Connect with us

FILM

ಸೆಲೆಬ್ರಿಟಿಗಳ ಮದುವೆಗೂ ಲಾಕ್ ಡೌನ್ ಬ್ರೇಕ್ !

ಗೌಜಿ, ಗದ್ಲ ಇಲ್ದೇ ಸಿಂಪಲ್ಲಾಗಿ ಹಸೆಮಣೆಯೇರಿದ ನಟನಾಮಣಿಯರು

ಬೆಂಗಳೂರು, ಜೂನ್ 15 : ಕೊರೊನಾ ನಿಯಂತ್ರಣಕ್ಕಾಗಿ ಸರಕಾರ ಲಾಕ್ ಡೌನ್ ಜಾರಿ ಮಾಡಿದ್ದೇ ಮಾಡಿದ್ದು ಆಡಂಬರದ ಮದುವೆಗಳಿಗೆಲ್ಲ ಬ್ರೇಕ್ ಬಿದ್ದೇ ಬಿಡ್ತು. ಎಪ್ರಿಲ್, ಮೇ ತಿಂಗಳಂತೂ ಮದುವೆಯ ಸೀಸನ್. ಫಿಲ್ಮ್ ಸ್ಟಾರ್, ಸೆಲೆಬ್ರಿಟಿಗಳ ಮದುವೆ ಆಗೋದಂದ್ರೆ ಗೌಜಿ, ಗದ್ದಲಗಳೇ ತುಂಬಿರತ್ತೆ. ಹಾಗಂತ, ಈ ಬಾರಿ ಲಾಕ್ ಡೌನ್ ಪೀರಿಯಡ್ ಸೆಲೆಬ್ರಿಟಿಗಳ ಮದುವೆ ಗಮ್ಮತ್ತಿಗೂ ಬ್ರೇಕ್ ಹಾಕಿತ್ತು. ಹೆಚ್ಚು ಜನ ಸೇರಬಾರದೆಂಬ ನಿಮಯದಿಂದಾದಿ ಗೌಜಿ, ಗಮ್ಮತ್ತುಗಳಿಲ್ಲದೇ ಕೆಲವು ಸೆಲೆಬ್ರಿಟಿಗಳು ಈ ಬಾರಿ ಸಪ್ತಪದಿ ತುಳಿದಿದ್ದಾರೆ.

ಮಯೂರಿ ಹತ್ತು ವರ್ಷಗಳ ಪ್ರೀತಿಗೆ ಮದುವೆಯ ಕೊಂಡಿ

ಕಿರುತೆರೆ, ಸಿನಿಮಾ ಎರಡರಲ್ಲೂ ಹೆಸರು ಮಾಡಿದ್ದ ಮಯೂರಿ ತನ್ನ ಬಹುಕಾಲದ ಗೆಳೆಯ ಅರುಣ್ ರನ್ನು ವರಿಸಿದ್ದಾರೆ. ಜೂನ್ 12ರಂದು ಬೆಂಗಳೂರಿನ ಜೆ.ಪಿ.ನಗರದ ಶ್ರೀ ತಿರುಮಲಗಿರಿ ಲಕ್ಷ್ಮೀ ವೆಂಕಟೇಶ್ವರ ದೇವಸ್ಥಾನದಲ್ಲಿ ಮಯೂರಿ ದಾಂಪತ್ಯಕ್ಕೆ ಕಾಲಿಟ್ಟಿದ್ದಾರೆ. ‘ಅಶ್ವಿನಿ ನಕ್ಷತ್ರ’ ಸೀರಿಯಲ್ ಮೂಲಕ ಹೆಸರು ಮಾಡಿದ್ದ ಮಯೂರಿ ತನ್ನ ಖಾಸಗಿ ಬದುಕಿನ ಬಗ್ಗೆ ಹೇಳಿಕೊಂಡಿರಲಿಲ್ಲ. ಈಗ ಲಾಕ್ ಡೌನ್ ಪೀರಿಯಡ್ಡಲ್ಲಿ ಸಿಂಪಲ್ಲಾಗಿ ಮದುವೆಯಾಗುತ್ತಿರುವುದನ್ನು ಮದುವೆಗೆ ಮುನ್ನ ಹೇಳಿಕೊಂಡಿದ್ದರು. ಹತ್ತು ವರ್ಷಗಳಿಂದ ಪ್ರೀತಿಸುತ್ತಿದ್ದ ಗೆಳೆಯನನ್ನೇ ವರಿಸುತ್ತಿದ್ದೇನೆ ಎಂದಿದ್ದರು. ಲವ್ ಕಂ ಅರೇಂಜ್ಡ್ ಮ್ಯಾರಿಯೇಜ್ ಆಗಿರುವ ಮಯೂರಿ, ಸೀರಿಯಲ್ ಬಳಿಕ ಕನ್ನಡ ಚಿತ್ರಗಳಲ್ಲಿ ನಟಿಸಿ ಹೆಸರು ಮಾಡಿದ್ದರು. ಅಜಯರಾವ್ ಅವರ ಕೃಷ್ಣಲೀಲಾ ಚಿತ್ರದ ಮೂಲಕ ಬ್ರೇಕ್ ಪಡೆದಿದ್ದ ಮಯೂರಿ, ಇಷ್ಟಕಾಮ್ಯ, ನಟರಾಜ್ ಸರ್ದೀಸ್, ಕರಿಯ 2 ಮುಂತಾದ ಚಿತ್ರಗಳಲ್ಲಿ ನಟಿಸಿದ್ದಾರೆ. ತನ್ನ ಮುಗ್ಧ ಮಾತುಗಳಿಂದಲೇ ಮನೆ ಮನೆಗಳಲ್ಲಿ ಮಿಂಚು ಹರಿಸಿದ್ದ ಮಯೂರಿ ಅದ್ಧೂರಿ, ಗೌಜಿ ಎಲ್ಲವನ್ನೂ ಬಿಟ್ಟು ತನ್ನ ಕುಟುಂಬಸ್ಥರ ಮಧ್ಯೆ ಸದ್ದಿಲ್ಲದೆ ಮದುವೆಯಾಗಿ ಸುದ್ದಿಯಾಗಿದ್ದಾರೆ.

‘ಮಗಳು ಜಾನಕಿ’ಯ ಸುಪ್ರಿಯಾಗೆ ಕಂಕಣ ಭಾಗ್ಯ

ಖ್ಯಾತ ನಿರ್ದೇಶಕ ಟಿ.ಎನ್ ಸೀತಾರಾಮ್ ನಿರ್ದೇಶನದ ‘ಮಗಳು ಜಾನಕಿ’ ಯಲ್ಲಿ ಸಂಜನಾ ಪಾತ್ರದಿಂದ ಗಮನ ಸೆಳೆದಿದ್ದ ನಟಿ ಸುಪ್ರಿಯಾ ರಾವ್ ಲಾಕ್ ಡೌನ್ ಅವಧಿಯಲ್ಲೇ ದಾಂಪತ್ಯಕ್ಕೆ ಕಾಲಿರಿಸಿದ್ದಾರೆ. ಮೇ 15ರಂದು ಚಿತ್ರದುರ್ಗದ ದೇವಸ್ಥಾನ ಒಂದರಲ್ಲಿ ಸುಪ್ರಿಯಾ, ವಿಜಯ್ ಜೊತೆ ಸಪ್ತಪದಿ ತುಳಿದಿದ್ದಾರೆ. ಸುಪ್ರಿಯಾ ಮೂಲತಃ ಶಿವಮೊಗ್ಗದವರಾಗಿದ್ದು ವಿಜಯ್ ಚಿತ್ರದುರ್ಗದವರು. ಹಲವು ವರ್ಷಗಳ ಪ್ರೀತಿಯ ಬಳಿಕ ಈಗ ಸದ್ದಿಲ್ಲದೆ ವಿವಾಹ ಆಗಿದ್ದಾರೆ. ಮೂಲತಃ ರಂಗಭೂಮಿ ಕಲಾವಿದೆ ಆಗಿರುವ ಸುಪ್ರಿಯಾ, ಅನೇಕ ನಾಟಕಗಳಲ್ಲಿ ನಟಿಸಿ ಗಮನ ಸೆಳೆದಿದ್ದರು.

ಹಸೆಮಣೆಯೇರಿದ ನಿರ್ದೇಶಕ ಅರ್ಜುನ್

ಅಂಬಾರಿ, ಅದ್ದೂರಿ, ಮಿ. ಐರಾವತ ಚಿತ್ರಗಳಿಂದ ಗುರುತಿಸಿಕೊಂಡಿದ್ದ ನಿರ್ದೇಶಕ ಎ.ಪಿ.ಅರ್ಜುನ್ ಕೂಡ ಇದೇ ಟೈಮಲ್ಲಿ ವೈವಾಹಿಕ ಜೀವನಕ್ಕೆ ಕಾಲಿರಿಸಿದ್ದಾರೆ. ಐದು ವರ್ಷಗಳಿಂದ ಪ್ರೀತಿಸುತ್ತಿದ್ದ ಹಾಸನ ಮೂಲದ ಬಿ.ಆರ್ ಅನ್ನಪೂರ್ಣ ಅವರನ್ನು ವಿವಾಹ ಆಗಿದ್ದಾರೆ. ಮೇ 10ರಂದು ಬೆಂಗಳೂರಿನ ನಾಗರಬಾವಿಯಲ್ಲಿರುವ ಮಹಾಲಕ್ಷ್ಮಿ ಎನ್ ಕ್ಲೇವ್ ನಲ್ಲಿ ಸಿಂಪಲ್ಲಾಗಿ ಮದುವೆಯಾಗಿದ್ದಾರೆ. ಧ್ರುವ ಸರ್ಜಾ, ಹರಿ ಸಂತೋಷ್, ಕಿಸ್ ಚಿತ್ರದ ಹೀರೋ ವಿರಾಟ್ ಸೇರಿದಂತೆ ಅರ್ಜುನ್ ಆಪ್ತ ಸ್ನೇಹಿತರಷ್ಟೇ ಮದುವೆಗೆ ಹಾಜರಾಗಿದ್ದರು.

‘ಗಯ್ಯಾಳಿ’ಗೆ ಸಪ್ತಪದಿ ಭಾಗ್ಯ

ಕನ್ನಡ ಚಿತ್ರರಂಗದಲ್ಲಿ ವಿಭಿನ್ನ ಚಿತ್ರಗಳಿಂದಲೇ ಗುರುತಿಸಿಕೊಂಡಿರುವ ಸುಮನಾ ಕಿತ್ತೂರು ಏಪ್ರಿಲ್ 17ರಂದು ಹಸೆಮಣೆ ತುಳಿದಿದ್ದಾರೆ. ತನ್ನ ಬಹುಕಾಲದ ಗೆಳೆಯ ಶಿವಮೊಗ್ಗ ಮೂಲದ ಶ್ರೀನಿವಾಸ್ ಅವರನ್ನು ಸದ್ದಿಲ್ಲದೆ ವಿವಾಹ ಆಗಿದ್ದಾರೆ. ಶ್ರೀನಿವಾಸ್ ವೃತ್ತಿಯಲ್ಲಿ ಸಾಫ್ಟ್‌ವೇರ್ ಇಂಜಿನಿಯರ್ ಆಗಿದ್ದಾರೆ. ‘ಎದೆಗಾರಿಕೆ’, ‘ಕಿರಗೂರಿನ ಗಯ್ಯಾಳಿಗಳು’ ಸೇರಿ ಹಲವಾರು ವಿಭಿನ್ನ ರೀತಿಯ ಚಿತ್ರಗಳಲ್ಲಿ ಪಾತ್ರ ಮಾಡಿದ್ದ ಸುಮನ್, ಎಳವೆಯಲ್ಲಿಯೇ ಕನ್ನಡ ಚಿತ್ರೋದ್ಯಮದಲ್ಲಿ ವಿಶಿಷ್ಟ ಛಾಪು ಮೂಡಿಸಿದ್ದರು.

ಫಾರ್ಮ್ ಹೌಸಲ್ಲಿ ನಿಖಿಲ್ ಮದುವೆ !

ಕೊರೊನಾ ಬರುವುದಕ್ಕೂ ಮುನ್ನ ಮಾಜಿ ಸಿಎಂ ಕುಮಾರಸ್ವಾಮಿ ತನ್ನ ಮಗನ ಮದುವೆಯನ್ನು ಅದ್ದೂರಿಯಾಗಿ ನಡೆಸಲು ಸಿದ್ಧತೆ ನಡೆಸಿದ್ದರು. ಅಷ್ಟರಲ್ಲಿಯೇ ಲಾಕ್ ಡೌನ್ ಘೋಷಣೆಯಾಗಿದ್ದು ಕುಮಾರಸ್ವಾಮಿಗೆ ತಣ್ಣೀರು ಹಾಕಿತ್ತು. ಕೊನೆಗೆ ರಾಮನಗರದಲ್ಲಿ ಕುಮಾರಸ್ವಾಮಿಗೆ ಸೇರಿದ ಫಾರ್ಮ್ ಹೌಸ್ ನಲ್ಲಿಯೇ ನಟ ನಿಖಿಲ್ ಕುಮಾರಸ್ವಾಮಿ, ರೇವತಿ ಅವರನ್ನು ಸರಳವಾಗಿ ಮದುವೆಯಾಗಿದ್ದಾರೆ. 30 ಮಂದಿಗಷ್ಟೇ ಭಾಗವಹಿಸಲು ಅವಕಾಶ ನೀಡಿದ್ದರಿಂದ ಆಪ್ತೇಷ್ಟರು, ಕುಟುಂಬ ವರ್ಗದವರು ಮಾತ್ರ ಮದುವೆಯಲ್ಲಿ ಪಾಲ್ಗೊಂಡಿದ್ದರು.