LATEST NEWS
65 ಲಕ್ಷ ಲಾಟರಿ ಗೆದ್ದ ಪೋಟೋಗ್ರಾಫರ್

65 ಲಕ್ಷ ಲಾಟರಿ ಗೆದ್ದ ಪೋಟೋಗ್ರಾಫರ್
ಮಂಗಳೂರು ಮೇ 3: ದಕ್ಷಿಣಕನ್ನಡ ಜಿಲ್ಲೆಯ ಹೊಸಂಗಡಿಯ ಛಾಯಾಗ್ರಾಹಕರೊಬ್ಬರಿಗೆ ಕೇರಳ ರಾಜ್ಯ ಲಾಟರಿ ಹೊಡೆದಿದೆ. ಹೊಸಂಗಡಿ ಅಮ್ಮ ಲಾಟರಿ ಏಜೆನ್ಸಿಯಿಂದ ಏಪ್ರಿಲ್ 30ರಂದು 30 ರೂ. ಕೊಟ್ಟು ಖರೀದಿಸಿದ ಕೇರಳ ರಾಜ್ಯ ಲಾಟರಿ ವಿಎನ್‌ವಿನ್‌ತ್ರಿ 458ಕ್ಕೆ 65 ಲಕ್ಷ ರೂಪಾಯಿ ಒಲಿದಿದೆ.
ಹೊಸಂಗಡಿ ಬಳಿಯ ಮಜಿಬೈಲು ಮಂಜಯ್ಯ ಹಿತ್ಲು ನಿವಾಸಿ ಪ್ರಭಾಕರ ಶೆಟ್ಟಿ ಅವರೇ ಈ ಅದೃಷ್ಟವಂತರು. ಮಂಜೇಶ್ವರ ಬ್ಲಾಕ್ ಪಂಚಾಯಿತಿನ ಮಾಜಿ ಸದಸ್ಯರಾಗಿರುವ ಅವರು ಹವ್ಯಾಸಿ ಯಕ್ಷ ಗಾನ ಕಲಾವಿದರು ಹಾಗೂ ಕೃಷಿಕರಾಗಿದ್ದಾರೆ.

ವೃತ್ತಿಯಲ್ಲಿ ಪೋಟೋಗ್ರಾಫರ್ ಆಗಿರುವ ಪ್ರಭಾಕರ ಶೆಟ್ಟಿ ಎಪ್ರಿಲ್ 29ರ ಬೆಳಗ್ಗೆ ಮಂಗಳೂರಿಗೆ ಮದುವೆ ಸಮಾರಂಭಕ್ಕೆ ತೆರಳುವ ಸಂದರ್ಭ ಹೊಸಂಗಡಿಯಲ್ಲಿ ಅಮ್ಮ ಲಾಟರಿ ಏಜೆನ್ಸಿಯಿಂದ ಲಾಟರಿಯನ್ನು ಖರೀದಿಸಿದ್ದರು. ಎಪ್ರಿಲ್ 30ರ ಸಂಜೆ ಹೊತ್ತಿಗೆ ಡ್ರಾ ಆಗುತ್ತಿದ್ದಂತೆ ಬೇರೊಂದು ಸಮಾರಂಭದಲ್ಲಿದ್ದ ಪ್ರಭಾಕರ್ ಶೆಟ್ಟಿ ಅವರು ಏಜೆನ್ಸಿಯಲ್ಲಿ ಕೇಳಿದ್ದಾರೆ.
ಅದರಂತೆ ಏಜೆನ್ಸಿ ಮಾಲೀಕರು ನಂಬರು ನೀಡಿದ್ದು, ಆದರೆ ಪ್ರಭಾಕರ್ ಶೆಟ್ಟಿ ಟಿಕೆಟ್‌ನ್ನು ಮನೆಯಲ್ಲಿ ಬಿಟ್ಟು ಬಂದಿದ್ದರು. ಸಂಜೆ ವೇಳೆ ಮನೆಗೆ ತೆರಳಿ ಟಿಕೆಟು ನೋಡುತ್ತಿದ್ದಂತೆ ಅದೃಷ್ಟ ಲಕ್ಷ್ಮೀ ಒಲಿದಿದ್ದಳು. ಸದ್ಯ ಟಿಕೆಟ್ ಮಂಜೇಶ್ವರ ಸರ್ವಿಸ್ ಕೋ ಆಪರೇಟಿವ್ ಬ್ಯಾಂಕ್‌ಗೆ ಹಸ್ತಾಂತರಿಸಿದ್ದಾರೆ.