Connect with us

    LATEST NEWS

    ವಾಟರ್ ವಾರಿಯರ್ ಗೆ ಈ ಬಾರಿಯ ಮಂಗಳೂರು ಪ್ರೆಸ್ ಕ್ಲಬ್ ವರ್ಷದ ಪ್ರಶಸ್ತಿ

    ವಾಟರ್ ವಾರಿಯರ್ ಗೆ ಈ ಬಾರಿಯ ಮಂಗಳೂರು ಪ್ರೆಸ್ ಕ್ಲಬ್ ವರ್ಷದ ಪ್ರಶಸ್ತಿ

    ಮಂಗಳೂರು ಡಿಸೆಂಬರ್ 17: ಏಕಾಂಗಿಯಾಗಿ ಅಪೂರ್ವ ಮತ್ತು ಅಪಾಯಕಾರಿಯಾದ ಕೆಲಸದ ಮೂಲಕ ಜೀವಜಲವನ್ನು ತರಿಸಿ ಬೋಳು ಗುಡ್ಡೆಯನ್ನು ನಂದನವನ ಮಾಡಿದ ಪ್ರಯತ್ನಶೀಲ ಪ್ರಗತಿಪರ ಕೃಷಿಕ ಅಮೈ ಮಹಾಲಿಂಗ ನಾಯ್ಕ ಅವರು ಮಂಗಳೂರು ಪ್ರೆಸ್ ಕ್ಲಬ್‌ನ ವರ್ಷದ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.

    ಬಂಟ್ವಾಳ ತಾಲೂಕಿನ ಅಡ್ಯನಡ್ಕ ಸಮೀಪದ ಅಮೈ ನಿವಾಸಿ 73ರ ಹರೆಯದ ಮಹಾಲಿಂಗ ನಾಯ್ಕ ಅವರನ್ನು ಪ್ರೊ. ಬಾಲಕೃಷ್ಣ ಗಟ್ಟಿ, ಡಾ.ವಸಂತ ಕುಮಾರ್ ಪೆರ್ಲ ಮತ್ತು ಡಾ.ನಾಗವೇಣಿ ಮಂಚಿ ನೇತೃತ್ವದ ಆಯ್ಕೆ ಸಮಿತಿಯು 2018ನೇ ವರ್ಷದ ಮಂಗಳೂರು ಪ್ರೆಸ್ ಕ್ಲಬ್‌ನ ಪುರಸ್ಕಾರಕ್ಕೆ ಆಯ್ಕೆ ಮಾಡಿದೆ.

    ಉರ್ವ ಚರ್ಚ್ ಸಭಾಂಗಣದಲ್ಲಿ ಜನವರಿ 5ರಂದು ನಡೆಯಲಿರುವ ಪ್ರೆಸ್ ಕ್ಲಬ್ ದಿನಾಚರಣೆಯಂದು ಅಮೈ ಮಹಾಲಿಂಗ ನಾಯ್ಕ ಅವರಿಗೆ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಮಂಗಳೂರು ಪ್ರೆಸ್ ಕ್ಲಬ್‌ನ ಪ್ರಧಾನ ಕಾರ್ಯದರ್ಶಿ ಇಬ್ರಾಹಿಂ ಅಡ್ಕಸ್ಥಳ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

    ಕೃಷಿಗೆ ನೀರು ಹಾಯಿಸಲು ಪಂಪ್ ಸೆಟ್‌ಗಳ ಸೌಲಭ್ಯಗಳೇ ಇಲ್ಲದ ಕಾಲದಲ್ಲಿ ಹಿಂದಿನ ತಲೆಮಾರಿನವರು ಅವಲಂಭಿಸಿದ್ದ ಸುರಂಗ ನೀರಿನ ವ್ಯವಸ್ಥೆಯಲ್ಲಿ ನಂಬಿಕೆ ಇಟ್ಟು, ಇದೇ ವ್ಯವಸ್ಥೆಯಲ್ಲಿ ವಿದ್ಯುತ್‌ರಹಿತವಾಗಿ ಗ್ರಾವಿಟಿ ನೆರವಿನಲ್ಲಿ ಕೃಷಿಗೆ ತುಂತುರು ನೀರಾವರಿ, ಸ್ಪಿಂಕ್ಲರ್ ನೀರಾವರಿ ವ್ಯವಸ್ಥೆಯನ್ನು ಕಲ್ಪಿಸುವಲ್ಲಿ ಯಶಸ್ವಿಯಾಗಿರುವ ಮಾಹಾಲಿಂಗ ನಾಯ್ಕ ಏಕಾಂಗಿಯಾಗಿ ಏಳು ಸುರಂಗಗಳನ್ನು ಕೊರೆದ ಒನ್ ಮ್ಯಾನ್ ಆರ್ಮಿ.

    ಮನೆ ಕಟ್ಟಲು ಅಸಾಧ್ಯವಾದ, ನೀರಿಲ್ಲದ ಇಳಿಜಾರು ಬೋಳು ಗುಡ್ಡದಲ್ಲಿ ಕೃಷಿ ತೋಟ ಮಾಡುವುದು ಮಹಾಲಿಂಗ ನಾಯ್ಕರಿಗೆ ಸವಾಲಾಗಿ ಕಂಡು ಬಂದರೂ ಅವರು ತನ್ನ ಪ್ರಯತ್ನವನ್ನು ಬಿಡಲಿಲ್ಲ. ಅಲ್ಲೆ ಭವಿಷ್ಯ ರೂಪಿಸುವ ಉದ್ದೇಶದಿಂದ ಸ್ವಲ್ಪ ಜಾಗವನ್ನು ಸಮತಟ್ಟು ಮಾಡಿ ಸಣ್ಣದೊಂದು ಗುಡಿಸಲು ಕಟ್ಟಿದರು. ಕುಡಿಯುವ ನೀರಿಗಾಗಿ ಪಕ್ಕದ ಮನೆಯವರನ್ನು ಆಶ್ರಯಿಸಿದ್ದ ಮಹಾಲಿಂಗ ನಾಯ್ಕರಿಗೆ ಬಾವಿ ತೋಡಿಸಲು ಕೈಯಲ್ಲಿ ದುಡ್ಡಿರಲಿಲ್ಲ. ಬಾವಿ ತೋಡಿದರೆ ನೀರು ದೊರೆಯುವ ಸಾಧ್ಯತೆ ಇರಲಿಲ್ಲ. ಏಕಾಂಗಿಯಾಗಿ ಬಾವಿ ತೋಡುವುದು ಅಸಾಧ್ಯ ಮಾತು. ಆಗ ಅವರಿಗೆ ಹೊಳೆದುದು ಸುರಂಗ ಕೊರೆತ. ಅರ್ಧ ದಿನ ಕೂಲಿ ಕೆಲಸ , ಉಳಿದರ್ಧ ದಿನ ಮತ್ತು ರಾತ್ರಿ ಹೊತ್ತು ಸುರಂಗ ಕೊರೆಯುವ ಮೂಲಕ ಜೀವಜಲ ಹುಡುಕುವ ಭಗೀರಥ ಪ್ರಯತ್ನ ಮಾಡಿದರು.

    ಆರನೇ ಸುರಂಗದ ಪಕ್ಕದಲ್ಲಿ ಇನ್ನೊಂದು ಸುರಂಗ ಕೊರೆದರು. 25 ಮೀಟರ್ ತಲುಪುವಾಗ ನೀರು ಕಾಣಿಸಿಕೊಂಡಿತು. ಮತ್ತೆ ಮುಂದುವರಿಸಿ 75 ಮೀಟರ್ ಉದ್ದದ ಸುರಂಗವಾಗುವ ಹೊತ್ತಿಗೆ ಯೆಥೇಚ್ಚ ನೀರು ಸಿಕ್ಕಿತು. ಆಗ ಅವರ ತೋಟದ ಕನಸು ಮತ್ತೆ ಗರಿಗೆದರಿತು. ಸುರಂಗದ ನೀರನ್ನು ಸಂಗ್ರಹಿಸಲು ಮಣ್ಣಿನ ಟ್ಯಾಂಕ್ ನಿರ್ಮಿಸಿದರು. ನೀರಿನ ಸಂಪನ್ನತೆಯಿಂದಾಗಿ ತೋಟ ಮಾಡುವ ಕನಸು ನನಸಾಯಿತು. ಗುಡ್ಡವನ್ನು ಸಮತಟ್ಟು ಮಾಡಿ ಭತ್ತ, ಅಡಿಕೆ, ತೆಂಗು , ಬಾಳೆ ಕೃಷಿ ಕೈಗೊಂಡರು. ಮಡದಿ ಲಲಿತ ಮೂವರು ಮಕ್ಕಳು ಪ್ರಯತ್ನಕ್ಕೆ ಕೈ ಜೋಡಿಸಿದರು.

    ಮಹಾಲಿಂಗ ನಾಯ್ಕ ಒಂದು ಎಕ್ರೆಯಲ್ಲಿ ಅಡಿಕೆ, ತೆಂಗು, ಬಾಳೆ, ಕಾಳುಮೆಣಸಿನ ಕೃಷಿ ಕೈಗೊಂಡಿದ್ದಾರೆ. ಇನ್ನೊಂದು ಎಕ್ರೆಯಲ್ಲಿ ಕಾಡು ಬೆಳೆಸಿದ್ದಾರೆ. ಗೇರು ಕೃಷಿಯೂ ಇದೆ. ಮಣ್ಣಿನ ಟ್ಯಾಂಕಿಯಿಂದ ವಿದ್ಯುತ್‌ನ ಖರ್ಚಿಲ್ಲದೆ ಗ್ರಾವಿಟಿ ಮೂಲಕ ಅಡಿಕೆ, ತೆಂಗು ಮತ್ತು ಬಾಳೆ ಗಿಡಗಳಿಗೆ ನೀರು ಉಣಿಸುತ್ತಾರೆ. ಅವರ ತೋಟದಲ್ಲಿ 300 ಅಡಿಕೆ, 75 ತೆಂಗು, 200 ಬಾಳೆ ಗಿಡಗಳಿವೆ. ಹಟ್ಟಿಗೊಬ್ಬರ , ಕಾಂಪೋಸ್ಟ್ ಹೊರತು ಬೇರೆ ಯಾವುದೇ ಗೊಬ್ಬರದ ಬಗ್ಗೆ ಮಾಹಾಲಿಂಗ ನಾಯ್ಕರಿಗೆ ಗೊತ್ತಿಲ್ಲ ಜಮೀನಿನಲ್ಲಿ ಇಂಗು ಗುಂಡಿಗಳ ಮೂಲಕ ಜಲಕೊಯ್ಲು ಮಾಡುತ್ತಾರೆ. ನಾಲ್ಕು ವರ್ಷಗಳ ಹಿಂದೆ ಎರಡು ಬೋರ್ ವೆಲ್ ತೆಗೆಸಿದ್ದಾರೆ. ಮೊದಲ ಬೋರ್‌ವೆಲ್ 400 ಅಡಿ ಸಾಗಿದ್ದರೂ ನೀರು ದೊರೆಯಲಿಲ್ಲ. ಎರಡನೇ ಬೋರ್‌ನಲ್ಲಿ 370 ಅಡಿ ತಲುಪುವ ಹೊತ್ತಿಗೆ ಒಂದು ಇಂಚು ನೀರು ಸಿಕ್ಕಿದೆ. ಇದೀಗ ಬೋರ್ ವೆಲ್‌ಗೆ ಪಂಪ್ ಸೆಟ್ ಇದೀಗ ಅಳವಡಿಸಿದ್ದಾರೆ.

    Share Information
    Advertisement
    Click to comment

    You must be logged in to post a comment Login

    Leave a Reply