FILM
ಬ್ರಾಹ್ಮಣ ಸಮುದಾಯದ ಕ್ಷಮೆ ಕೇಳಿದ ‘ಪೊಗರು’ ನಿರ್ದೇಶಕ ನಂದ ಕಿಶೋರ್
ಬೆಂಗಳೂರು, ಫೆಬ್ರವರಿ 22: ಇತ್ತೀಚೆಗಷ್ಟೆ ಬಿಡುಗಡೆ ಆದ ಧ್ರುವ ಸರ್ಜಾ-ರಶ್ಮಿಕಾ ಮಂದಣ್ಣ ನಟನೆಯ ‘ಪೊಗರು’ ಸಿನಿಮಾದಲ್ಲಿ ಬ್ರಾಹ್ಮಣ ಸಮುದಾಯಕ್ಕೆ ಅವಮಾನ ಮಾಡಲಾಗಿದೆ ಎಂದು ಆರೋಪಿಸಿದ್ದ ಕರ್ನಾಟಕ ರಾಜ್ಯ ಬ್ರಾಹ್ಮಣ ಅಭಿವೃದ್ಧಿ ಮಂಡಳಿ ಆರೋಪಿಸಿತ್ತು.
ಬ್ರಾಹ್ಮಣ ಸಮುದಾಯಕ್ಕೆ ಅವಹೇಳನ ಮಾಡಿರುವ ದೃಶ್ಯಗಳನ್ನು ಸಿನಿಮಾದಿಂದ ತೆಗೆದು ಹಾಕಬೇಕು ಜೊತೆಗೆ ಚಿತ್ರತಂಡವು ಬ್ರಾಹ್ಮಣ ಸಮುದಾಯದ ಕ್ಷಮೆ ಕೇಳಬೇಕು, ಇಲ್ಲವಾದಲ್ಲಿ ರಾಜ್ಯದಾದ್ಯಂತ ಪ್ರತಿಭಟನೆ ನಡೆಸಲಾಗುವುದು ಎಂದು ಕರ್ನಾಟಕ ರಾಜ್ಯ ಬ್ರಾಹ್ಮಣ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಸಚ್ಚಿದಾನಂದ ಮೂರ್ತಿ ಎಚ್ಚರಿಕೆ ನೀಡಿದ್ದರು.
ಸಿನಿಮಾದಲ್ಲಿ ಹೋಮ ಮಾಡುತ್ತಿರುವ ಬ್ರಾಹ್ಮಣನ ಹೆಗಲ ಮೇಲೆ ಬೂಟು ಕಾಲಿಡುವ ದೃಶ್ಯವಿದೆ. ಅದಾದ ಬಳಿಕ ನಾಯಕನೇ ವೃದ್ಧ ಬ್ರಾಹ್ಮಣನನೊಬ್ಬನನ್ನು ಅಪಹರಿಸುತ್ತಾನೆ. ಅವರ ವೃತ್ತಿಯ ಬಗ್ಗೆಯೂ ಕೀಳಾಗಿ ಮಾತನಾಡುವ ಸಂಭಾಷಣೆ ಇದೆ. ಇದು ಹಲವು ಬ್ರಾಹ್ಮಣರಿಗೆ ಸಿಟ್ಟು ತರಿಸಿದೆ.
ಎಚ್ಚರಿಕೆಗೆ ಮಣಿದಿರುವ ಪೊಗರು ಸಿನಿಮಾ ನಿರ್ದೇಶಕ ನಂದ ಕಿಶೋರ್, ‘ಇದು ಬೇಕಂತ ಒಂದು ಜನಾಂಗಕ್ಕೆ ಧಕ್ಕೆ ತರಲು ಮಾಡಿಲ್ಲ, ಇದೊಂದು ಕಾಲ್ಪನಿಕವಾದ ಕಥೆ, ತಿಳಿದೋ ತಿಳಿಯದೆಯೋ ಈ ರೀತಿ ಆಗಿದೆ, ನಿಮಗೆ ನೋವಾಗಿದ್ದರೆ ಅದಕ್ಕೆ ನಾನು ಕ್ಷಮೆ ಕೇಳುತ್ತೇನೆ’ ಎಂದು ಕೈಮುಗಿದಿದ್ದಾರೆ ನಿರ್ದೇಶಕ ನಂದ ಕಿಶೋರ್.
ಮೂರು ವರ್ಷ ಕಾಲ ಕಷ್ಟಪಟ್ಟು ಸಿನಿಮಾ ಮಾಡಲಾಗಿದೆ, ಕೋವಿಡ್ ನಂತರ ಬಿಡುಗಡೆ ಆಗುತ್ತಿರುವ ಮೊದಲ ಬಿಗ್ ಬಜೆಟ್ ಕನ್ನಡ ಸಿನಿಮಾ, ಯಾವುದೇ ದುರುದ್ದೇಶ ಇಲ್ಲದೆ ಸಿನಿಮಾ ಮಾಡಿದ್ದೇವೆ, ನೀವುಗಳು ದೊಡ್ಡ ಮನಸ್ಸು ಮಾಡಿ ವಿವಾದವನ್ನು ಇಲ್ಲಿಗೇ ನಿಲ್ಲಿಸಿ ಎಂದಿದ್ದಾರೆ ನಂದ ಕಿಶೋರ್.
You must be logged in to post a comment Login