Connect with us

    BANTWAL

    ಕನಸುಗಳ ಜೊತೆ ಹೆಜ್ಜೆ ಹಾಕುತ್ತಿದ್ದ ಯುವತಿ ಮೇಲೆ ಹರಿದ ಕಾರು -‘ಪಾವನ’ ಇಲ್ಲದ ಮನೆಯಲ್ಲಿ ಸೂತಕದ ಛಾಯೆ..!

    ಬಂಟ್ವಾಳ: ವಿಧಿಯೇ ನಿನೇಷ್ಟು ಕ್ರೂರ…ಮಗುವಿನ ಹುಟ್ಟು ಹಬ್ಬದ ಆಚರಣೆಯ ಖುಷಿಯಿಂದ ಕೈ ಯಲ್ಲಿ ಕೇಕ್ ಹಿಡಿದು ನೂರಾರು ಕನಸುಗಳ ಜೊತೆ ಹೆಜ್ಜೆ ಹಾಕುತ್ತಿದ್ದ ಆ ಕನಸು ಕಂಗಳ ಚೆಲುವೆ ಮನೆಗೆ ಸೇರದೆ ಮಸಣ ಸೇರಿದಳು, ಬರ್ತಡೇ ಪಾರ್ಟಿ ಮಾಡಬೇಕಾದ ಮನೆಯಲ್ಲಿ ಸೂತಕದ ಛಾಯೆ, ಹುಟ್ಟು ಹಬ್ಬಕ್ಕೆಂದು ಬಂದವರು ಕಣ್ಣೀರು ಹಾಕಿದರು..!

    ಈ ಹೃದಯ ವಿದ್ರಾವಕ ಘಟನೆ ನಡೆದಿದ್ದು ಗುರುವಾರ ಸಂಜೆ ಸುಮಾರು 6.20 ನಿಮಿಷಕ್ಕೆ.

    ಬಂಟ್ವಾಳ ಬಾಯಿಲ ನಿವಾಸಿ ಶೇಖರ ಪೂಜಾರಿ ಅವರ ನಾಲ್ಕನೇ ಮಗಳಾದ ಪಾವನ ಅವರು ಬಸ್ಸ್ ನಿಂದ ಇಳಿದು ಮನೆಯ ಕಡೆ ನಡೆದುಕೊಂಡು ಹೋಗುವ ವೇಳೆ ಯಮಸ್ವರೂಪಿಯಾಗಿ ಬಂದ ಪಜೇರೋ ಕಾರು ಹಿಂಬದಿಯಿಂದ ಡಿಕ್ಕಿಯಾಗಿ ಸ್ಥಳದಲ್ಲಿಯೇ ಮೃತಪಟ್ಟಿದ್ದಳು.

    ಹುಟ್ಟು ಹಬ್ಬದ ಖುಷಿಯಲ್ಲಿದ್ದ ಮನೆಯಲ್ಲಿ ಸೂತಕದ ಛಾಯೆ..!
    ಹುಟ್ಟು ಹಬ್ಬದ ಆಚರಣೆಯ ಖುಷಿಯಲ್ಲಿದ್ದ ಶೇಖರ ಪೂಜಾರಿಯ ಮನೆಯಲ್ಲಿ ಸೂತಕದ ಛಾಯೆ ಆವರಿಸಿದೆ.
    ಶೇಖರ ಪೂಜಾರಿ ಅವರ ಮೂರನೇ ಮಗಳ , ಮಗುವಿನ ಎರಡನೇ ವರ್ಷದ ಹುಟ್ಟು ಹಬ್ಬವನ್ನು ಮಾಡುವ ತರಾತುರಿಯಲ್ಲಿ ಹಬ್ಬದ ವಾತವರಣದಲ್ಲಿದ್ದ ಮನೆಗೆ ಮರಣದ ವಾರ್ತೆ ಕೇಳಿದಾಗ ಇನ್ನೇನಾಗಬಹುದು,ಊಹಿಸಲು ಅಸಾಧ್ಯ…
    ಅಕ್ಕನ ಮಗಳ ಎರಡನೇ ವರ್ಷದ ಹುಟ್ಟು ಹಬ್ಬವನ್ನು ಮನೆಯಲ್ಲಿ ಸಂಭ್ರಮಿಸಬೇಕು ಎಂಬ ನೂರಾರು ಕನಸುಗಳೊಂದಿಗೆ ಇನ್ನೇನು ಮನೆಗೆ ಮುಟ್ಟುಬೇಕು ಎನ್ನುವಷ್ಟರಲ್ಲಿ ವಿಧಿಯ ಕ್ರೂರತೆಗೆ ಸಿಲುಕುವಂತಾಯಿತು.

    ಪಾವನನಿಲ್ಲದ ಮನೆಯಲ್ಲಿ ನೀರವ ಮೌನ
    ಮನೆಯಲ್ಲಿ ದುಖ: ಮಡುಗಟ್ಟಿದೆ, ಮಗಳ ಶಾಕ್ ನಿಂದ ಇನ್ನೂ ಹೊರ ಬರದ ಅಪ್ಪ,ಅಮ್ಮ,ಜೊತೆ ಸಹೋದರಿಯರು. ಯಾರೂ ಕೂಡ ಮಾತನಾಡುವ ಸ್ಥಿತಿಯಲ್ಲಿ ಇಲ್ಲ,ಘಟನೆಯನ್ನು ಅರಗಿಸಿಕೊಳ್ಳಲಾಗದ ನೋವು ಅವರನ್ನು ಕಾಡಿದೆ.
    ಕಣ್ಣೀರು ಬಿಟ್ಟರೆ ಎಲ್ಲವೂ ನೀರವ ಮೌನ. ಇದು ಶೇಖರ ಪೂಜಾರಿಯವರ ಮನೆಯ ಸದ್ಯದ ಚಿತ್ರಣ.
    ‌ಮುದ್ದಿನ ಮಗಳ ದುಖ:ದ ವಾರ್ತೆಯನ್ನು ಕೇಳಿದ ಬಳಿಕ ಶೇಖರ ಪೂಜಾರಿ ಅವರ ಮನೆಯಲ್ಲೀಗ ನೀರವ ಮೌನ ಆವರಿಸಿದೆ.
    ಕೈಯಲ್ಲಿತ್ತು ಕೇಕ್..!
    ಅಕ್ಕನ ಮಗಳ ಎರಡನೇ ವರ್ಷದ ಹುಟ್ಟು ಹಬ್ಬಕ್ಕೆಂದು ಬಿಸಿರೋಡಿನಿಂದ ಕೇಕ್ ಹಿಡಿದುಕೊಂಡು ಬಂದಿದ್ದಳು. ಬಸ್ ನಿಂದ ಇಳಿದು ಮನೆಯ ಕಡೆ ಹೆದ್ದಾರಿಯಲ್ಲಿ ನಡೆದುಕೊಂಡು ಹೋಗುವ ವೇಳೆ ಕೈ ಯಲ್ಲಿ ಕೇಕ್ ಕೂಡ ಇತ್ತು. ವಿಧಿ ಕಳುಹಿಸಿದ ಯಮರಾಯನ ಪಜೇರೋ ಕಾರು ನಡೆದುಕೊಂಡು ಹೋಗುತ್ತಿದ್ದ ಪಾವನ ಹಿಂಬಂದಿಯಿಂದ ಡಿಕ್ಕಿ ಹೊಡೆದು ಆಕೆ ನೀರು ಹರಿದುಹೋಗುವ ಚರಂಡಿಗೆ ಬಿದ್ದು ಸ್ವಲ್ಪ ದೂರ ಮಳೆಯ ನೀರಿಗೆ ಕೊಚ್ಚಿಕೊಂಡು ಹೋಗಿದ್ದಳು, ಅಪಘಾತಕ್ಕೆ ಆಕೆಯ ಪ್ರಾಣಪಕ್ಷಿ ಸ್ಥಳದಲ್ಲಿಯೇ ಹಾರಿಹೋಗಿತ್ತು. ಆದರೂ ಕೈಯಲ್ಲಿದ್ದ ಕೇಕ್ ಮಾತ್ರ ಅವಳ ಕೈ ಬಿಟ್ಟಿಲ್ಲ. ಇದನ್ನು ಕಂಡ ಎಂತಹ ಕಲ್ಲು ಹೃದಯವೂ ಕರಗಬಹುದು.

    ಮಳೆ ಸಾವಿಗೆ ಕಾರಣವಾಯಿತಾ?
    ತಾನು ದುಡಿಯಲು ಪ್ರಾರಂಭಿಸಿದ ಮೇಲೆ ಅಂದರೆ ಕೈಯಲ್ಲಿ ಸಂಪಾದನೆ ಮಾಡಲು ಪ್ರಾರಂಭ ಮಾಡಿದ ಮೇಲೆ ಮನೆಯ ಪ್ರಥಮ ಕಾರ್ಯಕ್ರಮ ಅಕ್ಕನ ಮಗಳ ಹುಟ್ಟು ಹಬ್ಬ. ಹಾಗಾಗಿ ಹುಟ್ಟು ಹಬ್ಬದ ಸಂಪೂರ್ಣ ಖರ್ಚು ನನ್ನದು ಎಂದಿದ್ದಳು ಪಾವನ. ಅದಕ್ಕಾಗಿ ಕೇಕ್ ಇತರ ಅಲಂಕಾರಿಕ ವಸ್ತುಗಳನ್ನು ಹಿಡಿದುಕೊಂಡು ಬಂದಿದ್ದಳು.

    ಕಾರು ಡಿಕ್ಕಿಯ ರಭಸಕ್ಕೆ ಪಾವಳ ಬಿದ್ದ ಸ್ಥಳ

    ಪ್ರತಿ ದಿನ ಇವಳು ಬಿಸಿರೋಡಿನಿಂದ ವೆಲಂಕಣಿ ಬಸ್ ನಲ್ಲಿ ದಾಸಕೋಡಿ ಎಂಬಲ್ಲಿ 5.45 ಕ್ಕೆ ಇಳಿದು ಅಲ್ಲೇ ನಿಂತುಕೊಳ್ಳತ್ತಾಳೆ. ಬಳಿಕ ಅವರ ಬಾವ ಅಥವಾ ತಂದೆ ಬೈಕಿನಲ್ಲಿ ಮನೆಗೆ ನಿತ್ಯ ಕರೆದುಕೊಂಡು ಹೋಗುತ್ತಾರೆ. ಕೆಲವೊಂದು ಸಂದರ್ಭಗಳಲ್ಲಿ ಮಾತ್ರ ಆಕೆ ನಡೆದುಕೊಂಡು ಹೋಗುತ್ತಾಳೆ. ಗುರುವಾರ ಏನಾಯಿತು ಅಂದರೆ ಬರ್ತಡೇ ಕಾರ್ಯಕ್ರಮಕ್ಕಾಗಿ ಕೇಕ್ ಮತ್ತು ಇತರ ವಸ್ತುಗಳನ್ನು ಪಡೆದುಕೊಂಡು ಬರುವಾಗ ಸ್ವಲ್ಪ ತಡವಾಯಿತು. ಹಾಗಾಗಿ ಬಾವನಿಗೆ ಪೋನ್ ಮಾಡಿದ್ದಳು. ಜೋರಾಗಿ ಮಳೆ ಸುರಿಯುವ ಕಾರಣ ಬೈಕಿನಲ್ಲಿ ಹೋಗುವುದು ಅಸಾಧ್ಯ ಎಂದು ಹೇಳಿದ ಕಾರಣ ಅವಳು ಬಸ್ ನಲ್ಲಿ ಹೋಗಿದ್ದಳು. ಎಂದಿನಂತೆ ದಾಸಕೋಡಿ ಎಂಬಲ್ಲಿ ಬಸ್ ನಲ್ಲಿ ಇಳಿದು ಬಳಿಕ ರಸ್ತೆ ದಾಟಿ ಅಲ್ಲಿಂದ ಸುಮಾರು 300 ಮೀ . ರಾಷ್ಟ್ರೀಯ ಹೆದ್ದಾರಿ ರಸ್ತೆ ಬದಿಯಲ್ಲಿ ನಡೆದುಕೊಂಡು ಹೋಗುವ ಈ ದಾರುಣ ಘಟನೆ ನಡೆದಿದೆ. ಮಳೆ ಬರದಿದ್ದರೆ ಈಕೆಗೆ ಅಪಘಾತವಾಗುತ್ತಿರಲಿಲ್ಲ ಎಂದು  ಬಾವ ಪ್ರವೀಣ ಹೇಳುವಾಗ ದುಃಖ ಉಮ್ಮಳಿಸಿ ಬರುತ್ತಿತ್ತು.

    ಕುಟುಂಬದಲ್ಲಿ ಬಡತನ ಇದ್ರೂ ಸಭ್ಯ ಸುಸಂಸ್ಕೃತ ಫ್ಯಾಮಿಲಿ: 
    ಶೇಖರ್ ಪೂಜಾರಿ ಅವರದು ಬಡ ಕುಟುಂಬ, ಕೂಲಿ ಮಾಡಿ ಜೀವನ ಸಾಗಿಸುವ ಸುಸಂಸ್ಕೃತ ಫ್ಯಾಮಿಲಿ. ಅವರಿಗೆ ನಾಲ್ಕು ಹೆಣ್ಮಕ್ಕಳು. ಅವರಲ್ಲಿ ಪಾವನ ಕೊನೆಯವಳು. ಉಳಿದ ಮೂವರು ಅಕ್ಕಂದಿಯರಿಗೆ ಮದುವೆಯಾಗಿದೆ.ಪಾವನ ಡಿಗ್ರಿ ಮುಗಿಸಿ ಕಳೆದ ಆರು ತಿಂಗಳ ಹಿಂದೆಯಷ್ಟೇ ಬಿಸಿರೋಡಿನ ಸ್ಕಂದ ಸ್ಕ್ಯಾನಿಂಗ್ ಸೆಂಟರ್ ನಲ್ಲಿ ಕೆಲಸಕ್ಕೆ ಸೇರಿದ್ದಳು.


    ಸ್ನೇಹ ಜೀವಿಯಾಗಿದ್ದ ಪಾವನ
    ಇವರ ಕುಟುಂಬಕ್ಕೆ ಪಾವನ ಅಂದರೆ ಪ್ರೀತಿ,ಗುಣವಂತೆಯಾಗಿದ್ದ ಪಾವನ ಹಾಗೇ ಇಡೀ ಕುಟುಂಬದವರ ಜೊತೆ ಸ್ನೇಹ ಜೀವಿಯಾಗಿ ಎಲ್ಲರಿಗೂ ಬೇಕಾದವಳಾಗಿ ಹೃದಯಲ್ಲಿದ್ದಳು. ಗುಣವಂತೆಯಾಗಿದ್ದ ಪಾವನ ಯಾವುದೇ ಕಾರ್ಯಕ್ರಮದಲ್ಲಿ ಕರೆದು ಮಾತನಾಡುವ ಹುಡುಗಿಯಾಗಿದ್ದಳು.‌ ಎಲ್ಲರನ್ನು ಪ್ರೀತಿಯಿಂದ ಮಾತನಾಡಿಸುವ ಗುಣ ಹೊಂದಿರುವ ಈಕೆಯ ಸಾವು ಇಡೀ ಕುಟುಂಬಕ್ಕೆ ಬರಸಿಡಿಲಿನಂತಾಗಿದೆ.

    ತಂದೆಗೆ ಕೊನೆಯ ಕರೆ
    ಮನೆಯಲ್ಲಿ ಹುಟ್ಟು ಹಬ್ಬದ ಕಾರ್ಯಕ್ರಮಕ್ಕೆ ಬೇಗ ಬರುವಂತೆ ರಸ್ತೆಯಲ್ಲಿ ನಡೆದುಕೊಂಡು ಹೋಗುವ ವೇಳೆ ತಂದೆಗೆ ಕರೆ ಮಾಡಿದ್ದಳು. ಇದು ಅವಳ ಕೊನೆಯ ಪೋನ್ ಸಂಭಾಷಣೆ ಯಾಗಿತ್ತು ಎಂದು ಹೇಳಿ ತಂದೆ ಕಣ್ಣೀರು ಹಾಕುತ್ತಾರೆ.
    ಅದರ ಮೊದಲು ಅಕ್ಕನಿಗೆ ಕರೆ ಮಾಡಿ ಕೇಕ್ ಹಿಡಿದುಕೊಂಡು ಬರುವ ವಿಚಾರ ತಿಳಿಸಿದ್ದಳು.

    ಕಾರು ಚಾಲಕನ ಮೇಲೆ ಪ್ರಕರಣ:

    ಅತೀ ವೇಗ ಮತ್ತು ನಿರ್ಲಕ್ಷ್ಯ ತನದ ಚಾಲನೆಯಿಂದ ಯುವತಿ ಗೆ ಅಪಘಾತ ಮೃತಪಟ್ಟಿದ್ದಾಳೆ ಎಂಬ ಕಾರಣಕ್ಕಾಗಿ ಚಾಲಕನ ಮೇಲೆ ಸೆಕ್ಷನ್ 304 (a ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಕಾರು ಜಾರ್ಕಾಂಡ್ ನೊಂದಾವಣಿ ಹೊಂದಿದೆ.
    ಈತ ಸುಳ್ಯದಿಂದ ಮಂಗಳೂರಿಗೆ ಬರುತ್ತಿದ್ದ ಎನ್ನಲಾಗಿದೆ. ಜೋರಾಗಿ ಮಳೆ ಬರುತ್ತಿದ್ದರಿಂದ ರಸ್ತೆ ಸರಿಯಾಗಿ ಕಾಣಿಸುತ್ತಿರಲ್ಲಿಲ್ಲ ಎಂಬುದು ಆತನ‌ ಹೇಳಿಕೆ. ಅತೀಯಾದ ವೇಗದಿಂದ ಮತ್ತು ಅಜಾಗರೂಕತೆಯಿಂದ ಚಾಲನೆಯಿಂದ ಈತ ಯುವತಿಗೆ ಡಿಕ್ಕಿ ಹೊಡೆದಿದ್ದಾನೆ. ಡಿಕ್ಕಿ ಹೊಡೆದು ಬ್ರೇಕ್ ಹಾಕಿದ ರಭಸಕ್ಕೆ ಕಾರು ಮೂರು ಪಲ್ಟಿಯಾಗಿದೆ. ಅಪಘಾತದ ತೀವ್ರತೆಗೆ ಕಾರು ಸಂಪೂರ್ಣ ಜಖಂಗೊಂಡಿದೆ.
    ಅಪಘಾತ ನಡೆಸಿದ ಬಳಿಕ ಆತನೇ ನಾನು ಹುಡುಗಿಗೆ ಡಿಕ್ಕಿಯಾಗಿದೆ ಎಂದು ಸ್ಥಳೀಯರಲ್ಲಿ ತಿಳಿಸಿದ್ದ.
    ಆದರೆ ಯುವತಿ ಕಾಣುತ್ತಿರಲಿಲ್ಲ. ವಾಹನ ಮಗುಚಿ ಬಿದ್ದ ಕಾರಣ ಅಡಿಯಲ್ಲಿ ಇರಬೇಕು ಎಂದು ಹುಡುಕಿದರು ಸಿಗಲಿಲ್ಲ.
    ಬಳಿಕ ತೋಡಿನಲ್ಲಿ ಸುಮಾರು ‌ದೂರದಲ್ಲಿ ಪಾವನ ಅವರ ಮೃತದೇಹ ಕಂಡು ಬಂದಿತ್ತು.


    ಜೋರಾದ ಮಳೆಯಾದ ಕಾರಣ ತೋಡಿನಲ್ಲಿ ನೀರು ರಭಸದಿಂದ ಹರಿಯುತ್ತಿತ್ತು. ಹಾಗಾಗಿ ಪಾವನನ ಮೃತದೇಹ ಸ್ವಲ್ಪ ದೂರಕ್ಕೆ ಹೋಗಿತ್ತು. ಘಟನೆ ನಡೆದ ಸ್ಥಳದಲ್ಲಿ ಒಂದು ತಿಂಗಳ ಹಿಂದೆ ಲಾರಿಯೊಂದು ಪಲ್ಟಿಯಾಗಿತ್ತು. ಸುಮಾರು ವರ್ಷಗಳ ಹಿಂದೆ ಮಹಿಳೆಯೊರ್ವಳು ಮಾವಿನಹಣ್ಣು ಕೀಳುವ ವೇಳೆ ವಿದ್ಯುತ್ ವಯರ್ ಗೆ ಕೋಲು ತಾಗಿ ಮೃತಪಟ್ಟ ಘಟನೆ ನಡೆದಿತ್ತು ಎಂದು ಸ್ಥಳೀಯರು ಹೇಳುತ್ತಿದ್ದಾರೆ.

    Share Information
    Advertisement
    Click to comment

    You must be logged in to post a comment Login

    Leave a Reply