LATEST NEWS
ಕಾಲೇಜಿನಲ್ಲಿ ಜೂನಿಯರ್ಸ್ ಗೆ ರಾಗಿಂಗ್..11 ಮಂದಿ ವಿಧ್ಯಾರ್ಥಿಗಳು ಆರೆಸ್ಟ್
ಮಂಗಳೂರು ಫೆಬ್ರವರಿ 11: ಶಿಕ್ಷಣಕ್ಕೆ ಹೆಸರುವಾಸಿಯಾದ ಮಂಗಳೂರಿನಲ್ಲಿ ಈಗ ರಾಗಿಂಗ್ ಪಿಡುಗು ಸದ್ದು ಮಾಡುತ್ತಿದ್ದು, ಈ ಹಿನ್ನಲೆ ಈಗಾಗಲೇ ಪೊಲೀಸ್ ಇಲಾಖೆಯ ಕಟ್ಟುನಿಟ್ಟಿನ ಕ್ರಮದ ಎಚ್ಚರಿಕೆ ನೀಡಿದ್ದು, ರಾಗಿಂಗ್ ನಲ್ಲಿ ಭಾಗಿಯಾಗಿದ್ದ ಹಲವಾರು ವಿಧ್ಯಾರ್ಥಿಗಳನ್ನು ಬಂಧಿಸಿದ್ದಾರೆ. ನಗರದ ಖಾಸಗಿ ಕಾಲೇಜಿವೊಂದರಲ್ಲಿ ಕಿರಿಯ ವಿದ್ಯಾರ್ಥಿಗಳಿಗೆ ರಾಗಿಂಗ್ ಮಾಡುತ್ತಿದ್ದ ಆರೋಪದಡಿ 11 ಮಂದಿ ವಿದ್ಯಾರ್ಥಿಗಳನ್ನು ಮಂಗಳೂರು ನಗರ ಪೊಲೀಸರು ಇಂದು ಬಂಧಿಸಿದ್ದಾರೆ.
ಬಂಧಿತರನ್ನು ಮೊಹಮ್ಮದ್ ಶಮಾಸ್, ಅವಿನ್ ಜೋಯ್, ರಾಬಿನ್ ಬಿಜು, ಜೆರಾನ್ ಸಿರಿಲ್, ಜಬಿನ್ ಮಹರೂಫ್, ಮೊಹಮ್ಮದ್ ಸೂರಜ್, ಜಫಿನ್, ಅಬ್ದುಲ್ ಬಸಿತ್, ಆಶಿನ್ ಬಾಬು, ಅಬ್ದುಲ್ ಅನಾಸ್ ಮೊಹಮ್ಮದ್, ಅಕ್ಷಯ್ ಕೆ.ಎಸ್ ಎಂದು ಗುರುತಿಸಲಾಗಿದ್ದು, ಇವರೆಲ್ಲರೂ ಕೇರಳ ಮೂಲದವರಾಗಿದ್ದಾರೆ.
ಮಂಗಳೂರು ಹೊರವಲಯದ ದೇರಳಕಟ್ಟೆಯ ಕಣಚೂರು ಪಿಸಿಯೋಥೆರಪಿ ಮತ್ತು ನರ್ಸಿಂಗ್ ಕಾಲೇಜಿನಲ್ಲಿ ಕೆಲ ಸೀನಿಯರ್ ವಿದ್ಯಾರ್ಥಿಗಳು ರ‍್ಯಾಗಿಂಗ್ ಮಾಡುತ್ತಿರುವ ಬಗ್ಗೆ ಕಿರಿಯ ವಿದ್ಯಾರ್ಥಿಗಳು ಶಿಕ್ಷಣ ಸಂಸ್ಥೆಯ ಆಡಳಿತ ಮಂಡಳಿಗೆ ದೂರು ನೀಡಿದ್ದರು. ಕಿರಿಯ ವಿಧ್ಯಾರ್ಥಿಗಳಿಗೆ ಗಡ್ಡ- ಮೀಸೆ ಬೋಳಿಸಬೇಕು, ಪೊಟ್ಟಣದಲ್ಲಿರುವ ಬೆಂಕಿ ಕಡ್ಡಿಗಳನ್ನು ಎಣಿಸಬೇಕು ಎಂದು ಕಿರುಕುಳ ನೀಡಿದ್ದು, ದೈಹಿಕವಾಗಿ ಕೂಡ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ.
ಇದನ್ನು ಗಂಭೀರವಾಗಿ ಪರಿಗಣಿಸಿದ ಕಾಲೇಜು ಆಡಳಿತ ಮಂಡಳಿ, ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಒಟ್ಟು 18 ವಿದ್ಯಾರ್ಥಿಗಳ ವಿರುದ್ಧ ದೂರು ದಾಖಲಿಸಿತ್ತು. ಸದ್ಯ ಕೇರಳ ಮೂಲದ 11 ವಿದ್ಯಾರ್ಥಿಗಳನ್ನು ಉಳ್ಳಾಲ ಪೊಲೀಸರು ಬಂಧಿಸಿದ್ದಾರೆ