ತಾತ ದೇವೇಗೌಡರಿಗೊಸ್ಕರ ಸಂಸದ ಸ್ಥಾನಕ್ಕೆ ರಾಜೀನಾಮೆ ನೀಡಲು ಮುಂದಾದ ಪ್ರಜ್ವಲ್ ರೇವಣ್ಣ

ಹಾಸನ ಮೇ 24: ಹಾಸನದ ನೂತನ ಸಂಸದ ಪ್ರಜ್ವಲ್ ರೇವಣ್ಣ ರಾಜೀನಾಮೆ ನೀಡಲು ಮುಂದಾಗಿದ್ದಾರೆ. ತಾತ ದೇವೇಗೌಡರು ತುಮಕೂರು ಕ್ಷೇತ್ರದಲ್ಲಿ ಸೋತ ಹಿನ್ನಲೆಯಲ್ಲಿ ಮನನೊಂದಿರುವ ಪ್ರಜ್ವಲ್ ರೇವಣ್ಣ ದೇವೇಗೌಡರನ್ನು ಮತ್ತೆ ಸಂಸದರನ್ನಾಗಿಸುವ ಹಿನ್ನಲೆಯಲ್ಲಿ ಸಂಸದ ಸ್ಥಾನಕ್ಕೆ ರಾಜೀನಾಮೆ ನೀಡಲು ಮುಂದಾಗಿದ್ದಾರೆ.

ಹಾಸನದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಪ್ರಜ್ವಲ್ ರೇವಣ್ಣ ಕಾರ್ಯಕರ್ತರು, ಹಿರಿಯ ನಾಯಕರು ಆಶೀರ್ವಾದ ಪಡೆದು ನಾನು ರಾಜೀನಾಮೆ ನೀಡುತ್ತೇನೆ ಎಂದು ಹೇಳಿದರು. ಹಾಸನದಲ್ಲಿ ಜೆಡಿಎಸ್ ಗೆದ್ದು ಸಂತೋಷವಾಗಿದ್ದರೂ ಗೆದ್ದು ಸೋತಂತೆ ಅನುಭವವಾಗುತ್ತಿದೆ ಎಂದು ಹೇಳಿದರು.

ತುಮಕೂರಿಗೆ ದೇವೇಗೌಡರು ಅಪಾರ ಹೋರಾಟ ಮಾಡಿದ್ದಾರೆ, ದೇವೇಗೌಡರು ಹೋರಾಟದಿಂದಲೇ ಬಂದವರು ಯಾವತ್ತೂ ರಾಜಕೀಯದಿಂದ ಬಂದವರಲ್ಲಾ, ಆದರೂ ದೇವೇಗೌಡರು ತುಮಕೂರಿನಲ್ಲಿ ಸೋತಿದ್ದು, ಆಕಸ್ಮಿಕವಾಗಿ ಸೋಲಾಗಿದೆ ಯಾರೂ ಬೇಸರ ಮಾಡಿಕೊಳ್ಳಬೇಡಿ ಎಂದು ದೇವೇಗೌಡರನ್ನ ನೆನೆದು ಸಂಸದ ಪ್ರಜ್ವಲ್ ಭಾವುಕರಾದರು.

ಈ ನಿರ್ಧಾರದ ಹಿಂದೆ ಯಾರ ಒತ್ತಡವೂ ಇಲ್ಲಾ ಯಾರೂ ತಪ್ಪು ತಿಳಿದುಕೊಳ್ಳಬೇಡಿ ಎಂದು ಹೇಳಿದ ಪ್ರಜ್ವಲ್ ರೇವಣ್ಣ ಇಂದು ಮದ್ಯಾಹ್ನ ಒಂದು ಗಂಟೆಗೆ ದೇವೇಗೌಡರ ಬಳಿಗೆ ಹೋಗಿ ಮನ ಒಲಿಸುವೆ, ದೇವೇಗೌಡರು ಮತ್ತೆ ಹಾಸನಕ್ಕೆ ಬರಬೇಕು ಎಂದು ಹೇಳಿದರು.

Facebook Comments

comments