FILM
ರಿಚ್ಚಿ ಟೈಟಲ್ ವಿವಾದ – ನಟ ರಕ್ಷಿತ್ ಶೆಟ್ಟಿ ವಿರುದ್ಧ ದೂರು
ಬೆಂಗಳೂರು: ರಿಚ್ಚಿ ಸಿನಿಮಾ ಟೈಟಲ್ ವಿವಾದದ ವಿಚಾರವಾಗಿ ನಟ ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ವಿರುದ್ಧ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ದೂರು ದಾಖಲಾಗಿದೆ.
ನಿರ್ದೇಶಕ ಹೇಮಂತ್ ಎಂಬುವವರು ದೂರು ನೀಡಿದ್ದು, ರಿಚ್ಚಿ ಎಂಬ ಹೆಸರಿನಲ್ಲಿ ರಕ್ಷಿತ್ ಶೆಟ್ಟಿಗೂ ಮೊದಲೇ ಟೈಟಲ್ ರಿಜಿಸ್ಟರ್ ಮಾಡಿಸಿದ್ದೇವೆ. ಎರಡು ವರ್ಷದ ಮೊದಲೇ ಚಿತ್ರದ ಟೈಟಲ್ ನೋಂದಣಿ ಮಾಡಲಾಗಿದೆ. ಟೈಟಲ್ ರಿನಿವಲ್ ಕೂಡ ಆಗಿದೆ. ಆದರೆ ರಕ್ಷಿತ್ ಶೆಟ್ಟಿ ಕೂಡ ರಿಚ್ಚಿ ಟೈಟಲ್‍ನಲ್ಲಿ ಸಿನಿಮಾ ಮಾಡಲು ಹೊರಟಿದ್ದಾರೆ ಎಂದು ಆರೋಪ ಮಾಡಿದ್ದಾರೆ.
ಈ ಹಿಂದೆಯೇ ಈ ವಿಚಾರವಾಗಿ ದೂರು ನೀಡಿದ್ದರೂ ಕೂಡ ಯಾವುದೇ ಪ್ರಯೋಜನ ಆಗಿಲ್ಲ. ಹಾಗಾಗಿ ಇಂದು ಮತ್ತೆ ಚೇಂಬರ್ ನಲ್ಲಿ ಮನವಿ ಸಲ್ಲಿಕೆ ಮಾಡಿದ್ದೇನೆ. ರಿಚ್ಚಿ ಟೈಟಲ್ ನನ್ನ ಬಳಿ ಇದೆ. ಆದರೆ ರಕ್ಷಿತ್ ಶೆಟ್ಟಿ ಶೀರ್ಷಿಕೆ ಬಳಕೆ ಮಾಡುತ್ತಿದ್ದಾರೆ. ಈ ಶೀರ್ಷಿಕೆಯನ್ನು ಮೊದಲು ರಿಜಿಸ್ಟರ್ ಮಾಡಿದ್ದು ನಾನು. ಈಗಾಗಲೇ ನಮ್ಮ ರಿಚ್ಚಿ ಸಿನಿಮಾದ 70% ಚಿತ್ರೀಕರಣ ಮುಗಿದಿದೆ. ಆದರೆ ರಿಚ್ಚಿ ಅಂದ್ರೆ ರಕ್ಷಿತ್ ಸಿನಿಮಾನೇ ಅನ್ನೋ ಹಾಗಾಗಿದೆ ಎಂದು ನಿರ್ದೇಶಕ ಹೇಮಂತ್ ತಿಳಿಸಿದ್ದಾರೆ.
ರಕ್ಷಿತ್ ಅವರಿಗೆ ಗೊತ್ತಿಲ್ಲದೆ ಟೈಟಲ್ ಅನೌನ್ಸ್ ಮಾಡಿರಬಹುದು. ಆದರೆ ಈಗಲಾದರೂ ಅವರು ಟೈಟಲ್ ವಾಪಸ್ ತೆಗೆದುಕೊಳ್ಳಬೇಕು ಎಂದು ಚೇಂಬರ್ ಮೂಲಕ ಮನವಿ ಮಾಡಿದ್ದೇವೆ. ರಕ್ಷಿತ್ ಅವರು ದೊಡ್ಡವರು, ನಾವು ಅವರಿಗೆ ಏನು ಹೇಳೋಕಾಗಲ್ಲ. ಅವರೇ ಅರ್ಥ ಮಾಡಿಕೊಳ್ಳಬೇಕು. ನಮ್ಮ ಬಳಿ ಟೈಟಲ್ ರಿಜಿಸ್ಟರ್ ಆಗಿರುವ ಎಲ್ಲಾ ದಾಖಲೆಗಳು ಸರಿಯಾಗಿದೆ. ಕಡೆ ಕ್ಷಣದಲ್ಲಿ ನಮಗೆ ಈ ರೀತಿ ಸಂಕಷ್ಟ ಬಂದರೆ, ತುಂಬಾ ತೊಂದರೆ ಆಗುತ್ತೆ ಎಂದು ಹೇಮಂತ್ ತಮ್ಮ ಆಳಲನ್ನು ತೋಡಿಕೊಂಡಿದ್ದಾರೆ.
You must be logged in to post a comment Login