Connect with us

    KARNATAKA

    ಕಾಸರಗೋಡು : ಎಡನೀರು ಶ್ರೀಗಳ ಕಾರು ತಡೆದು ದುಷ್ಕರ್ಮಿಗಳಿಂದ ದಾಳಿ, ಶಾಸಕ ಭರತ್ ಶೆಟ್ಟಿ ಖಂಡನೆ..!!

    ಕಾಸರಗೋಡು : ಎಡನೀರು ಸಂಸ್ಥಾನದ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ ಕಾರಿನ ಮೇಲೆ ದುಷ್ಕರ್ಮಿಗಳು ದಾಳಿ ನಡೆಸಿದ್ದಾರೆ. ಸಾರ್ವಜನಿಕ ಕಾರ್ಯಕ್ರಮದಲ್ಲಿ ಭಾಗವಹಿಸಿದ ಬಳಿಕ  ಹಿಂದಿರುಗುವಾಗ ಈ ಘಟನೆ ನಡೆದಿದೆ.

    ಬೋವಿಕಾನ – ಇರಿಯಣ್ಣಿ ಮಾರ್ಗ ಮಧ್ಯೆ ವಾಹನವನ್ನು ತಡೆದ ಪುಂಡರ ತಂಡವೊಂದು ತಗಾದೆ ಎಬ್ಬಿಸಿ  ಬಾವಿಕೆರೆ ಎಂಬಲ್ಲಿ ದೊಣ್ಣೆಯಿಂದ ಕಾರಿನ ಗಾಜಿಗೆ ಹೊಡೆದು,  ಹಾನಿ ಮಾಡಿದ್ದಾರೆ.  ಈ  ಸಂದರ್ಭ ಸ್ವಾಮೀಜಿಯವರು ಕಾರು ನಿಲ್ಲಿಸದೇ ಶಾಂತರಾಗಿ ಮುಂದುವರಿದಿದ್ದು ಕಾಸರಗೋಡು ಪೋಲಿಸರು ಘಟನೆ ಮಾಹಿತಿ ಪಡೆದು ಪ್ರಕರಣ ದಾಖಲು ಮಾಡಿದ್ದಾರೆ. ಸ್ವಾಮೀಜಿ ಮೇಲಿನ ದಾಳಿಗೆ ವ್ಯಾಪಕ ಖಂಡನೆ ವ್ಯಕ್ತವಾಗಿದ್ದು ದುಷ್ಕರ್ಮಿಗಳ ಮೇಲೆ ಕಠಿಣ ಕ್ರಮಕ್ಕೆ ಕೇರಳ ಸರ್ಕಾರವನ್ನು ಆಗ್ರಹಿಸಲಾಗಿದೆ.

    ಎಡನೀರು ಮಠದ ಶ್ರೀಗಳ ಮೇಲೆ ಹಲ್ಲೆಗೆ  ಡಾ.ಭರತ್ ಶೆಟ್ಟಿ ವೈ ಖಂಡನೆ

    ಎಡನೀರು ಮಠದ ಶ್ರೀ ಶ್ರೀ ಸಚ್ಚಿದಾನಂದ ಭಾರತೀ ತೀರ್ಥ ಶ್ರೀಪಾದರ ವಾಹನಕ್ಕೆ ಕಾಸರಗೋಡು ಬೊವಿಕ್ಕಾನದಲ್ಲಿ ಸಮಾಜಘಾತುಕ ಶಕ್ತಿಗಳು ಅಡ್ಡಿಪಡಿಸಿ ಹಾನಿ ಮಾಡಿರುವುದನ್ನು
    ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದ ಶಾಸಕ ಡಾ ಭರತ್ ಶೆಟ್ಟಿ ತೀವ್ರವಾಗಿ ಖಂಡಿಸಿದ್ದಾರೆ. ಕೇರಳದಲ್ಲಿ ಕಾನೂನು ಸುವ್ಯವಸ್ಥೆಗೆ ಪುಂಡರು, ಹಿಂದು ವಿರೋಧಿ ಶಕ್ತಿಗಳು ಸವಾಲು ಹಾಕುವಂತಹ ಪರಿಸ್ಥಿತಿ ನಿರ್ಮಾಣವಾಗಿರುವುದು ಅಲ್ಲಿನ ಸರಕಾರದ ವೈಫಲ್ಯವನ್ನು ಎತ್ತಿ ತೋರಿಸುತ್ತಿದೆ. ಹಿಂದೂ ಸಮಾಜಕ್ಕೆ ಮಾರ್ಗದರ್ಶನ ನೀಡುವ ಹಾಗೂ ನಮ್ಮ ಸಮಾಜದ ಪೂಜ್ಯ ಮಠಗಳಲ್ಲಿ ಒಂದಾಗಿರುವ ಎಡನೀರು ಮಠದ ಶ್ರೀಗಳ ಮೇಲಿನ ದಾಳಿ ಹಿಂದೂ ಸಮಾಜದ ಮೇಲೆ ನಡೆದಿರುವ ದಾಳಿಯಾಗಿದೆ. ಸರಕಾರ ತಕ್ಷಣ ಸಮಾಜಘಾತ ಶಕ್ತಿಗಳನ್ನು ಹೆಡೆಮುರಿ ಕಟ್ಟಲು ಜಾಮೀನು ರಹಿತ ಸೆಕ್ಷನ್ ಅಡಿ ಕೇಸು ದಾಖಲಿಸಬೇಕು ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರನ್ನು ಒತ್ತಾಯಿಸಿದ್ದಾರೆ.

    VHP ಖಂಡನೆ:

    ಜಗದ್ಗುರು ಎಡನೀರು ಮಠಾಧೀಶರಾದ ಶ್ರೀ ಸಚ್ಚಿದಾನಂದ ಭಾರತೀ ಶ್ರೀಪಾದಂಗಳವರು ಸಂಚರಿಸುತಿದ್ದ ವಾಹನಕ್ಕೆ ಕಿಡಿಗೇಡಿಗಳು ತಡೆಯೊಡ್ಡಿ ಕೃತ್ಯ ಎಸಗಿದ ಘಟನೆಯನ್ನು ವಿಶ್ವ ಹಿಂದೂ ಪರಿಷದ್ ಬಲವಾಗಿ ಖಂಡಿಸಿದೆ . ಪೂಜ್ಯ ಸಾಧು ಸಂತರನ್ನು ಗುರಿಯಾಗಿಸಿಕೊಂಡು ನಡೆಯುತ್ತಿರುವ ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಿ ದುಷ್ಕರ್ಮಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಮತ್ತು ಜೊತೆಗೆ ಸ್ವಾಮೀಜಿಗೆ ಗರಿಷ್ಟ ಭದ್ರತೆ ಒದಗಿಸಬೇಕೆಂದು ವಿಶ್ವ ಹಿಂದೂ ಪರಿಷದ್ ಪ್ರಾಂತ ಸಹಕಾರ್ಯದರ್ಶಿ ಶರಣ್ ಪಂಪವೆಲ್ ಕೇರಳ ಸರಕಾರಕ್ಕೆ ಆಗ್ರಹಿಸಿದ್ದಾರೆ.

    Share Information
    Advertisement
    Click to comment

    You must be logged in to post a comment Login

    Leave a Reply