ಜಮ್ಮುಕಾಶ್ಮೀರ ಎಪ್ರಿಲ್ 22: ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್ ನಲ್ಲಿ ನಡೆದ ಭಯೋತ್ಪಾದಕರ ದಾಳಿಯಲ್ಲಿ ಶಿವಮೊಗ್ಗದ ರಿಯಲ್ ಎಸ್ಟೇಟ್ ಉದ್ಯಮಿ 47 ವರ್ಷದ ಮಂಜುನಾಥ್ ರಾವ್ ಮೃತಪಟ್ಟಿದ್ದಾರೆ.
ಶಿವಮೊಗ್ಗದ ವಿಜಯನಗರದ ನಿವಾಸಿ ಮಂಜುನಾಥ್ ರಾವ್ ಕುಟುಂಬ ಸಮೇತರಾಗಿ ಏಪ್ರಿಲ್ 19 ರಂದು ಕಾಶ್ಮೀರ ಪ್ರವಾಸಕ್ಕೆ ತೆರಳಿದ್ದರು.ಪ್ರವಾಸದ ವೇಳೆ ಪಹಲ್ಗಾಮ್ ಬಳಿ ಭಯೋತ್ಪಾದಕ ದಾಳಿ ನಡೆದಿದ್ದು, ಸ್ಥಳದಲ್ಲೇ ಮಂಜುನಾಥ್ ರಾವ್ ಮೃತಪಟ್ಟಿದ್ದಾರೆ ಎನ್ನಲಾಗಿದೆ.


ದಾಳಿಯಲ್ಲಿ ಮಡಿದ ಮಂಜುನಾಥ್ ಅವರ ಪತ್ನಿ ಪಲ್ಲವಿ ಮಾಧ್ಯಮಗಳ ಜೊತೆ ಮಾತನಾಡಿದ್ದು, ನಾವು ಏಪ್ರಿಲ್ 19 ರಂದು ಕಾಶ್ಮೀರಕ್ಕೆ ಪ್ರವಾಸಕ್ಕೆ ಹೋಗಿದ್ದೆವು, ಪಹಲ್ಗಾಮ್ ಇದು ಗುಡ್ಡಗಾಡು ಪ್ರದೇಶವಾದ್ದರಿಂದ, ಪ್ರವಾಸಿಗರು ಕಣಿವೆಯ ಮೂಲಕ ಹಾದುಹೋಗಲು ಕುದುರೆಗಳನ್ನು ಬಾಡಿಗೆಗೆ ಪಡೆಯಬೇಕಾಯಿತು. ಕೆಲವು ದಿನಗಳವರೆಗೆ ಎಲ್ಲವೂ ಸಾಮಾನ್ಯವಾಗಿತ್ತು. ಆದರೆ ಇಂದು, ದುರಂತ ಘಟನೆ ಸಂಭವಿಸಿದೆ. ನನ್ನ ಮಗನಿಗೆ ತಿಂಡಿ ತಿನ್ನಲು ಆಸೆ ಇತ್ತು. ಆದ್ದರಿಂದ, ನನ್ನ ಪತಿ ಅದನ್ನು ಖರೀದಿಸಲು ಯಾವುದೋ ಅಂಗಡಿಗೆ ಹೋದರು. ಆರಂಭದಲ್ಲಿ ನಮಗೆ ಗುಂಡಿನ ಶಬ್ದ ಕೇಳಿಸಿತು. ಕಣಿವೆಯಲ್ಲಿ ಪೊಲೀಸರು ಕೆಲವು ಪರೀಕ್ಷೆಗಳನ್ನು ಮಾಡುತ್ತಿದ್ದಾರೆ ಎಂದು ನಾವು ಭಾವಿಸಿದ್ದೆವು. ನಾನು ನನ್ನ ಪತಿಯನ್ನು ನೋಡಿದಾಗ, ಅವರು ರಕ್ತದ ಮಡುವಿನಲ್ಲಿ ಬಿದ್ದಿದ್ದರು ಎಂದರು.

ಅನಂತ್‌ನಾಗ್ ಜಿಲ್ಲೆಯ ಜನಪ್ರಿಯ ಪ್ರವಾಸಿ ತಾಣವಾದ ಪಹಲ್ಗಾಮ್‌ನ ಬೈಸರನ್ ಕಣಿವೆಯಲ್ಲಿ ಇಂದು ಮುಂಜಾನೆ ನಡೆದ ಭಯೋತ್ಪಾದಕ ದಾಳಿಯಲ್ಲಿ ಕನಿಷ್ಠ ಒಬ್ಬ ಪ್ರವಾಸಿ ಸಾವನ್ನಪ್ಪಿದ್ದಾರೆ ಮತ್ತು 12 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ ಎಂದು ಹೇಳಲಾಗಿದೆ. ಸದ್ಯ ಇಡೀ ಪ್ರದೇಶವನ್ನು ಭದ್ರತಾ ಸಿಬ್ಬಂದಿ ಸುತ್ತುವರೆದಿದ್ದು, ಭಯೋತ್ಪಾದಕರಿಗಾಗಿ ಹುಡುಕಾಟ ಆರಂಭಿಸಿದ್ದಾರೆ.

Share Information