LATEST NEWS
ಗೋವನ್ನು ಹಿಂಸೆ ಮಾಡದೆ ಕೊಂದು ತಿನ್ನಿ ಅಂದಿದ್ದರು ಕಾರಂತರು : ಪ್ರಕಾಶ್ ರೈ

ಗೋವನ್ನು ಹಿಂಸೆ ಮಾಡದೆ ಕೊಂದು ತಿನ್ನಿ ಅಂದಿದ್ದರು ಕಾರಂತರು :ಪ್ರಕಾಶ್ ರೈ
ಉಡುಪಿ, ಅಕ್ಟೋಬರ್ 10: ಗೋಮಾಂಸ ತಿನ್ನುವವರು ತಿನ್ತಾರೆ ಅಡ್ಡಿ ಮಾಡಬೇಡಿ, ಹಿಂಸೆ ಮಾಡದೆ ದನವನ್ನು ಕೊಂದು ತಿನ್ನಿ ಎಂದು ಶಿವರಾಮ ಕಾರಂತರು ಹೇಳಿದ್ದರು ಎಂದು ಖ್ಯಾತ ನಟ ಪ್ರಕಾಶ ರೈ ಮಾಹಿತಿ ನೀಡಿದ್ದಾರೆ.
ಉಡುಪಿಯ ಕೋಟದಲ್ಲಿ ಕಾರಂತ ಥೀಮ್ ಪಾರ್ಕ್ ನಲ್ಲಿ ಡಾ ಶಿವರಾಮ ಕಾರಂತ ಹುಟ್ಟೂರ ಪ್ರಶಸ್ತಿ ಸ್ವೀಕರಿಸಿ ಅವರು ಮಾತನಾಡಿದರು. ಭಾರೀ ವಿರೋಧದ ನಡುವೆಯೂ ಡಾ ಶಿವರಾಮ ಕಾರಂತ ಹುಟ್ಟೂರ ಪ್ರಶಸ್ತಿ ನಟ ಪ್ರಕಾಶ್ ರೈಯವರಿಗೆ ನೀಡಲಾಗಿದೆ.

ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ನಟ ಪ್ರಕಾಶ್ ರೈ ವಿರೋಧದ ನಡುವೆಯೂ ನಾನು ಬರಲು ಕಾರಣ ಏನು ಗೊತ್ತಾ, ಕಾರಂತರ ಊರಿನ ಸಂಭ್ರಮದಲ್ಲಿ ಭಾಗಿಯಾಗುವ ಆಸೆ. ಕಾರಂತಜ್ಜರ ಹೆಸರಿನ ಪ್ರಶಸ್ತಿ ಸ್ವಿಕರಿಸುವ ಒಂದು ಭಾಗ್ಯ ಎಂದ ಅವರು ನಾನು ಒಮ್ಮೆ ನಿರ್ಧಾರ ತಗೊಂಡ್ರೆ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ ಎಂದ ಅವರು ಅದೇ ಕಾರಣಕ್ಕೆ ಯಾರೇ ವಿರೋಧ ಮಾಡಲಿ ಪ್ರಶಸ್ತಿ ಸ್ವೀಕರಿಸಿಯೇ ಸಿದ್ಧ ಎಂದರು.
ನೆಮ್ಮದಿಯ ಸಮಾಜ ನಿರ್ಮಾಣವಾಗಬೇಕು. ಭಯ ಇಲ್ಲದ ಸಮಾಜ ನಿರ್ಮಾಣ ಆಗ್ಬೇಕು. ಮುಂದಿನ ತಲೆಮಾರಿಗೆ ವಾಕ್ ಸ್ವಾತಂತ್ರ್ಯ ಬೇಕು ಎಂದು ಹೇಳಿದ ಅವರು ನಟನಾಗಿ ನನಗೆ ಮಾತನಾಡಲು ಯಾವುದೇ ಅಡ್ಡಿ ಇರಬಾರದು.
ಮನಸಾಕ್ಷಿಯನ್ನು ಹೇಳಲು ತಡೆಯಲು ನೀವು ಯಾರು ಎಂದು ಅವರು ತನ್ನನ್ನು ವಿರೋಧಿಸಿದವರ ವಿರುದ್ಧ ಕಿಡಿಕಾರಿದರು. ದೇಶದಲ್ಲಿ ಇತ್ತೀಚಿನ ದಿನಗಳಲ್ಲಿ ಭಯ ಹುಟ್ಟಿಸುವ ವ್ಯವಸ್ಥಿತ ಕೆಲಸ ನಡೆಯುತ್ತಿದೆ ಎಂದು ಅವರು ಇದೇ ಸಂದರ್ಭದಲ್ಲಿ ಹೇಳಿದರು.