LATEST NEWS
ಸ್ವಚ್ಛತೆಯಿಂದ ಮಲೇರಿಯಾ ಮುಕ್ತ- ರಘುಪತಿ ಭಟ್
ಸ್ವಚ್ಛತೆಯಿಂದ ಮಲೇರಿಯಾ ಮುಕ್ತ- ರಘುಪತಿ ಭಟ್
ಉಡುಪಿ, ಜೂನ್ 22: ಮನೆಯ ಬಳಿ ಹಾಗೂ ನಮ್ಮ ಪರಿಸರದ ಸುತ್ತಮುತ್ತ ನೀರು ಶೇಖರಣೆಯಾಗದಂತೆ ಸ್ವಚ್ಛತೆಯನ್ನು ಕಾಪಾಡುವುದುರ ಮೂಲಕ ಮಲೇರಿಯಾ ಹರಡುವುದನ್ನು ತಡೆಯಬಹುದು ಎಂದು ಶಾಸಕ ರಘುಪತಿ ಭಟ್ ಹೇಳಿದ್ದಾರೆ.
ಅವರು ಶುಕ್ರವಾರ, ಎಂಜಿಎಂ ಕಾಲೇಜಿನಲ್ಲಿ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣ ಕಚೇರಿ ಉಡುಪಿ, ಲಯನ್ಸ್ ಕ್ಲಬ್ ಉಡುಪಿ-ಕರಾವಳಿ ಮತ್ತು ಲಯನ್ಸ್ ಕ್ಲಬ್ ಕಲ್ಯಾಣಪುರ, ಉಡುಪಿ ಜಿಲ್ಲೆ ಇವರ ಸಂಯುಕ್ತ ಆಶ್ರಯದಲ್ಲಿ ನಡೆದ ಮಲೇರಿಯಾ ವಿರೋಧಿ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಸಾರ್ವಜನಿಕರಲ್ಲಿ ಸ್ವಚ್ಛತೆಯ ಕುರಿತು ಜಾಗೃತಿ ಮೂಡಿಸಬೇಕಿದೆ, ಸ್ವಯಂ ಪ್ರೇರಿತರಾಗಿ ಸ್ಚಚ್ಛತೆಯ ಮನಸ್ಥಿತಿ ರೂಢಿಸಿಕೊಳ್ಳಬೇಕು, ಮನೆಯ ಸುತ್ತಮುತ್ತ ನೀರು ನಿಲ್ಲದಂತೆ ಜಾಗ್ರತೆ ವಹಿಸಬೇಕು, ಕಟ್ಟಡ ಕಾರ್ಮಿಕರಿಗೆ, ಗೂಡಂಗಡಿಗಳಿಗೆ ಹಾಗೂ ಗುಜರಿ ಅಂಗಡಿಯವರಿಗೆ ಸ್ವಚ್ಛತೆ ಕಾಪಾಡುವ ಕುರಿತು ಜಾಗೃತಿ ಅಭಿಯಾನ ನಡೆಸಬೇಕು, ಸ್ವಚ್ಛ ಭಾರತ ನಿರ್ಮಾಣದ ಉದ್ದೇಶ ಪರಿಣಾಮಕಾರಿಯಾಗಿ ಅನುಷ್ಠಾನಗೊಳ್ಳಬೇಕು, ಉಡುಪಿ ಜಿಲ್ಲೆ ಮಲೇರಿಯಾ ಮುಕ್ತ ಜಿಲ್ಲೆಯಾಗಿಸಲು ಎಲ್ಲರ ಸಹಕಾರ ಅಗತ್ಯ ಎಂದು ಶಾಸಕರು ಹೇಳಿದರು.
ಮಲೇರಿಯಾ ವಿರೋಧಿ ದಿನದ ಅಂಗವಾಗಿ, ಉಡುಪಿ ಸಿಟಿ ಬಸ್ ನಿಲ್ದಾಣದಿಂದ , ಎಂಜಿಎಂ ಕಾಲೇಜು ವರೆಗೆ ಜಾಥಾ ನಡೆಯಿತು.
ಕಾರ್ಯಕ್ರಮದಲ್ಲಿ ಪ್ರಭಾರ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಶ್ರೀರಾಮ ರಾವ್, ಲಯನ್ಸ್ ಕ್ಲಬ್ ಉಡುಪಿ ಮಣಿಪಾಲದ ಹರೀಶ್ ಪೂಜಾರಿ, ಲಯನ್ಸ್ ಕ್ಲಬ್ ಕಲ್ಯಾಣಪುರದ ಡಾ. ನೇರಿ ಕರ್ನೆಲಿಯೋ, ಲಯನ್ಸ್‍ನ ಸಪ್ನ ಸುರೇಶ್, ಚ್ಯವನ ಇನ್ ಸ್ಟಿಟ್ಯೂಟ್ ಆಫ್ ಪ್ಯಾರಾ ಮೆಡಿಕಲ್ ಸೈನ್ಸ್ ನ ವ್ಯವಸ್ಥಾಪಕ ಪಿ.ಎ.ಭಟ್ ಉಪಸ್ಥಿತರಿದ್ದರು.
ಹಿರಿಯ ಆರೋಗ್ಯ ನಿರೀಕ್ಷಕ ದೇವಪ್ಪ ಪಟಗಾರ್ ವಂದಿಸಿದರು. ಜಿಲ್ಲಾ ಆರೋಗ್ಯ ಮೇಲ್ವಿಚಾರಕ ಕೃಷ್ಣಪ್ಪ ನಿರೂಪಿಸಿದರು.