Connect with us

LATEST NEWS

ರೈತರ ಸಾಲ ಮನ್ನಾ : 15 ದಿನದಲ್ಲಿ ಖಾತೆಗೆ ಜಮೆ- ಕೃಷಿ ಸಚಿವ

ರೈತರ ಸಾಲ ಮನ್ನಾ : 15 ದಿನದಲ್ಲಿ ಖಾತೆಗೆ ಜಮೆ- ಕೃಷಿ ಸಚಿವ

ಉಡುಪಿ, ಆಗಸ್ಟ್ 21: ರಾಜ್ಯದ ರೈತರ ಸಾಲಮನ್ನಾ ಕುರಿತಂತೆ ಈಗಾಗಲೇ ಎಲ್ಲಾ ಸಹಕಾರ ಸಂಘಗಳಿಗೆ ಸುತ್ತೋಲೆ ಕಳುಹಿಸಲಾಗಿದ್ದು, ಈ ಕುರಿತಂತೆ 15 ದಿನಗಳ ಒಳಗೆ ರೈತರ ಖಾತೆಗಳಿಗೆ ಹಣವನ್ನು ಜಮೆ ಮಾಡಲಾಗುವುದು ಎಂದು ರಾಜ್ಯದ ಕೃಷಿ ಸಚಿವ ಎನ್. ಹೆಚ್. ಶಿವಶಂಕರ ರೆಡ್ಡಿ ತಿಳಿಸಿದ್ದಾರೆ.

ಪ್ರಥಮ ಹಂತದಲ್ಲಿ ರಾಜ್ಯದ ರೈತರು ಸಹಕಾರ ಸಂಘಗಳಲ್ಲಿ ಪಡೆದ 9500 ಕೋಟಿ ರೂ ಸಾಲಮನ್ನಾ ಮಾಡಲಾಗುವುದು, ಮುಂದಿನ ಹಂತದಲ್ಲಿ ಖಾಸಗಿ ಬ್ಯಾಂಕ್ ಗಳಿಂದ ಪಡೆದ ಸಾಲ ಮನ್ನಾ ಮಾಡಲಾಗುವುದು ಎಂದು ಸಚಿವರು ಹೇಳಿದರು.

ರಾಜ್ಯದಲ್ಲಿ ಸಾವಯವ ಕೃಷಿಗೆ ವಿಶೇಷ ಒತ್ತು ನೀಡಲಾಗುತ್ತಿದ್ದು, ರೈತರು ಬೆಳೆದ ಸಾವಯವ ಉತ್ಪನ್ನಗಳಿಗೆ ಸೂಕ್ತ ಮಾರುಕಟ್ಟೆ ದೊರೆಯುತ್ತಿಲ್ಲ, ಈ ನಿಟ್ಟಿನಲ್ಲಿ ಸೂಕ್ತ ಮಾರುಕಟ್ಟೆ ವ್ಯವಸ್ಥೆ ಕಲ್ಪಿಸಲು ಕ್ರಮ ಕೈಗೊಳ್ಳಲಾಗುವುದು ಎಂದರು.

ರಾಜ್ಯದ ಕೃಷಿ ಇಲಾಖೆಯಲ್ಲಿ ಹಲವು ಹುದ್ದೆಗಳು ಖಾಲಿ ಇದ್ದು, ಇದರಿಂದ ಕೃಷಿಕರಿಗೆ ಸೂಕ್ತ ಮಾಹಿತಿ ನೀಡಲು ಸಮಸ್ಯೆಯಾಗಿದ್ದು, ಇದಕ್ಕಾಗಿ ಕೃಷಿ ಸಂಪರ್ಕ ಕೇಂದ್ರಗಳಿಗೆ ಕೃಷಿ ವಿದ್ಯಾಲಯದ 600 ವಿದ್ಯಾರ್ಥಿಗಳನ್ನು ನೇಮಕ ಮಾಡಲು ಕ್ರಮ ಕೈಗೊಂಡಿದ್ದು, ಶೀಘ್ರದಲ್ಲಿ ನೇಮಕಾತಿ ಆದೇಶ ನೀಡಲಾಗುವುದು ಎಂದು ಸಚಿವರು ಹೇಳಿದರು.

ಕೃಷಿ ಯಂತ್ರೋಪಕರಣ

ಕೃಷಿಯಲ್ಲಿ ಕೂಲಿಯಾಳುಗಳ ಸಮಸ್ಯೆಯಿದ್ದು, ಇದನ್ನು ನಿವಾರಿಸುವ ಉದ್ದೇಶದಿಂದ ಕೃಷಿಗೆ ಆದ್ಯತೆ ನೀಡಿದ್ದು, ರೈತ ಸೇವಾ ಕೇಂದ್ರಗಳ ಮೂಲಕ ಕೃಷಿ ಯಂತ್ರೋಪಕರಣ ಒದಗಿಸಲಾಗುತ್ತಿದೆ ಈ ಕೇಂದ್ರಗಳಲ್ಲಿ ಹೆಚ್ಚಿನ ಯಂತ್ರೋಪಕರಣ ಒದಗಿಸಲು ಹಾಗೂ ಸ್ಥಳೀಯ ರೈತರ ಅಗತ್ಯಕ್ಕೆ ಬೇಕಾದ ಯಂತ್ರೋಪಕರಣಗಳನ್ನು ಒದಗಿಸಲಾಗುವುದು, ಸದ್ರಿ ಯಂತ್ರಗಳನ್ನು ದುರಸ್ತಿಗೊಳಿಸುವ ಕುರಿತಂತೆ ಕೃಷಿ ಯಂತ್ರೋಪಕರಣ ಸರಬರಾಜು ಕಂಪೆನಿಗಳು ಪ್ರತಿ ತಾಲೂಕಿಗೆ ಕಡ್ಡಾಯವಾಗಿ ಒಂದು ರಿಪೇರಿ ಕೇಂದ್ರ ತೆರೆದು ಸೂಕ್ತ ತಂತ್ರಜ್ಞರನ್ನು ನೇಮಿಸುವಂತೆ ಟೆಂಡರ್ ನಲ್ಲಿ ಸೂಚನೆ ನೀಡಲಾಗುವುದು ಎಂದು ಸಚಿವರು ಹೇಳಿದರು.

ರೈತರಿಗೆ ಗುರುತಿನ ಚೀಟಿ

ರೈತರಿಗೆ ಗುರುತಿನ ಚೀಟಿ ನೀಡುವ ಕುರಿತಂತೆ ಈಗಾಗಲೇ ಕ್ರಮವಹಿಸಿದ್ದು, 6 ತಿಂಗಳ ಒಳಗೆ ಎಲ್ಲಾ ರೈತರಿಗೆ ಗುರುತಿನ ಚೀಟಿ ನೀಡಲಾಗುವುದು, ಈ ಚೀಟಿಯಿಂದ ರೈತರು ವಿವಿಧ ಸೌಲಭ್ಯಗಳನ್ನು ಪಡೆಯಲು ಅನುಕೂಲವಾಗಲಿದೆ ಎಂದು ಸಚಿವರು ಹೇಳಿದರು.

ಬೆಂಬಲ ಬೆಲೆ

ಬೆಳೆಗಳಿಗೆ ಕೇಂದ್ರ ಸರ್ಕಾರ ಈಗಾಗಲೇ ಕನಿಷ್ಠ ಬೆಂಬಲ ಬೆಲೆ ಘೋಷಿಸಿದ್ದು, ಮಾರುಕಟ್ಟೆಯಲ್ಲಿ ಈ ಬೆಳೆಗಳ ಬೆಲೆ ಇಳಿಕೆಯದರೂ ಸಹ , ರಾಜ್ಯ ಸರ್ಕಾರ ಕನಿಷ್ಠ ಬೆಂಬಲ ಬೆಲೆಯಲ್ಲಿ ಬೆಳೆ ಖರೀದಿ ಮಾಡಿ, ಹೆಚ್ಚುವರಿ ಮೊತ್ತವನ್ನು ಕೇಂದ್ರದಿಂದ ಪಡೆಯಲು ಅವಕಾಶ ಕಲ್ಪಿಸಲಾಗಿದೆ , ಹೆಚ್ಚುವರಿ ಮೊತ್ತವನ್ನು ಕೇಂದ್ರ ರಾಜ್ಯಗಳಿಗೆ ಬಿಡುಗಡೆ ಮಾಡಲಿದೆ ಎಂದು ಕೃಷಿ ಸಚಿವರು ತಿಳಿಸಿದರು.

ಕೋವಿ ಲೈಸೆನ್ಸ್ ನಿಯಮ ಸಡಿಲಿಕೆಗೆ ಚರ್ಚೆ

ಉಡುಪಿ ಜಿಲ್ಲೆಯಲ್ಲಿ ರೈತರ ಬೆಳೆಗಳಿಗೆ ಕಾಡು ಪ್ರಾಣಿಯ ಹಾವಳಿ ಇದ್ದು, ಕೋವಿ ಲೈಸೆನ್ಸ್ ಪಡೆಯಲು ಇರುವ ಸಮಸ್ಯೆ ಕುರಿತು ರೈತರ ಆಲಿಸಿದ ಸಚಿವರು ಈ ಕುರಿತಂತೆ ನಿಯಮ ಸಡಿಲಿಕೆಗೆ ಜಿಲ್ಲಾಧಿಕಾರಿಗಳೊಂದಿಗೆ ಚರ್ಚಿಸಲಾಗುವುದು ಎಂದು ಹೇಳಿದರು, ರೈತರ ಬೆಳೆಗಳಿಗೆ ಉಪ್ಪು ನೀರು ನುಗ್ಗಿ ಬೆಳೆ ಹಾನಿಯಾಗುವ ಕುರಿತಂತೆ , ರೈತರ ಜಮೀನಿನ ಬಳಿ ದಂಡೆ ನಿರ್ಮಿಸುವ ಕುರಿತಂತೆ ರಾಜ್ಯದ ಸಣ್ಣ ನೀರಾವರಿ ಸಚಿವರ ಜೊತೆ ಚರ್ಚಿಸುವುದಾಗಿ ಹೇಳಿದರು.

Share Information
Continue Reading
Advertisement
Click to comment

Leave a Reply

Your email address will not be published. Required fields are marked *