Connect with us

LATEST NEWS

ರಣರಂಗವಾದ ದೆಹಲಿ..ಕೆಂಪುಕೋಟೆ ಮೇಲೆ ರೈತ ಧ್ವಜ ಹಾರಾಟ….!!

ನವದೆಹಲಿ ಜನವರಿ 26: ವಿವಾದಿತ ಕೃಷಿ ಕಾಯ್ದೆಗಳನ್ನು ವಿರೋಧಿಸಿ ರೈತರು ನಡೆಸುತ್ತಿರುವ ಶಾಂತಿಯುತ ಪ್ರತಿಭಟನೆ, ಕೇಂದ್ರ ಸರಕಾರದ ಅಸಡ್ಡೆಯಿಂದಾಗಿ ಕೈಮೀರುವ ಹಂತಕ್ಕೆ ತಲುಪಿದ್ದು, ತಾಳ್ಮೆ ಕಳೆದುಕೊಂಡ ರೈತರು ದೆಹಲಿಯ ಕೆಂಪುಕೋಟೆಗೆ ಮುತ್ತಿಗೆ ಹಾಕಿದ್ದಾರೆ.


ಕೇಂದ್ರ ಸರ್ಕಾರದ ಮೂರು ವಿವಾದಾತ್ಮಕ ಕಾಯ್ದೆಗಳ ವಿರುದ್ಧ ಕಳೆದ ಎರಡು ತಿಂಗಳಿಂದ ದೆಹಲಿಯ ಗಡಿಯಲ್ಲಿ ನಡೆಯುತ್ತಿದ್ದ ಶಾಂತಿಯುತ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿದ್ದು, ಗಣರಾಜ್ಯೋತ್ಸವ ದಿನದಂದು ತಾಳ್ಮೆಗೆಟ್ಟು ದೆಹಲಿಯ ಕೆಂಪುಕೋಟೆಗೆ ಮುತ್ತಿಗೆ ಹಾಕಿದ್ದಾರೆ.


ದೆಹಲಿಯ ಮುಕಾರ್ಬಾ ಚೌಕ್ ನಲ್ಲಿ ಬ್ಯಾರಿಕೇಡ್ ಗಳನ್ನು ಮುರಿಯಲು ಯತ್ನಿಸಿದ ರೈತರ ಮೇಲೆ ಪೊಲೀಸರು ಲಾಠಿ ಪ್ರಹಾರ , ಜೊತೆಗೆ ಅಶ್ರುವಾಯು ಪ್ರಯೋಗಿಸಲಾಗಿದೆ. ಆದರೂ ಜಗ್ಗದ ರೈತರು ದೆಹಲಿಯ ಹೃದಯ ಭಾಗ ತಲುಪಿದ್ದು, ಕೆಂಪು ಕೋಟೆಗೆ ನುಗ್ಗಿ ರೈತ ಧ್ವಜ ಹಾರಿಸಿದ್ದಾರೆ.

ಸಾವಿರಾರು ಸಂಖ್ಯೆಯಲ್ಲಿ ಆಗಮಿಸಿದ ರೈತರು ಕೆಂಪುಕೋಟೆಗೆ ಮುತ್ತಿಗೆ ಹಾಕಿದ್ದಾರೆ. ಮುತ್ತಿಗೆ ಹಾಕಿದ್ದು ಮಾತ್ರವಲ್ಲದೇ ರಾಷ್ಟ್ರಧ್ವಜ ಹಾರಿಸುವ ಜಾಗದಲ್ಲಿ ಕಿಸಾನ್‌ ಯೂನಿಯನ್‌ ಧ್ವಜ ಹಾರಿಸಿದ್ದಾರೆ.  ಪ್ರತಿವರ್ಷ ಕೆಂಪುಕೋಟೆಯಲ್ಲಿ ಸ್ವಾತಂತ್ರ್ಯ ದಿನದಂದು ಪ್ರಧಾನಿ ರಾಷ್ಟ್ರಧ್ವಜವನ್ನು ಹಾರಿಸಿ ದೇಶವನ್ನು ಉದ್ದೇಶಿಸಿ ಮಾತನಾಡುತ್ತಾರೆ. ಪ್ರಧಾನಿ ರಾಷ್ಟ್ರಧ್ವಜವನ್ನು ಹಾರಿಸುತ್ತಿದ್ದ ಜಾಗದಲ್ಲಿ ಇದೇ ಮೊದಲ ಬಾರಿಗೆ ಪ್ರತಿಭಟನಾ ಧ್ವಜ ಹಾರಿದೆ.

ದೆಹಲಿಯ ಟಿಕ್ರಿ, ಸಿಂಘು ಮತ್ತು ಗಾಜಿಪುರ ಗಡಿಯಲ್ಲಿ ಇಂದು ಬೆಳಗ್ಗೆ ಹಿಂಸಾಚಾರ ಭುಗಿಲೆದ್ದಿದ್ದು, ಬ್ಯಾರಿಕೇಡ್ ಗಳನ್ನು ಮುರಿದು ಕಾಶ್ಮೀರಿ ದ್ವಾರವನ್ನು ತಲುಪಿದ ನೂರಾರು ರೈತರ ಮೇಲೆ ಪೊಲೀಸರು ಲಾಠಿ ಚಾರ್ಚ್ ನಡೆಸಿ ಅಶ್ರುವಾಯು ಪ್ರಯೋಗಿಸಿದ್ದಾರೆ.
ಕೇಂದ್ರ ಸರಕಾರದ ಮೊಂಡುತನಕ್ಕೆ ಈ ಸಲ ಬಾರಿ ಬೆಲೆ ತೆರಬೇಕಾದ ಸಾಧ್ಯತೆ ಇದೆ ಎಂದು ಹೇಳಲಾಗಿದ್ದು, ಗಂಟೆಗಳು ಕಳೆದಂತೆ ಪ್ರತಿಭಟನೆ ಹೆಚ್ಚಾಗುತ್ತಿದ್ದು, ಕೆಲವು ಕಡೆ ಹಿಂಸಾಚಾರಕ್ಕೂ ತಿರುಗಿದೆ.