Connect with us

LATEST NEWS

ಮಂಗಳೂರು ನಗರ ದಕ್ಷಿಣ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಕಸ‌ ವಿಲೇವಾರಿಗೆ ವಾರ್ ರೂಂ – ಶಾಸಕ ಕಾಮತ್

ಮಂಗಳೂರು ಮಾರ್ಚ್ 23: ಮಂಗಳೂರು ನಗರ ದಕ್ಷಿಣ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಮನೆ ಮನಗಳಿಂದ ಕಸ‌ ಸಂಗ್ರಹಿಸುವುದು ಹಾಗೂ ರಸ್ತೆ ಬದಿಗಳಲ್ಲಿ ಕಸದ ರಾಶಿಗಳು ಬಿದ್ದಿರುವುದನ್ನು ಬಗೆಹರಿಸುವ ದೃಷ್ಟಿಯಿಂದ ಶಾಸಕ ವೇದವ್ಯಾಸ್ ಕಾಮತ್ ಅವರು ತಮ್ಮ ಕಚೇರಿಯಲ್ಲಿ ವಾರ್ ರೂಂ ಪ್ರಾರಂಭಿಸಿದ್ದಾರೆ. ಸಾರ್ವಜನಿಕರು ತಮ್ಮ ಮನೆ, ಫ್ಲಾಟ್ ಅಥವ ರಸ್ತೆ ಬದಿಯಲ್ಲಿ ಕಸದ ರಾಶಿಗಳಿದ್ದರೆ ಶಾಸಕರ ವಾರ್ ರೂಂ ದೂರವಾಣಿ ಸಂಖ್ಯೆಗೆ ಕರೆ ಮಾಡಿದರೆ ಕಸ ತೆರವುಗೊಳಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಶಾಸಕ ವೇದವ್ಯಾಸ್ ಕಾಮತ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕಳೆದ ಹಲವು ದಿನಗಳಿಂದ ಕಸ ಸಂಗ್ರಹಣೆಯ ಕಾರ್ಮಿಕರು ಮುಷ್ಕರ ಹೂಡಿರುವ ಕಾರಣ ಅವರ ಬೇಡಿಕೆಗಳನ್ನು ಈಡೇರಿಸುವ ದೃಷ್ಟಿಯಿಂದ ಶಾಸಕ ಕಾಮತ್ ಅವರು ಮಾತುಕತೆಯ ಮೂಲಕ ಮನವೊಲಿಸುವ ಪ್ರಯತ್ನ ಮಾಡಿದ್ದಾರೆ. ಹಲವು ಪ್ರಯತ್ನ ಮಾಡಿದರೂ ಅವರಿಂದ ಸಕಾರಾತ್ಮಕ ಸ್ಪಂದನೆ ದೊರೆತಿಲ್ಲ. ಇಡೀ ರಾಜ್ಯದಾದ್ಯಂತ ಕಾರ್ಮಿಕರು ಪ್ರತಿಭಟನೆ ಕೈಗೊಂಡಿರುವ ಕಾರಣ ರಾಜ್ಯದಲ್ಲಿ ಮುಷ್ಕರ ಕೈಬಿಟ್ಟ ನಂತರವೇ ಕೆಲಸಕ್ಕೆ ಹಾಜರಾತ್ತೇವೆ ಎಂದು ಕಾರ್ಮಿಕರು ತಿಳಿಸಿದ್ದಾರೆ. ಹಾಗಾಗಿ ಮಂಗಳೂರು ನಗರ ದಕ್ಷಿಣ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಪ್ರಾರಂಭದಲ್ಲಿ ಕಸ ಸಾಗಾಟದ ವಾಹನ ಚಾಲಕರನ್ನು ತಾತ್ಕಾಲಿಕ ಆಧಾರದಲ್ಲಿ ನೇಮಿಸಿ ಕೆಲಸ‌ ಪ್ರಾರಂಭಿಸುವ ಪರಿಸ್ಥಿತಿ ನಿರ್ಮಾಣವಾಗಿದೆ. ತಕ್ಷಣವೇ ಸಾಕಷ್ಟು ವಾಹನ ಚಾಲಕರನ್ನು ಜೋಡಿಸಿಕೊಳ್ಳುವುದು ಕಷ್ಟ ಸಾಧ್ಯವಾಗಿತ್ತು. ಆದರೂ ಸರಿಸುಮಾರು 75 ರಿಂದ 80 ಚಾಲಕರನ್ನು ಜೋಡಿಸುವ ಕೆಲಸ ಮಾಡಲಾಗಿದೆ. ಇನ್ನೂ ಹೆಚ್ಚುವರಿ 30 ರಿಂದ 40 ವಾಹನ ಚಾಲಕರ ಅಗತ್ಯವಿದ್ದು, ಕೆಲಸ ಮಾಡಲು ಇಚ್ಛೆಯುಳ್ಳ ವಾಹನ ಚಾಲಕರು ನನ್ನ ಕಚೇರಿಯನ್ನು ಸಂಪರ್ಕಿಸುವಂತೆ ಶಾಸಕ ಕಾಮತ್ ಹೇಳಿದ್ದಾರೆ.

ವಾರ್ಡ್ ಗಳ ಆಧಾರದಲ್ಲಿ ವಾಹನ ಚಾಲಕನ್ನು ನೇಮಿಸಲಾಗಿದ್ದು, ಅದಕ್ಕೆ ಸಂಬಂಧಪಟ್ಟಂತೆ ಅಧಿಕಾರಿಗಳ ಹಾಗೂ ಸೂಪರ್ ವೈಸರ್ ಗಳ ಮೊಬೈಲ್ ಸಂಖ್ಯೆಯನ್ನು ಕೂಡ ಈ ಮೂಲಕ ನೀಡಲಾಗಿದೆ. ಈಗ ಕೆಲಸಕ್ಕೆ ಜೋಡಿಸಿಕೊಂಡಿರುವ ಕಾರ್ಮಿಕರು ಕೂಲಿ ಕೆಲಸ ಕಾರ್ಮಿಕರಾಗಿರುವ ಕಾರಣ ವಾರ್ಡ್ ಗಳ ಪರಿಚಯವಿಲ್ಲ. ಹಾಗಾಗಿ ಕೆಲವೆಡೆಗಳಲ್ಲಿ ಕಸ ಸಂಗ್ರಹಣೆಯಲ್ಲಿ ತೊಡಕಾಗಿದೆ. ಅದೆಲ್ಲವನ್ನೂ ನಿವಾರಿಸುವ ಪ್ರಯತ್ನ ಮಾಡಲಾಗುತ್ತಿದೆ ಎಂದು ಹೇಳಿದ್ದಾರೆ.

ವಾರ್ಡ್ ಗಳ ಸಂಖ್ಯೆ, ಸೂಪರ್ ವೈಸರ್, ಡ್ರೈವರ್ ಗಳು ಹಾಗೂ ಸ್ಥಳೀಯ ಅಧಿಕಾರಿಗಳ ಮೊಬೈಲ್ ಸಂಖ್ಯೆಯನ್ನು ನೀಡಲಾಗಿದೆ. ಕಸ ವಿಲೇವಾರಿಯ ಸಮಸ್ಯೆ ತಲೆದೂರಿದಲ್ಲಿ ನಮ್ಮ ವಾರ್ ರೂಂ ಸಂಪರ್ಕಿಸಿದರೆ ಅದನ್ನು ಸರಿಪಡಿಸುವ ಕೆಲಸ ಮಾಡಲಾಗುವುದು. ಜನತೆಗೆ ಆಗಿರುವ ಸಮಸ್ಯೆಗೆ ವಿಷಾದ ವ್ಯಕ್ತಪಡಿಸುತ್ತಾ, ಇನ್ನು 3-4 ದಿನಗಳಲ್ಲಿ ಸಮಸ್ಯೆ ಬಗೆಹರಿಸುವ ಮೂಲಕ ತ್ಯಾಜ್ಯ ವಿಲೇವಾರಿಯ ಸಮಸ್ಯೆ ಸರಿಪಡಿಸಲಾಗುವುದು ಎಂದು ಹೇಳಿದರು.

ಈ ವಿಚಾರದ ಕುರಿತು ಅನೇಕರ ಬಳಿ ಪರ್ಯಾಯ ವ್ಯವಸ್ಥೆಗೆ ವಾಹನ ಚಾಲಕರ, ಕಾರ್ಮಿಕರ ಅವಶ್ಯಕತೆಯನ್ನು ತಿಳಿಸಲಾಗಿತ್ತು. ನಗರದ ಜನತೆಯ ಹಿತದೃಷ್ಟಿಯಿಂದ ರಾಜಕೀಯ ಮರೆತು ಸಹಕಾರ ನೀಡಿದ್ದಲ್ಲಿ ಸಮಸ್ಯೆ ಶೀಘ್ರವಾಗಿ ಬಗೆಹರಿಸಬಹುದಿತ್ತು. ಆದರೆ ಆಡಳಿತ ವ್ಯವಸ್ಥೆಯನ್ನು ವಿರೋಧಿಸುವ ವಿರೋಧ ಪಕ್ಷಗಳು ಟೀಕೆ ಮಾಡುವುದು ಬಿಟ್ಟು ವಾಹನ ಚಾಲಕರನ್ನು ಒದಗಿಸುವ ಪ್ರಾಮಾಣಿಕ ಸೇವೆ ಮಾಡಲಿ. ಹಾಗಾಗಿ ಯಾವುದೇ ರೀತಿಯ ಸಮಸ್ಯೆಗಳಾದರೆ ವಾರ್ ರೂಂ ಸಂಪರ್ಕಿಸಿ. ಜನತೆಗೆ ಆಗಿರುವ ಸಮಸ್ಯೆಗೆ ವಿಷಾದ ವ್ಯಕ್ತಪಡಿಸುತ್ತೇನೆ ಎಂದು ಶಾಸಕ ಕಾಮತ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಾರ್ ರೂಂ ಸಂಖ್ಯೆ :
8904078297
8197270222

ವಾರ್ ರೂಂ ಸಮಯ :
ಬೆಳಗ್ಗೆ 09:00 ರಿಂದ ಸಂಜೆ 05:00

Advertisement
Click to comment

You must be logged in to post a comment Login

Leave a Reply