LATEST NEWS
ಜಮ್ಮುಕಾಶ್ಮೀರ – ಪ್ರವಾಸಿಗರ ಮೇಲೆ ಭಯೋತ್ಪಾದಕರ ಗುಂಡಿನ ದಾಳಿ

ಕಾಶ್ಮೀರ ಎಪ್ರಿಲ್ 22: ಭದ್ರತಾ ಸಿಬ್ಬಂದಿಗಳನ್ನು ಗುರಿ ಮಾಡಿಕೊಂಡು ದಾಳಿ ನಡೆಸುತ್ತಿದ್ದ ಭಯೋತ್ಪಾದಕರು ಇದೀಗ ಪ್ರವಾಸಿಗರನ್ನು ಗುರಿಯಾಗಿಸಿಕೊಂಡು ಗುಂಡಿನ ದಾಳಿ ನಡೆಸಿದ್ದಾರೆ. ದಕ್ಷಿಣ ಕಾಶ್ಮೀರದ ಪಹಲ್ಗಾಮ್‌ನ ಬೈಸರನ್‌ನಲ್ಲಿ ಪ್ರವಾಸಿಗರ ಗುಂಪಿನ ಮೇಲೆ ಭಯೋತ್ಪಾದಕರು ಗುಂಡಿನ ದಾಳಿ ನಡೆಸಿದ್ದು, ದಾಳಿಯಲ್ಲಿ ಓರ್ವ ಪ್ರವಾಸಿಗರು ಸಾವನಪ್ಪಿದ್ದಾರೆ ಎಂದು ವರದಿಯಾಗಿದೆ.
ಜಮ್ಮು ಮತ್ತು ಕಾಶ್ಮೀರದ ಅನಂತ್‌ನಾಗ್ ಜಿಲ್ಲೆಯ ಪಹಲ್ಗಾಮ್ ಪ್ರವಾಸಿ ರೆಸಾರ್ಟ್‌ನ ಮೇಲಿನ ಹುಲ್ಲುಗಾವಲುಗಳಲ್ಲಿ ಗುಂಡಿನ ಸದ್ದು ಕೇಳಿಬಂದಿದೆ ಎಂದು ಕಾಶ್ಮೀರ ಪೊಲೀಸರು ತಿಳಿಸಿದ್ದಾರೆ. ಮಿನಿ ಸ್ವಿಟ್ಜರ್ಲ್ಯಾಂಡ್ ಎಂದೇ ಹೆಸರಾಗಿರುವ ಪಹಲ್ಗಾಮ್ ನ ಬೈಸರನ್ ಕಣಿವೆಯಲ್ಲಿ ಟ್ರಕಿಂಗ್ ಗೆ ಹೋಗಿದ್ದ ಪ್ರವಾಸಿಗರ ಮೇಲೆ ಉಗ್ರರು ಮನಬಂದಂತೆ ಗುಂಡಿನ ದಾಳಿ ನಡೆಸಿದ್ದಾರೆ.

ಗುಂಡಿನ ದಾಳಿಯಲ್ಲಿ ಓರ್ವ ಪ್ರವಾಸಿಗ ಮೃತಪಟ್ಟಿರುವುದಾಗಿ ವರದಿಯಾಗಿದೆ. ಇನ್ನು ಏಳು ಮಂದಿಗೆ ಗಂಭೀರ ಗಾಯಗಳಾಗಿವೆ. ಗಾಯಾಳುಗಳನ್ನು ಸ್ಥಳಾಂತರಿಸಲು ಆ್ಯಂಬುಲೆನ್ಸ್ ಗಳನ್ನು ರವಾನಿಸಲಾಗಿದೆ. ಉಗ್ರರಿಂದ ದಾಳಿಯಾಗುತ್ತಿದ್ದಂತೆ ಭಾರತೀಯ ಸೇನೆ ಪ್ರದೇಶವನ್ನು ಸುತ್ತುವರೆದಿದ್ದು ಕಾರ್ಯಾಚರಣೆ ನಡೆಸುತ್ತಿದ್ದಾರೆ. ಲಷ್ಕರ್-ಎ-ತೊಯ್ಬಾದ ಒಂದು ಶಾಖೆಯಾದ ರೆಸಿಸ್ಟೆನ್ಸ್ ಫ್ರಂಟ್ (ಟಿಆರ್ಎಫ್) ದಾಳಿಯ ಹೊಣೆಯನ್ನು ಹೊತ್ತುಕೊಂಡಿದೆ. ಇಂಡಿಯಾ ಟುಡೇ ವರದಿಯ ಪ್ರಕಾರ , ಬೈಸರನ್ ಹುಲ್ಲುಗಾವಲುಗಳಲ್ಲಿ ಪ್ರವಾಸಿಗರ ಮೇಲೆ ಎರಡರಿಂದ ಮೂರು ಬಂದೂಕುಧಾರಿಗಳು ಮನಬಂದಂತೆ ಗುಂಡು ಹಾರಿಸಿದ್ದಾರೆ. ಪಹಲ್ಗಾಮ್‌ನಲ್ಲಿ ಭದ್ರತೆಯನ್ನು ಹೆಚ್ಚಿಸಲಾಗಿದೆ ಮತ್ತು ಪಡೆಗಳು ಪ್ರದೇಶವನ್ನು ಸುತ್ತುವರಿದಿದ್ದಾರೆ.