LATEST NEWS
ಅಸ್ಪಷ್ಟ ನೈತಿಕ ಪೊಲೀಸ್ ಗಿರಿ ಪ್ರಕರಣ ವಿರುದ್ದ ಪ್ರತಿಭಟನೆ ಯಾಕೆ ?

ಅಸ್ಪಷ್ಟ ನೈತಿಕ ಪೊಲೀಸ್ ಗಿರಿ ಪ್ರಕರಣ ವಿರುದ್ದ ಪ್ರತಿಭಟನೆ ಯಾಕೆ ?
ಮಂಗಳೂರು ಫೆಬ್ರವರಿ 14: ಮಂಗಳೂರಿನ ಅದ್ಯಪಾಡಿಯಲ್ಲಿ ಎರ್ ಲೈನ್ ಸಿಬ್ಬಂದಿಯ ಮೇಲೆ ನಡೆದಿದೆ ಎನ್ನಲಾದ ಲೈಂಗಿಕ ದೌರ್ಜನ್ಯ ಹಾಗೂ ಹಲ್ಲೆ ಪ್ರಕರಣ ಖಂಡಿಸಿ ಮಂಗಳೂರಿನಲ್ಲಿ ಇಂದು ವಿಧ್ಯಾರ್ಥಿಗಳು ಹಾಗೂ ಸಾರ್ವಜನಿಕರ ಹೆಸರಿನಲ್ಲಿ ಪ್ರತಿಭಟನೆ ಆಯೋಜಿಸಲಾಗಿದೆ.
ನಗರದ ಬಾವುಟಗುಡ್ಡೆಯ ಬಸ್ ನಿಲ್ದಾಣದಲ್ಲಿ ನಡೆಸಲು ಉದ್ದೇಶಿಸಲಾಗಿದ್ದು, ನಗರದಲ್ಲಿ ನಡೆದ ನೈತಿಕ ಪೊಲೀಸ್ ಗಿರಿಯ ವಿರುದ್ದ ಈ ಪ್ರತಿಭಟನೆ ಎಂದು ಹೇಳಲಾಗುತ್ತಿದೆ. ಈ ಪ್ರತಿಭಟನೆಯ ನೇತೃತ್ವವನ್ನು ಪ್ರಖ್ಯಾತರೆಂದು ಪ್ರಚಾರ ಪಡೆದಿರುವ ಸಾಮಾಜಿಕ ಹೋರಾಟಗಾರ್ತಿ ಹಾಗೂ ಕಾಂಗ್ರೇಸ್ ನ ಎನ್ ಎಸ್ ಯುಐ ನ ಮುಖಂಡರು ವಹಿಸಿಕೊಂಡಿದ್ದಾರೆ.

ಆದರೆ ಅದ್ಯಪಾಡಿಯಲ್ಲಿ ನಡೆದ ಘಟನೆಯಲ್ಲಿ ನೈತಿಕ ಪೊಲೀಸ್ ಗಿರಿ ನಡೆದಿರುವುದಾಗಿ ಅಥವಾ ಲೈಂಗಿಕ ದೌರ್ಜನ್ಯ ನಡೆದಿರುವ ಬಗ್ಗೆ ಇನ್ನು ಸ್ಪಷ್ಟನೆ ದೊರೆತಿಲ್ಲ. ತನಿಖೆ ನಡೆಸಿದ ಪೊಲೀಸ್ ಅಧಿಕಾರಿಗಳು ಈ ವಿಚಾರವನ್ನು ತಳ್ಳಿ ಹಾಕಿದ್ದಾರೆ. ಆದರೆ ಈ ಪ್ರತಿಭಟನೆಯ ಮೂಲಕ ಏನನ್ನು ಬಂಬಿಸಲು ಈ ಪ್ರತಿಭಟನಾಕಾರರು ಹೊರಟಿದ್ದಾರೆ ಎನ್ನುವುದು ಗೊತ್ತಾಗುತ್ತಿಲ್ಲ.
ಏರ್ ಲೈನ್ಸ್ ಉದ್ಯೋಗಿಯಾಗಿದ್ದ ಯುವತಿ ಹಾಗೂ ಆಕೆಯ ಸ್ನೇಹಿತ ತಡರಾತ್ರಿ ಅದ್ಯಪಾಡಿಯಲ್ಲಿ ಮೂರು ಮಂದಿ ಯುವಕರು ಕಾರನ್ನು ಅಡ್ಡಹಾಕಿ ನೈತಿಕ ಪೊಲೀಸ್ ಗಿರಿ ನಡೆಸಿದ್ದಲ್ಲದೇ ಲೈಂಗಿಕ ದೌರ್ಜನ್ಯ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ.
ಇನ್ನೊಂದೆಡೆ ಮೂರು ಯುವಕರು ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತಿದ್ದು, ಈ ಏರ್ ಲೈನ್ಸ್ ಉದ್ಯೋಗಿ ಯುವತಿ ಹಾಗೂ ಆಕೆಯ ಸ್ನೇಹಿತ ಸೇರಿದಂತೆ ಇನ್ನಿತರರ ವಿರುದ್ದ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಈ ಹಿನ್ನಲೆಯಲ್ಲಿ ಪ್ರಕರಣವನ್ನು ಏಕಾಏಕಿ ನೈತಿಕ ಪೊಲೀಸ್ ಗಿರಿ ಎಂದು ಪರಿಗಣಿಸಿದ್ದಾದರೂ ಹೇಗೆ ಎನ್ನುವ ಪ್ರಶ್ನೆ ಉದ್ಬವಿಸುತ್ತದೆ. ಹಿರಿಯ ಪೊಲೀಸ್ ಅಧಿಕಾರಿಗಳು ಈ ಪ್ರಕರಣದ ತನಿಖೆ ನಡೆಸುತ್ತಿದ್ದಾರೆ. ಅವರ ಪ್ರಶ್ನೆಗಳಿಗೆ ಯುವತಿ ಸರಿಯಾಗಿ ಉತ್ತರಿಸಿಲ್ಲ ಎಂದು ಹೇಳಲಾಗುತ್ತಿದೆ. ಹಲವಾರು ಮಹತ್ವದ ಪ್ರಶ್ನೆಗಳಿಗೆ ಪೊಲೀಸ್ ಅಧಿಕಾರಿಗಳಿಗೆ ಉತ್ತರ ದೊರೆತಿಲ್ಲ. ಹೀಗಿರುವಾಗ ಪ್ರಖ್ಯಾತ ಎಂದು ಪ್ರಚಾರ ಪಡೆದಿರುವ ಸಾಮಾಜಿಕ ಹೋರಾಟಗಾರ್ತಿ ಹಾಗೂ ಎನ್ ಎಸ್ ಯುಐ ನ ವಿಧ್ಯಾರ್ಥಿ ಮುಖಂಡರಿಗೆ ಇದು ನೈತಿಕ ಪೊಲೀಸ್ ಗಿರಿ ಪ್ರಕರಣ ಎಂದು ಸ್ಪಷ್ಟವಾದುದಾರೂ ಹೇಗೆ ಎನ್ನುವ ಪ್ರಶ್ನೆ ಉದ್ಬವಿಸುತ್ತಿದೆ.
ಈ ಪ್ರತಿಭಟನೆ ಹಮ್ಮಿಕೊಳ್ಳುವ ಮೂಲಕ ಯಾರನ್ನು ದಾರಿ ತಪ್ಪಿಸಲು ಈ ಪ್ರತಿಭಟನಾಕಾರರು ಹೊರಟಿದ್ದಾರೆ ? . ಮಂಗಳೂರು ಹೊರವಲಯದ ಪಿಲಿಕುಳ ನಿಸರ್ಗಧಾಮದ ಬಳಿ ವಿಧ್ಯಾರ್ಥಿನಿಯರ ಮೇಲೆ ಹಲ್ಲೆ ನಡೆಸಿ ನೈತಿಕ ಪೊಲೀಸ್ ಗಿರಿ ಪ್ರಕರಣ ನಡೆದಾಗ ಈ ಪ್ರತಿಭಟನಾ ಬ್ರಿಗೇಡ್ ಯಾಕೆ ರಸ್ತೆ ಗಿಳಿದಿಲ್ಲ ಎನ್ನುವ ಪ್ರಶ್ನೆ ಉದ್ಬವಿಸುತ್ತಿದೆ. ದಕ್ಷಿಣಕನ್ನಡ ಹಾಗೂ ಉಡುಪಿ ಜಿಲ್ಲೆಯಲ್ಲಿ ಹಲವಾರು ಲೈಂಗಿಕ ದೌರ್ಜನ್ಯ, ಅತ್ಯಾಚಾರ ಪ್ರಕರಣಗಳು ವರದಿಯಾದರೂ ಈ ಪ್ರತಿಭಟನಾ ಬ್ರಿಗೇಡ್ ಯಾಕೆ ರಸ್ತೆಗಿಳಿದು ಪ್ರತಿಭಟನೆ ನಡೆಸಿಲ್ಲ.
ಈ ಅಸ್ಪಷ್ಟ ಪ್ರಕರಣದ ಕುರಿತು ಅಷ್ಟೇಕೆ ಈ ಬ್ರಿಗೇಡ್ ಉತ್ಸುಕರಾಗಿದ್ದಾರೆ ಎನ್ನುವ ಕುತೂಹಲ ಮೂಡುತ್ತಿದೆ. ಈ ಪ್ರಶ್ನೆಗಳಿಗೆ ಪ್ರಖ್ಯಾತರೆಂದು ಪ್ರಚಾರ ಪಡೆಯುತ್ತಿರುವ ಸಾಮಾಜಿಕ ಹೋರಾಟಗಾರ್ತಿ ಹಾಗೂ ಎನ್ ಎಸ್ ಯುಐನ ಮುಖಂಡರೇ ಉತ್ತರಿಸಬೇಕಾಗಿದೆ.