Connect with us

LATEST NEWS

ಗುತ್ತಿಗೆದಾರರ ಜೊತೆ ಪರ್ಸಂಟೇಜ್ ವ್ಯವಹಾರಕ್ಕೆ ಇಳಿದ ಕಾಂಗ್ರೇಸ್ ಸರಕಾರ – ಶಾಸಕ ಕಾಮತ್ ಆಕ್ರೋಶ

ಮಂಗಳೂರು ಅಕ್ಟೋಬರ್ 14: ಬಿಜೆಪಿ ವಿರುದ್ದ ಆಧಾರ ರಹಿತವಾಗಿ 40% ಸರ್ಕಾರ ಎಂದು ಆರೋಪ ಮಾಡಿ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರ್ಕಾರ ಇಂದು ತಾನೇ ಗುತ್ತಿಗೆದಾರರ ಜೊತೆಗೆ ಪರ್ಸಂಟೇಜ್‌ ವ್ಯವಹಾರಕ್ಕೆ ಇಳಿದಿದ್ದು ಐಟಿ ಇಲಾಖೆಯ ದಾಳಿಯಿಂದ ರಾಜ್ಯದ ಜನತೆ ಮುಂದೆ ಜಗಜ್ಜಾಹೀರಾಗಿದೆ ಎಂದು ಶಾಸಕ ವೇದವ್ಯಾಸ್ ಕಾಮತ್ ಆಕ್ರೋಶ ವ್ಯಕ್ತಪಡಿಸಿದರು


ಐಟಿ ಇಲಾಖೆ ದಾಳಿ ನಡೆಸಿ ವಶಪಡಿಸಿಕೊಂಡಿರುವ ₹42 ಕೋಟಿ ರೂ. ತೆಲಂಗಾಣ ಚುನಾವಣೆಗೆ ಕಳುಹಿಸಲು ಸಂಗ್ರಹಿಸಿದ್ದು ಎನ್ನುವ ಮಾಹಿತಿ ಮಾಧ್ಯಮಗಳಲ್ಲಿ ಸುದ್ದಿಯಾಗುತ್ತಿದೆ. ಅದಕ್ಕೆ ಪೂರಕ ಎಂಬಂತೆ ಕೆಲವೇ ದಿನಗಳ ಹಿಂದೆ ನಡೆದ ಎಐಸಿಸಿ ಸಭೆಯಲ್ಲಿ ತೆಲಂಗಾಣ ಚುನಾವಣೆಯಲ್ಲಿ ಕಾಂಗ್ರೆಸ್ಸನ್ನು ಗೆಲ್ಲಿಸುವುದು ಕರ್ನಾಟಕ ಸರ್ಕಾರದ ಜವಾಬ್ದಾರಿ ಎಂದು ನಿರ್ಣಯವಾಗಿದ್ದು ಮಾಧ್ಯಮಗಳಲ್ಲಿ ವರದಿಯಾಗಿದೆ. ಒಂದು ವೇಳೆ ಈ ದಾಳಿ ನಡೆಯದೇ ಇದ್ದಿದ್ದರೆ ತೆಲಂಗಾಣ ಮಾತ್ರವಲ್ಲದೆ, ಇತ್ತೀಚಿಗೆ ಘೋಷಣೆಯಾದ 5 ರಾಜ್ಯಗಳ ವಿಧಾನಸಭಾ ಚುನಾವಣೆಗೂ ಕರ್ನಾಟಕದಿಂದ ಸಂಪತ್ತು ಸೋರಿಕೆಯಾಗುವ ಸಂಭವವಿತ್ತು ಎಂದರು.

 

ನಮ್ಮ ಸರ್ಕಾರದ ಮೇಲೆ ಆಧಾರವಿಲ್ಲದೆ ಆರೋಪ ಮಾಡಿದ್ದ ಅಂಬಿಕಾಪತಿಯೇ ಈಗ ಸಿಕ್ಕಿಬಿದ್ದಿದ್ದು, ರಾಜ್ಯ ಗುತ್ತಿಗೆದಾರರ ಸಂಘದ ಉಪಾಧ್ಯಕ್ಷನೇ ಸರ್ಕಾರದ ಪರವಾಗಿ ಹೀಗೆ ವಸೂಲಿಗೆ ಇಳಿದರೆ, ನ್ಯಾಯವಾಗಿ ದುಡಿವ ಗುತ್ತಿಗೆದಾರರ ಪಾಡು ಏನು? ರಾಜ್ಯದ ಜನತೆ ಈಗಾಗಲೇ ಬರ, ಲೋಡ್ ಶೆಡ್ಡಿಂಗ್ ನಂತಹ ಕಾರಣಗಳಿಂದ ಕಂಗೆಟ್ಟಿದ್ದಾರೆ. ಸರ್ಕಾರ ಮಾತ್ರ ಹೈ ಕಮಾಂಡ್ ಆದೇಶದಂತೆ ಕರ್ನಾಟಕವನ್ನು ಕೊಳ್ಳೆ ಹೊಡೆದು ಪಂಚರಾಜ್ಯಗಳ ಚುನಾವಣೆಗೆ ಹಣ ಕಳುಹಿಸಲು ಸಜ್ಜಾಗಿದೆ ಎಂಬ ಸುದ್ದಿ ಕೇಳಿ ಬೇಸರವಾಗುತ್ತಿದೆ ಎಂದರು.

ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಅದರ ಹೈಕಮಾಂಡ್ ಪಾಲಿಗೆ ಹಬ್ಬ, ಅಲ್ಲಿಗೆ ರಾಜ್ಯ ಅವರಿಗೆ ಎಟಿಎಂ ಆಗುತ್ತೆ ಎಂದು ಈ ಹಿಂದೆಯೇ ನಮ್ಮ ರಾಷ್ಟ್ರೀಯ ನಾಯಕ ಅಮಿತ್ ಶಾ ಅವರು ಹೇಳಿದ್ದರು. ಇದೀಗ ಸಾಕ್ಷಿ ಸಮೇತ ಅದು ಸಾಬೀತಾಗುತ್ತಿದೆ. ಈಗ ಸಿಕ್ಕಿರುವುದು ಕೇವಲ ಸಣ್ಣ ಮೊತ್ತವಷ್ಟೇ. ಖಂಡಿತ ಇದರ ವ್ಯಾಪ್ತಿ ಇನ್ನೂ ಬಹಳ ವಿಸ್ತಾರವಾಗಿದೆ. ಇಲ್ಲಿ ಕಾಂಗ್ರೆಸ್ ಪಕ್ಷದ ಏಜೆಂಟ್ ಆಗಿ ಕೆಲಸ ಮಾಡಿದ್ದು ಯಾರು? ಇದರಲ್ಲಿ ಸರ್ಕಾರದ ಪಾತ್ರ ಏನು? ಗುತ್ತಿಗೆದಾರರಿಗೆ ಬಿಡುಗಡೆಯಾಗಿರುವ 650 ಕೋಟಿ ರೂಗಳಿಗೆ ಸರಕಾರಕ್ಕೆ ಎಷ್ಟು ಪರ್ಸೆಂಟೇಜ್ ಫಿಕ್ಸ್ ಮಾಡಲಾಗಿತ್ತು? ಎಂಬೆಲ್ಲಾ ಪ್ರಶ್ನೆಗೆ ಉತ್ತರ ಸಿಗಲು ಸಮಗ್ರ ತನಿಖೆಯಾಗಲೇಬೇಕು. ಆ ಮೂಲಕ ಇದರ ಹಿಂದಿರುವ ಕಾಣದ “ಕೈ” ಗಳು ಯಾರದ್ದು ಎಂದು ರಾಜ್ಯಕ್ಕೆ ತಿಳಿಯಬೇಕು ಎಂದು ಸರ್ಕಾರ ವನ್ನು ಆಗ್ರಹಿಸಿದರು.

Share Information
Continue Reading
Advertisement
Click to comment

Leave a Reply

Your email address will not be published. Required fields are marked *