Connect with us

    LATEST NEWS

    ಆಡಳಿತ ವ್ಯವಸ್ಥೆ ಜನರ ಸಮಸ್ಯೆಗೆ ಸೂಕ್ತ ಪರಿಹಾರವಾಗಬೇಕು: ಸಚಿವ ಕೋಟ ಶ್ರೀನಿವಾಸ ಪೂಜಾರಿ

    ಉಡುಪಿ, ಮಾರ್ಚ್ 23 : ಆಡಳಿತ ವ್ಯವಸ್ಥೆಯು ಜನಸಾಮಾನ್ಯರ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಒದಗಿಸುವ ಅತ್ಯಂತ ಪ್ರಮುಖ ಭಾಗವಾಗಿ ಕಾರ್ಯನಿರ್ವಹಿಸುವ ಮೂಲಕ ಜನಸ್ನೇಹಿಯಾಗಿರಬೇಕು ಎಂದು ರಾಜ್ಯದ ಸಮಾಜ ಕಲ್ಯಾಣ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು. ಬ್ರಹ್ಮಾವರದಲ್ಲಿ, ಕಂದಾಯ ಇಲಾಖೆ ಹಾಗೂ ಜಿಲ್ಲಾಡಳಿತ ಉಡುಪಿ ಜಿಲ್ಲೆ ಇವರ ಸಂಯುಕ್ತ ಆಶ್ರಯದಲ್ಲಿ, 10 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣಗೊಂಡ ಬ್ರಹ್ಮಾವರ ತಾಲೂಕು ಆಡಳಿತ ಸೌಧದ ನೂತನ ಕಟ್ಟಡ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದರು.

    ಸಾರ್ವಜನಿಕರ ಬಹುತೇಕ ಸಮಸ್ಯೆಗಳು ಕಂದಾಯ ಇಲಾಖೆಗೆ ಸಂಬಂಧಪಟ್ಟಿದ್ದು. ಆಡಳಿತ ವ್ಯವಸ್ಥೆಯಲ್ಲಿ ಪಾರದರ್ಶಕತೆಯಿಂದ ಕಾರ್ಯ ನಿರ್ವಹಿಸಿ, ಸಮಸ್ಯೆಗಳನ್ನು ಶೀಘ್ರದಲ್ಲಿ ಇತ್ಯರ್ಥಪಡಿಸುವ ಮೂಲಕ ಜನಪರ ಕೆಲಸಗಳನ್ನು ಮಾಡುವ ಮನೋಭಾವವನ್ನು ಸಿಬ್ಬಂದಿಗಳು ಬೆಳೆಸಿಕೊಳ್ಳುವಂತೆ ತಿಳಿಸಿದರು.  ಉಡುಪಿ ಜಿಲ್ಲೆಯಲ್ಲಿ ಡೀಮ್ಡ್ ಅರಣ್ಯ ವಿನಾಯತಿಯ ನಂತರ ಕಂದಾಯ ಇಲಾಖೆಗೆ ನೀಡಿರುವ ಜಾಗವನ್ನು ಅರ್ಹರಿಗೆ 94 ಸಿ ಮತ್ತು 94 ಸಿಸಿ ಯಡಿಯಲ್ಲಿ ಆದ್ಯತೆಯ ಮೇಲೆ ಹಕ್ಕುಪತ್ರಗಳನ್ನು ನೀಡುವ ಕಾರ್ಯ ಆಗಬೇಕು ಎಂದರು.

    ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಾಸಕ ಕೆ. ರಘುಪತಿ ಭಟ್ ಪ್ರಾಸ್ತಾವಿಕವಾಗಿ ಮಾತನಾಡಿ,  ಬ್ರಹ್ಮಾವರ ತಾಲೂಕಿನ ಸಮಗ್ರ ಅಭಿವೃದ್ಧಿಗೆ ಅನೇಕ ಕಾರ್ಯಕ್ರಮಗಳನ್ನು ಕೈಗೊಂಡಿದ್ದು, ಕೃಷಿ ಮತ್ತು ಕುಡಿಯುವ ನೀರಿನ ಸಮಸ್ಯೆಯ ಶಾಶ್ವತ ಕಾಮಗಾರಿಗಳಿಗಾಗಿ 310 ಕೋಟಿ ರೂ. ಮತ್ತು 195 ಕೊಟಿ ರೂ. ಗಳ ಯೋಜನೆಯನ್ನು ಕೈಗೊಳ್ಳಲಾಗಿದೆ. 80 ಕೋಟಿ ರೂ. ವೆಚ್ಚದಲ್ಲಿ ಬ್ರಹ್ಮಾವರ ಸೀತಾನದಿ ಚತುಷ್ಪಥ ರಸ್ತೆ ಕಾಮಗಾರಿ ಪ್ರಗತಿಯಲ್ಲಿದೆ. ಕೇಂದ್ರ ಸರ್ಕಾರದ ನೆರವಿನಿಂದ 5 ಎಕ್ರೆ ಪ್ರದೇಶದಲ್ಲಿ 100 ಬೆಡ್ ಸಾಮರ್ಥ್ಯದ ಸುಸಜ್ಜಿತ ಇ.ಎಸ್.ಐ. ಆಸ್ಪತ್ರೆ ನಿರ್ಮಾಣ ಕಾಮಗಾರಿಯು ಟೆಂಡರ್ ಹಂತದಲ್ಲಿದೆ. ನೂತನ ತಾಲೂಕು ಕೋರ್ಟ್ ಹಾಗೂ ತಾಲೂಕು ಪಂಚಾಯತ್ ಕಟ್ಟಡ ನಿರ್ಮಾಣಕ್ಕೆ ಪ್ರಯತ್ನಗಳು ನಡೆದಿವೆ ಎಂದರು.

    ಪ್ರಸ್ತುತ ನೂತನ ತಾಲೂಕು ಆಡಳಿತ ಸೌಧದಲ್ಲಿ ಎಲ್ಲಾ ತಾಲೂಕು ಮಟ್ಟದ ಕಚೇರಿಗಳು ಒಂದೇ ಕಡೆ ಇರುವುದರಿಂದ ನಾಗರೀಕರಿಗೆ ಒಂದೇ ಕಡೆಯಲ್ಲಿ ಹಲವು ಸೌಲಭ್ಯಗಳು ಶೀಘ್ರದಲ್ಲಿ ದೊರೆಯಲಿದ್ದು, ಕಟ್ಟಡದಲ್ಲಿ ಪೀಠೋಪಕರಣ ಮತ್ತಿತರ ಸೌಲಭ್ಯಕ್ಕಾಗಿ ಹೆಚ್ಚುವರಿಯಗಿ 2.75 ಕೋಟಿ ರೂ. ಗಳನ್ನು ಶೀಘ್ರದಲ್ಲಿ ಬಿಡುಗಡೆಗೊಳಿಸುವುದಾಗಿ ಕಂದಾಯ ಸಚಿವರು ಭರವಸೆ ನೀಡಿದ್ದಾರೆ ಎಂದರು. ವಿವಿಧ ಯೋಜನೆಗಳ ಫಲಾನುಭವಿಗಳಿಗೆ ಸವಲತ್ತುಗಳನ್ನು ವಿತರಿಸಲಾಯಿತು.

    Share Information
    Advertisement
    Click to comment

    You must be logged in to post a comment Login

    Leave a Reply