LATEST NEWS
ಅಚ್ಚೇ ದಿನ್ – ಒಂದು ಲೀಟರ್ ಪೆಟ್ರೋಲ್ ಗೆ ಈಗ 87 ರೂಪಾಯಿ

ನವದೆಹಲಿ ಜನವರಿ 8: ದೇಶದಲ್ಲಿ ಈಗ ಅಚ್ಚೇ ದಿನ್ ಹವಾ ಬಂದಿದ್ದು, ಪೆಟ್ರೋಲ್ ಬೆಲೆ ಸಾರ್ವಕಾಲಿಕ ದಾಖಲೆ ನಿರ್ಮಿಸಿದೆ. ಸತತ ವಾಗಿ ಏರಿಕೆಯಲ್ಲಿ ಪೆಟ್ರೋಲ್ ಮತ್ತು ಡಿಸೆಲ್ ಬೆಲೆಗಳು ಈಗ ಗ್ರಾಹಕರ ಜೇಬಿಗೆ ಸರಿಯಾಗಿ ಕತ್ತರಿ ಬಿದ್ದಿದ್ದು, ತೈಲ ಕಂಪೆನಿಗಳು ಗುರುವಾರ ಪೆಟ್ರೋಲ್ ಮತ್ತು ಡಿಸೆಲ್ ಬೆಲೆಯನ್ನು ಕ್ರಮವಾಗಿ ಲೀಟರ್ ಗೆ 23 ಹಾಗೂ 26 ಪೈಸೆಯಷ್ಟು ಏರಿಸಿದ್ದಾರೆ.
ದೆಹಲಿಯಲ್ಲಿ ಪೆಟ್ರೋಲ್ ಬೆಲೆ ಗುರುವಾರ 23 ಪೈಸೆ ಏರಿಕೆಯಾಗುವ ಮೂಲಕ ಪ್ರತಿ ಲೀಟರ್ ದರ – 84.20 ಮುಟ್ಟಿದೆ. ಡೀಸೆಲ್ ದರ 26 ಪೈಸೆ ಏರಿಕೆಯಾಗಿದ್ದು, ಪ್ರತಿ ಲೀಟರ್ ಬೆಲೆ – 74.38ಕ್ಕೆ ತಲುಪಿದೆ. ಮುಂಬೈನಲ್ಲಿ ಪೆಟ್ರೋಲ್ ದರ – 90.83 ಮತ್ತು ಡೀಸೆಲ್ – 81.07ಕ್ಕೆ ಏರಿದ್ದು, ದೇಶದಲ್ಲಿ ಗರಿಷ್ಠ ಮಟ್ಟದ ಬೆಲೆ ದಾಖಲಿಸಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ದರ ಪ್ರತಿ ಬ್ಯಾರಲ್ಗೆ 50.29 ಡಾಲರ್ ಇದ್ದು, ಒಪೆಕ್ ರಾಷ್ಟ್ರಗಳು ಕಳೆದ ಮೂರು ದಿನಗಳಿಂದ ಉತ್ಪಾದನೆಯನ್ನು ಹೆಚ್ಚಿಸದಿರಲು ನಿರ್ಣಯಿಸಿವೆ.

ಕಚ್ಚಾತೈಲ ಮಾರುಕಟ್ಟೆಯಲ್ಲಿ ದರ ಪರಿಷ್ಕರಣೆಯ ಜತೆಗೆ ಭಾರತದಲ್ಲಿ ತೈಲದ ಮೇಲಿನ ವ್ಯಾಟ್, ಅಬಕಾರಿ, ಸೆಸ್ ಸೇರಿ ಅಂದಾಜು ಶೇ. 60 ತೆರಿಗೆ ಇರುವುದು ತೈಲ ಬೆಲೆಯನ್ನು ದುಬಾರಿಗೊಳಿಸಿದೆ. ಕಳೆದ ಡಿಸೆಂಬರ್ 7ರಂದು ಪರಿಷ್ಕರಣೆಯಾಗಿದ್ದ ದರ ಒಂದು ತಿಂಗಳು ಸ್ಥಿರವಾಗಿತ್ತು. ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳು ಬುಧವಾರ ಪೆಟ್ರೋಲ್ ಬೆಲೆ 26 ಪೈಸೆ ಮತ್ತು ಡೀಸೆಲ್ ದರ 25 ಪೈಸೆ ಏರಿಸಿದ್ದವು.
ಬೆಂಗಳೂರಲ್ಲಿ ಗುರುವಾರ ಪೆಟ್ರೋಲ್ ಬೆಲೆಯಲ್ಲಿ 25 ಪೈಸೆ ಹೆಚ್ಚಳವಾಗಿದ್ದು, 87.4 ರೂ.ಗೆ ತಲುಪಿದೆ. ಡೀಸೆಲ್ ಬೆಲೆಯಲ್ಲಿ 28 ಪೈಸೆ ಏರಿಕೆಯಾಗಿದ್ದು, 78.87 ರೂ. ಆಗಿದೆ. ಇನ್ನು ಕೆಲವು ಖಾಸಗಿ ಪೆಟ್ರೋಲ್ ಬಂಕ್ ಗಳಲ್ಲಿ ಈಗಾಗಲೇ ಪೆಟ್ರೋಲ್ ಬೆಲೆ 90 ರೂಪಾಯಿ ದಾಟಿದೆ.