ಜಾರ್ಖಂಡ್ ಎಪ್ರಿಲ್ 21: ಬಾಲಿವುಡ್ ನಟ ಪಂಕಜ್ ತ್ರಿಪಾಠಿ ಅವರ ಸಹೋದರಿ ಹಾಗೂ ಆಕೆಯ ಗಂಡ ಸಂಚರಿಸುತ್ತಿದ್ದ ಕಾರು ಅಪಘಾತಕ್ಕೀಡಾಗಿ ಪಂಕಜ್ ತ್ರಿಪಾಠಿ ಅವರ ಬಾವ ಕೊನೆಯುಸಿರು ಎಳೆದಿದ್ದು, ಸಹೋದರಿ ಚಿಂತಾಜನಕ ಸ್ಥಿತಿಯಲ್ಲಿದ್ದಾರೆ.

ಪಂಕಜ್ ತ್ರಿಪಾಠಿ ಅವರ ಸಹೋದರಿ ಸರಿತಾ ತಿವಾರಿ ಹಾಗೂ ಅವರ ಪತಿ ರಾಜೇಶ್ ತಿವಾರಿ ಅವರು ಕಾರಿನಲ್ಲಿ ಪ್ರಯಾಣಿಸುತ್ತಿದ್ದರು. ಕಾರು ಅತಿ ವೇಗದಲ್ಲಿ ಇದ್ದಿದ್ದರಿಂದ ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದಿದೆ. ಡಿಕ್ಕಿ ಹೊಡೆದ ರಭಸಕ್ಕೆ ಕಾರು ಸಂಪೂರ್ಣ ಜಖಂ ಆಗಿದೆ. ಅಪಘಾತದ ತೀವ್ರತೆಗೆ ರಾಜೇಶ್ ತಿವಾರಿ ನಿಧನರಾಗಿದ್ದಾರೆ. ಕಾರಿನ ಒಳಗಿದ್ದ ರಾಜೇಶ್ ಮತ್ತು ಸರಿತಾ ಅವರನ್ನು ಸ್ಥಳೀಯರ ಸಹಾಯದಿಂದ ಪೊಲೀಸರು ಹೊರತೆಗೆದಿದ್ದಾರೆ.
ಅಪಘಾತದ ಬಳಿಕ ಧನ್ಬಾದ್ ಮೆಡಿಕಲ್ ಕಾಲೇಜ್ ಆಸ್ಪತ್ರೆಗೆ ರಾಜೇಶ್ ತಿವಾರಿ ಹಾಗೂ ಸರಿತಾ ತಿವಾರಿ ಅವರನ್ನು ದಾಖಲಿಸಲಾಯಿತು. ಅಷ್ಟು ಹೊತ್ತಿಗಾಗಲೇ ರಾಜೇಶ್ ತಿವಾರಿ ನಿಧನರಾಗಿದ್ದಾರೆ ಎಂದು ವೈದ್ಯರು ತಿಳಿಸಿದರು. ಸರಿತಾ ತಿವಾರಿ ಅವರಿಗೆ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಅವರಿ ಸ್ಥಿತಿ ಸದ್ಯಕ್ಕಂತೂ ಚಿಂತಾಜನಕವಾಗಿದೆ ಎಂದು ವರದಿ ಆಗಿದೆ.