ಬೆಂಗಳೂರು ಎಪ್ರಿಲ್ 21: ಡಿಆರ್ ಡಿಓ ದಲ್ಲಿ ಕರ್ತವ್ಯದಲ್ಲಿರುವ ವಿಂಗ್ ಕಮಾಂಡರ್ ಒಬ್ಬರು ರಸ್ತೆಯಲ್ಲಿ ನಡೆದ ಸಣ್ಣ ಅಪಘಾತದ ವಿಚಾರವನ್ನು ಭಾಷೆ ವಿವಾದಕ್ಕೆ ಸಿಲುಕಿಸುವ ಪ್ರಯತ್ನ ಮಾಡಿದ್ದಲ್ಲೇ ತನ್ನ ಮೇಲೆ ಹಲ್ಲೆ ಕನ್ನಡಿಗರು ಹಲ್ಲೆ ಮಾಡಿದ್ದಾರೆ ಎಂದು ವಿಡಿಯೋ ಮಾಡಿ ಆರೋಪಿಸಿದ್ದಾರೆ. ಆದರೆ ಘಟನಾ ಸ್ಥಳದಲ್ಲಿ ಸಿಕ್ಕ ಸಿಸಿಟಿವಿ ವಿಡಿಯೋಗಳು ವಿಂಗ್ ಕಮಾಂಡರ್ ಆರೋಪಗಳು ಸುಳ್ಳು ಎಂದು ಸಾಭೀತು ಪಡಿಸಿದೆ.
ಸಿವಿ ರಾಮನ್ ನಗರದ, ಗೋಪಾಲನ್ ಗ್ರ್ಯಾಂಡ್ ಮಾಲ್ ಬಳಿ ಘಟನೆ ನಡೆದಿದ್ದು, ಇಲ್ಲಿನ ಸಿಸಿಟಿವಿ ಕ್ಯಾಮೆರಾಗಳನ್ನು ಪರಿಶೀಲಿಸಿದಾಗ, ವಿಂಗ್‌ ಕಮಾಂಡರ್‌ ಬೋಸ್​ ಅವರು ಬೈಕ್​ ಸವಾರ, ಟೆಕ್ಕಿ ವಿಕಾಸ್ ಕುಮಾರ್‌ ಎಂಬುವರ ಮೇಲೆ ಹಲ್ಲೆ ಮಾಡಿರುವ ದೃಶ್ಯಗಳು ಕ್ಯಾಮೆರಾದಲ್ಲಿ ಸೆರೆಯಾಗಿವೆ.


ವಿಂಗ್‌ ಕಮಾಂಡರ್‌ ಬೋಸ್​ ಮತ್ತು ಅವರ ಪತ್ನಿ ಕಾರಿನಲ್ಲಿ ಹೋಗುತ್ತಿದ್ದರು. ಈ ವೇಳೆ, ಸಿವಿ ರಾಮನ್ ನಗರದ, ಗೋಪಾಲನ್ ಗ್ರ್ಯಾಂಡ್ ಮಾಲ್ ಬಳಿ ಬೋಸ್​ ಅವರ ಕಾರಿಗೆ ಬೈಕ್​ ಸವಾರ, ಟೆಕ್ಕಿ ವಿಕಾಸ್ ಕುಮಾರ್‌ ಅವರ ಬೈಕ್ ಟಚ್ ಆಗಿದೆ. ಈ ವಿಚಾರಕ್ಕೆ ಟೆಕ್ಕಿ ವಿಕಾಸ್ ಕುಮಾರ್‌ ಮತ್ತು ವಿಂಗ್‌ ಕಮಾಂಡರ್‌ ಬೋಸ್​ ನಡುವೆ ಗಲಾಟೆಯಾಗಿ ಪರಸ್ಪರ ಹೊಡದಾಡಿದ್ದಾರೆ. ಭಾಷೆ ವಿಚಾರಕ್ಕೆ ನನ್ನ ಮೇಲೆ ಹಲ್ಲೆ ಮಾಡಲಾಗಿದೆ ಎಂದು ವಿಂಗ್‌ ಕಮಾಂಡರ್‌ ಬೋಸ್​ ಅವರು ವಿಡಿಯೋ ಮಾಡಿದ್ದಾರೆ.


ಹಲ್ಲೆ ನಡೆದ ಬಳಿಕ ಬೋಸ್​ ಅವರು ಸಂದರ್ಭವನ್ನು ತಿರುಚಲು ಯತ್ನಿಸಿದ್ದಾರೆ. ಭಾಷೆ ವಿಚಾರಕ್ಕೆ ಗಲಾಟೆ ನಡೆದಿದೆ ಎಂದು ವಿಂಗ್‌ ಕಮಾಂಡರ್‌ ವಿಡಿಯೋದಲ್ಲಿ ಹೇಳಿದ್ದಾರೆ. ಟೆಕ್ಕಿ ವಿಕಾಸ್ ಕುಮಾರ್‌ ಮತ್ತು ಬೋಸ್​ ನಡುವೆ ಗಲಾಟೆ ನಡೆಯುತ್ತಿರುವ ವೇಳೆ, ಸ್ಥಳೀಯರು ಗಲಾಟೆ ಬಿಡಿಸಲು ಪ್ರಯತ್ನ ಪಟ್ಟರು. ಆದರೂ, ಕೂಡ ವಿಂಗ್‌ ಕಮಾಂಡರ್‌ ಬೋಸ್​ ಬಿಡದೆ ಟೆಕ್ಕಿ ವಿಕಾಸ್ ಕುಮಾರ್‌ ಮೇಲೆ ಹಲ್ಲೆ ಮಾಡಿರುವುದು ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಘಟನೆ ಸಂಬಂಧ ಬೈಯಪ್ಪನಹಳ್ಳಿ ಪೋಲಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರೆಸಿದ್ದಾರೆ.

ವಿಂಗ್‌ ಕಮಾಂಡರ್‌ ಬೋಸ್​ ಅವರ ಪತ್ನಿ ನೀಡಿದ ದೂರಿನ ಆಧಾರದ ಮೇಲೆ ಟೆಕ್ಕಿ ವಿಕಾಸ್ ಕುಮಾರ್‌ ಅವರ ವಿರುದ್ಧ ಬೈಯಪ್ಪನಹಳ್ಳಿ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ. ವಿಕಾಸ್​ ಕುಮಾರ್ ಅವರನ್ನು ಪೊಲೀಸರು ಬಂಧಿಸಿದ್ದಾರೆ. ಆದರೆ ಇದೀಗ ಸಾಮಾಜಿಕ ಜಾಲತಾಣದಲ್ಲಿ ವಿಂಗ್ ಕಮಾಂಡರ್ ಹಲ್ಲೆ ವಿಡಿಯೋ ವೈರಲ್ ಆಗಿದೆ. ಸಣ್ಣ ಗಲಾಟೆಯನ್ನು ಕನ್ನಡ ಭಾಷಾ ವಿವಾದಕ್ಕೆ ತಿರುಗಿಸಲು ಪ್ರಯತ್ನಿಸಿದ ವಿಂಗ್ ಕಮಾಂಡರ್ ವಿರುದ್ದ ಆಕ್ರೋಶ ಹೆಚ್ಚಾಗಿದೆ.

Share Information