FILM
ಲಾಕ್ಡೌನ್ ಕಾಲದಲ್ಲಿ ಸಾವಯವ ತರಕಾರಿ ಬೆಳೆದ ‘ರಿಯಲ್ ಸ್ಟಾರ್’ !
ಬೆಂಗಳೂರು, ಜೂನ್ 14 : ಕನ್ನಡ ಚಿತ್ರರಂಗದಲ್ಲಿ ವಿಭಿನ್ನ ಚಿತ್ರಗಳ ಮೂಲಕ ತನ್ನದೇ ಆದ ಛಾಪು ಮೂಡಿಸಿರುವ ರಿಯಲ್ ಸ್ಟಾರ್ ಉಪೇಂದ್ರ ಈಗ ತರಕಾರಿ ಕೃಷಿ ಮಾಡಿ ಸುದ್ದಿಯಾಗಿದ್ದಾರೆ.
ಲಾಕ್ ಡೌನ್ ಅವಧಿಯಲ್ಲಿ ನಗರ ಪ್ರದೇಶದ ಬಹುತೇಕರು ಕೈಕಟ್ಟಿ ಕುಳಿತಿದ್ದರೆ ಉಪೇಂದ್ರ ಮಾತ್ರ ಕೈಕಟ್ಟಿ ಕೂರಲಿಲ್ಲ. ಮೂರು ತಿಂಗಳ ಲಾಕ್ ಡೌನ್ ಕಾಲದಲ್ಲಿ ಸಾವಯವ ಪದ್ಧತಿಯಲ್ಲಿ ತರಕಾರಿ, ಹಣ್ಣುಗಳನ್ನು ಬೆಳೆದು ತೋರಿಸಿದ್ದಾರೆ. ತಾವು ತರಕಾರಿ ಬೆಳೆದಿರುವುದನ್ನು ವಿಡಿಯೋ ಮಾಡಿ, ತನ್ನ ಇನ್ ಸ್ಟಾ ಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ಈ ವಿಡಿಯೋ ಈಗ ಫೇಸ್ ಬುಕ್, ಇನ್ ಸ್ಟಾ ಗ್ರಾಂನಲ್ಲಿ ಭಾರೀ ವೈರಲ್ ಆಗಿದೆ.
“ಕೇವಲ ಎರಡು ತಿಂಗಳಲ್ಲಿ ತರಕಾರಿ ಹೇಗೆ ಬೆಳೆದಿದೆ ನೋಡಿ.. ಬದನೆಕಾಯಿ, ಸೌತೆಕಾಯಿ, ಚೆಂಡು ಹೂವು ಚೆನ್ನಾಗಿ ಬಂದಿವೆ. ಇದಕ್ಕೆ ಯಾವುದೇ ರಾಸಾಯನಿಕ ಬಳಕೆ ಮಾಡಿಲ್ಲ. ಕೇವಲ ದನದ ಗೊಬ್ಬರ ಮತ್ತು ನೀರು ಹಾಕಿ ಬೆಳೆಸಿದ್ದೇವೆ. ಎಷ್ಟೊಂದು ತಾಜಾ ಆಗಿ ಬೆಳೆದಿದೆ ನೋಡಿ..” ಎಂದು ಉಪೇಂದ್ರ ತರಕಾರಿಗಳನ್ನು ರಾಶಿ ಹಾಕಿ ತೋರಿಸುವ ವಿಡಿಯೋ ಇದೆ.
“ಈ ತರಕಾರಿಗೇನೂ ಹುಳ ಬರಲ್ಲ ಅಂತಲ್ಲ.. ಎಲ್ಲೋ ಒಂದಷ್ಟು ಹುಳ ಬಿದ್ದಿರಬಹುದು. ಈ ಭೂಮಿ ಮೇಲೆ ಅದಕ್ಕೂ ಬದುಕುವ ಹಕ್ಕಿದೆಯಲ್ಲಾ.. ಪ್ರಕೃತಿಯಲ್ಲಿ ಹುಳು, ಹುಪ್ಪಟೆ, ಚಿಟ್ಟೆ ಎಲ್ಲವೂ ನಮ್ಮ ಜತೆ ಬದುಕಬೇಕಲ್ಲಾ..? ಇಷ್ಟು ಸಣ್ಣ ಸಮಸ್ಯೆಗಾಗಿ ಹುಳು, ಹುಪ್ಪಟೆಗಾಗಿ ವಿಪರೀತ ಕ್ರಿಮಿನಾಶಕ ಹೊಡೆದು ಭೂಮಿಯನ್ನು ಹಾಳು ಮಾಡುತ್ತಿದ್ದೇವೆ ಎಂದು ವಿಡಿಯೋದಲ್ಲಿ ಉಪೇಂದ್ರ ಹೇಳುತ್ತಾರೆ. ಇಂಥ ತರಕಾರಿಗಳಿಂದ ಆರೋಗ್ಯವೂ ಒಳ್ಳೆದಿರತ್ತೆ ಎನ್ನುವ ಮೂಲಕ ಉಪೇಂದ್ರ, ಸಾವಯವ ತರಕಾರಿ ಬೆಳೆಸುವಂತೆ ಕೃಷಿಕರನ್ನು ಪ್ರೋತ್ಸಾಹಿಸಿದ್ದಾರೆ.
ಅಲ್ಲದೆ, ನಟನೆಗೂ ಸೈ, ಕೃಷಿಯಲ್ಲೂ ಸೈ ಎಂದು ತನ್ನ ರಿಯಲ್ ಕಥೆಯನ್ನು ಉಪೇಂದ್ರ ತೋರಿಸಿಕೊಟ್ಟಿದ್ದಾರೆ.