LATEST NEWS
ಪುಂಜಾಲಕಟ್ಟೆ ಪೊಲೀಸ್ ಅಧಿಕಾರಿ ವಿರುದ್ದ ಕ್ರಮಕ್ಕೆ 24 ಗಂಟೆ ಗಡುವು ನೀಡಿದ ವಕೀಲರು

ಮಂಗಳೂರು ಡಿಸೆಂಬರ್ 07: ಪುಂಜಾಲಕಟ್ಟೆ ಠಾಣೆಯ ಪೊಲೀಸ್ ಅಧಿಕಾರಿಗಳ ವಿರುದ್ದ ಕ್ರಮಕ್ಕೆ ಆಗ್ರಹಿಸಿ ಮಂಗಳೂರು ವಕೀಲರ ಸಂಘದ ನೇತೃತ್ವದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯದ ಪ್ರತಿಭಟನೆ ನಡೆಸಲಾಯಿತು.
ಯುವ ವಕೀಲ ಕುಲದೀಪ್ ಮೇಲೆ ದೌರ್ಜನ್ಯ ನಡೆಸಿರುವ ಪಿಎಸ್‌ಐ ಸುತೇಶ್ ವಿರುದ್ಧ 24 ಗಂಟೆ ಒಳಗೆ ಎಫ್‌ಐಆರ್ ದಾಖಲಿಸಿ, ಅಮಾನತು ಮಾಡಿ, ವಿಚಾರಣೆಗೆ ಒಳಪಡಿಸಬೇಕು’ ಎಂದು ಪ್ರತಿಭಟನಾಕಾರರು ಗಡುವು ನೀಡಿದರು. ಪೊಲೀಸ್ ಅಧಿಕಾರಿ ವಿರುದ್ಧ ಕ್ರಮ ಕೈಗೊಳ್ಳದೇ ಹೋದರೆ ಹೋರಾಟವನ್ನು ತೀವ್ರಗೊಳಿಸುವುದಾಗಿ ಎಚ್ಚರಿಸಿದರು.

ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ಸಂಘದ ಅಧ್ಯಕ್ಷ ಪೃಥ್ವಿರಾಜ್ ರೈ, ‘ಕುಲದೀಪ್ ಅವರು ವಕೀಲರು ಎಂದು ಗೊತ್ತಿದ್ದರೂ, ಅವರ ಮೇಲೆ ಗೇಟ್ ಕಳವಿನ ಆರೋಪ ಹೊರಿಸಿ ರಾತ್ರೋರಾತ್ರಿ ಅಮಾನುಷವಾಗಿ ಬಂಧಿಸಿದ್ದಾರೆ. ವಕೀಲನಾದರೆ ನ್ಯಾಯಾಲಯದಲ್ಲಿ ನೋಡಿಕೊಳ್ಳು ಎಂದು ಉಡಾಫೆಯಿಂದ ಪೊಲೀಸ್ ಅಧಿಕಾರಿ ಮಾತನಾಡಿದ್ದಾರೆ. ಠಾಣೆಗೆ ಕರೆದೊಯ್ಯುವಾಗ ದಾರಿ ಮಧ್ಯೆ ವಾಹನ ನಿಲ್ಲಿಸಿ ಹಲ್ಲೆ ನಡೆಸಿದ್ದಾರೆ’ ಎಂದು ಆರೋಪಿಸಿದರು. ‘ವ್ಯಕ್ತಿಯ ಬಂಧನದ ವೇಳೆ ಪಾಲಿಸಬೇಕಾದ ಸುಪ್ರೀಂ ಕೋರ್ಟ್ ಮಾರ್ಗಸೂಚಿಗಳನ್ನು ಪೊಲೀಸ್ ಅಧಿಕಾರಿಯು ಉಲ್ಲಂಘಿಸಿದ್ದಾರೆ. ಅವರು ಕರ್ತವ್ಯದಲ್ಲಿ ಮುಂದುವರಿಯಲು ಅರ್ಹರಲ್ಲ. ಅವರ ವಿರುದ್ಧ ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ದೂರು ನೀಡಿದ್ದೇವೆ. ವಿಚಾರಣೆ ನಡೆಸಿ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ’ ಎಂದರು.