LATEST NEWS
ರ‍್ಯಾಗಿಂಗ್ ಪ್ರಶ್ನಿಸಿದ ಪ್ರಿನ್ಸಿಪಾಲ್ ಗೆ ಹಲ್ಲೆ ನಡೆಸಿದ ವಿಧ್ಯಾರ್ಥಿಗಳು…!!
ಮಂಗಳೂರು ಮಾರ್ಚ್ 5: ವಿಧ್ಯಾಕಾಶಿಯಂದೇ ಕರೆಯಲ್ಪಡುವ ಮಂಗಳೂರಿನಲ್ಲಿ ವಿಧ್ಯಾರ್ಥಿಗಳ ರ‍್ಯಾಗಿಂಗ್ ಪ್ರಕರಣ ದಿನದಿಂದ ದಿನಕ್ಕೆ ಹೆಚ್ಚುತ್ತಲೆ ಇದ್ದು ಇದೀಗ ರ‍್ಯಾಗಿಂಗ್ ನಡೆಸಿದ ವಿದ್ಯಾರ್ಥಿಗಳನ್ನು ಪ್ರಶ್ನಿಸಿದ ಪ್ರಾಂಶುಪಾಲರಿಗೆ ವಿಧ್ಯಾರ್ಥಿಗಳು ಹಲ್ಲೆ ನಡೆಸಿರುವ ಘಟನೆ ಮಂಗಳೂರಿನ ಖಾಸಗಿ ಕಾಲೇಜೊಂದರಲ್ಲಿ ನಡೆದಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರು ವಿಧ್ಯಾರ್ಥಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಬಂಧಿತ ವಿಧ್ಯಾರ್ಥಿಗಳನ್ನು ಮಹಮ್ಮದ್ ಬಾಝಿಲ್, ಸಂಭ್ರಮ್ ಆಳ್ವ, ಸಮೀಲ್, ಅಶ್ವಿನ್ ಎಸ್. ಜಾನ್ಸನ್ ಎಂದು ಗುರುತಿಸಲಾಗಿದೆ. ಮುಕ್ಕದ ಶ್ರೀನಿವಾಸ ಕಾಲೇಜ್ ನಲ್ಲಿ ಹಿರಿಯ ವಿಧ್ಯಾರ್ಥಿಗಳು ರ‍್ಯಾಗಿಂಗ್ ನಡೆಸಿರುವ ಬಗ್ಗೆ ಕಿರಿಯ ವಿದ್ಯಾರ್ಥಿಗಳು ಪ್ರಿನ್ಸಿಪಾಲರ ಗಮನಕ್ಕೆ ತಂದಿದ್ದರು. ಅದರಂತೆ ನಾಲ್ವರು ವಿದ್ಯಾರ್ಥಿಗಳನ್ನು ಕರೆದ ಪ್ರಿನ್ಸಿಪಾಲ್ ಬುದ್ಧಿಮಾತು ಹೇಳಿದ್ದಲ್ಲದೆ, ಇನ್ನು ಮುಂದುವರಿಸಿದರೆ ಡಿಬಾರ್ ಮಾಡುವುದಾಗಿ ಎಚ್ಚರಿಸಿದ್ದಾರೆ. ಈ ವೇಳೆ ವಿದ್ಯಾರ್ಥಿಗಳು ಪ್ರಿನ್ಸಿಪಾಲ್‌ಗೆ ಏಕಾಏಕಿ ಹಲ್ಲೆ ನಡೆಸಿದ್ದಾರೆ.
ಈ ಬೆಳವಣಿಗೆಯಿಂದ ಪ್ರಿನ್ಸಿಪಾಲ್ ಅವರೇ ಕೆಲ ಕಾಲ ಶಾಕ್‌ಗೊಳಗಾಗಿದ್ದಾರೆ. ಹಲ್ಲೆ ಮಾಡಿದ ಆರೋಪಿಗಳನ್ನು ಸುರತ್ಕಲ್ ಪೊಲೀಸರು ಬಂಧಿಸಿ, ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ನಗರ ಕಮಿಷನರೇಟ್ ವ್ಯಾಪ್ತಿಯಲ್ಲಿ ಎರಡು ತಿಂಗಳ ಅವಧಿಯಲ್ಲಿ ಮೂರನೇ ರ‍್ಯಾಗಿಂಗ್ ಪ್ರಕರಣ ವರದಿಯಾಗಿದೆ. ನಗರದ ಕಾಲೇಜುಗಳಲ್ಲಿ ರ‍್ಯಾಗಿಂಗ್ ಪ್ರಕರಣ ಹೆಚ್ಚುತ್ತಿರುವುದು ಹೊರ ಜಿಲ್ಲೆ, ರಾಜ್ಯದ ಪಾಲಕರು ಆತಂಕ ಪಡುವಂತಾಗಿದೆ. ಈ ಹಿಂದೆ ವಳಚ್ಚಿಲ್ ಹಾಗೂ ದೇರಳಕಟ್ಟೆಯಲ್ಲಿ ರ‍್ಯಾಗಿಂಗ್ ಪ್ರಕರಣ ಬೆಳಕಿಗೆ ಬಂದಿತ್ತು.