KARNATAKA
ಕಾಂತಾರ 2 ಚಿತ್ರತಂಡಕ್ಕೆ ಸಂಕಷ್ಟ – ಅರಣ್ಯದಲ್ಲಿ ಬೆಂಕಿ ಹಚ್ಚಿ ಪಟಾಕಿ ಸಿಡಿಸಿ ನಿಯಮ ಉಲ್ಲಂಘನೆ ಆರೋಪ
ಹಾಸನ ಜನವರಿ 20: ರಿಷಬ್ ಶೆಟ್ಟಿ ಅವರ ಕಾಂತಾರ 2 ಚಿತ್ರಕ್ಕೆ ವಿಘ್ನಗಳು ಬರಲಾರಂಭಿಸಿದೆ. ಕಾಡಿನಲ್ಲಿ ಚಿತ್ರೀಕರಣ ವೇಳೆ ಅರಣ್ಯ ನಿಯಮ ಉಲ್ಲಂಘನೆ ಮಾಡಿರುವ ಆರೋಪ ಕೇಳಿಬಂದಿದೆ. ಕಾಡುಪ್ರಾಣಿಗಳಿರುವ ಅರಣ್ಯ ಪ್ರದೇಶದಲ್ಲಿ ಬೆಂಕಿ ಹಚ್ಚಿ, ಪಟಾಕಿ ಸಿಡಿಸಿ ಚಿತ್ರೀಕರಣ ಮಾಡಲಾಗಿದೆ ಎಂದು ಆರೋಪಿಸಲಾಗಿದ್ದು, ಇದನ್ನು ಪ್ರಶ್ನೆ ಮಾಡಿದವರ ಮೇಲೆ ಸಿನಿಮಾ ತಂಡ ಹಲ್ಲೆ ಮಾಡಿದೆ ಎಂದು ವರದಿಯಾಗಿದೆ.
ಕಾಂತಾರ 2 ಚಿತ್ರದ ಚಿತ್ರಿಕರಣ ಹಾಸನ ಜಿಲ್ಲೆಯ ಹೇರೂರು ಅರಣ್ಯ ಪ್ರದೇಶದಲ್ಲಿ ನಡೆಸುತ್ತಿದೆ. ಅಲ್ಲಿ ಅರಣ್ಯ ಪ್ರದೇಶ ಹಾನಿ ಮಾಡಿ, ಅಲ್ಲಿ ಸೆಟ್ ಹಾಕಿ ಚಿತ್ರೀಕರಣ ಮಾಡಲಾಗುತ್ತಿದೆ. ಪ್ರಶ್ನಿಸಿದ ಸ್ಥಳೀಯ ವ್ಯಕ್ತಿಗೆ ಹಲ್ಲೆ ಮಾಡಿರೋ ಆರೋಪ ಹೊರಿಸಲಾಗಿದೆ. ಡಿಎಫ್ಓ ರವರೇ ಅರಣ್ಯ , ಕಾಡುಪ್ರಾಣಿಗಳ ರಕ್ಷಿಸುವಂತೆ ಪರಿಸರಪ್ರೇಮಿಗಳು ಮನವಿ ಮಾಡಿದ್ದಾರೆ. ಗೋಮಾಳ ಪ್ರದೇಶದಲ್ಲಿ ಚಿತ್ರೀಕರಣ ಮಾಡೋ ಅನುಮತಿ ಪಡೆದು ಅರಣ್ಯ ಪ್ರದೇಶದಲ್ಲಿ ಚಿತ್ರೀಕರಣ ಮಾಡಲಾಗಿದ್ದು, ಅರಣ್ಯ ಸಚಿವರೇ ಈ ಬಗ್ಗೆ ಕ್ರಮವಹಿಸಲು ಒತ್ತಾಯಿಸಲಾಗಿದೆ.