ್ತಿದ್ದಾರೆ ಎಂದು ಟೀಕಿಸಿದ್ದಾರೆ.