Connect with us

FILM

ಮುಂಗಾರು ಮಳೆ ಖ್ಯಾತಿಯ ಪೋಷಕ ನಟಿ ಪದ್ಮಜಾ ರಾವ್‌ ವಿರುದ್ಧ ಜಾಮೀನು ರಹಿತ ಬಂಧನ ವಾರಂಟ್

ಬೆಂಗಳೂರು: ಮುಂಗಾರು ಮಳೆ ಖ್ಯಾತಿಯ ಪೋಷಕ ನಟಿ ಪದ್ಮಜಾ ರಾವ್ ವಿರುದ್ದ ಚೆಕ್ ಬೌನ್ಸ್ ಪ್ರಕರಣವೊಂದರಲ್ಲಿ ಜಾಮೀನು ರಹಿತ ಬಂಧನ ವಾರಂಟ್ ಜಾರಿಯಾಗಿದೆ.

ನಟ, ನಿರ್ದೇಶಕ ವಿರೇಂದ್ರ ಶೆಟ್ಟಿ ಒಡೆತನದ ಮಂಗಳೂರಿನ ವೀರೂ ಟಾಕೀಸ್ ಪ್ರೊಡಕ್ಷನ್ ಸಂಸ್ಥೆಗೆ ನೀಡಿದ್ದ 40 ಲಕ್ಷ ರೂ. ಮೌಲ್ಯದ ಚೆಕ್​ ಬೌನ್ಸ್‌ ಪ್ರಕರಣದಲ್ಲಿ ಕನ್ನಡ ಚಿತ್ರರಂಗದ ಹಿರಿಯ ನಟಿ ಪದ್ಮಜಾ ರಾವ್ ವಿರುದ್ಧ ಮಂಗಳೂರಿನ ಜೆಎಂಎಫ್‌ಸಿ ಐದನೇ ನ್ಯಾಯಾಲಯವು ವಾರಂಟ್‌ ಹೊರಡಿಸಿದೆ.

ಎರಡು ವರ್ಷಗಳ ಹಿಂದೆ ಪದ್ಮಜಾ ರಾವ್, ಚಾಲಿಪೋಲಿಲು ಚಿತ್ರದಲ್ಲಿ ನಟಿಸುತ್ತಿದ್ದಾಗ ಅದರ ನಿರ್ದೇಶನ ಮಾಡುತ್ತಿದ್ದ ವೀರೇಂದ್ರ ಶೆಟ್ಟಿ ಬಳಿಯಿಂದ ಹಣ ಪಡೆದಿದ್ದರು. ವೈಯಕ್ತಿಕವಾಗಿ ಒಂದು ಲಕ್ಷ , ಎರಡು ಲಕ್ಷವೆಂದು ಹಣ ಸಾಲ ಪಡೆದಿದ್ದು, ಹಿಂತಿರುಗಿ ಕೊಟ್ಟಿರಲಿಲ್ಲ. 2018ರಿಂದ 19ರ ನಡುವೆ ಸುಮಾರು 41 ಲಕ್ಷ ರೂಪಾಯಿ ಹಣವನ್ನು ಸಾಲ ಪಡೆದಿದ್ದು, ಹಿಂತಿರುಗಿಸದೆ ವಂಚಿಸಿದ್ದಾರೆಂದು ವೀರೇಂದ್ರ ಶೆಟ್ಟಿ ಮಂಗಳೂರಿನ ಕೋರ್ಟಿನಲ್ಲಿ ದೂರು ದಾಖಲಿಸಿದ್ದಾರೆ.

ಈ ಸಾಲದ ಭದ್ರತೆಗಾಗಿ 40 ಲಕ್ಷ ರೂ. ಮೌಲ್ಯದ ಚೆಕ್‌ ಅನ್ನು ವೀರೂ ಟಾಕೀಸ್ ಪ್ರೊಡಕ್ಷನ್ ಸಂಸ್ಥೆಗೆ ಪದ್ಮಜಾ ರಾವ್​ ನೀಡಿದ್ದರು. ಪದ್ಮಜಾ ರಾವ್ ಸಾಲ ವಾಪಸ್​ ಕೊಡದಿದ್ದಾಗ ವೀರೂ ಟಾಕೀಸ್‌ ಸಂಸ್ಥೆಯಿಂದ ಸದ್ರಿ ಚೆಕ್‌ ಅನ್ನು ಪದ್ಮಜಾ ರಾವ್ ಖಾತೆಗೆ ಹಾಕಲಾಗಿತ್ತು. ಖಾತೆಯಲ್ಲಿ ಹಣವಿಲ್ಲದೆ ಚೆಕ್‌ ಬೌನ್ಸ್ ಆಗಿತ್ತು. ನಟಿಯು ಹಣ ವಾಪಸ್​ ಕೊಡದೆ ವಂಚಿಸಿದ ಕಾರಣಕ್ಕೆ ವೀರೂ ಟಾಕೀಸ್‌ ಸಂಸ್ಥೆಯಿಂದ ದೂರು ದಾಖಲಿಸಿತ್ತು.

ಈ ಕೇಸ್​ ಸಂಬಂಧ ನ್ಯಾಯಾಲಯಕ್ಕೆ ಹಾಜರಾಗಲು ಆದೇಶಿಸಿದ್ದ ಸಮನ್ಸ್‌ ಅನ್ನು ಪದ್ಮಜಾ ರಾವ್​ ಸ್ವೀಕರಿಸದೆ ನಿರಾಕರಿಸುತ್ತಾ ಬಂದಿದ್ದರು. ಈ ಬಗ್ಗೆ ಗಮನಿಸಿದ್ದ ನ್ಯಾಯಾಲಯ, ನಟಿ ವಿರುದ್ಧ ಇಂದು ಜಾಮೀನು ರಹಿತ ಬಂಧನ ವಾರಂಟ್ ಹೊರಡಿಸಿದೆ.