Connect with us

    KARNATAKA

    ಕಾರವಾರ: ಕಾಳಿ ತಟದ ಕಾಪ್ರಿ ದೇವರ ಜಾತ್ರೆ, ಮದ್ಯ, ಬೀಡಿ ಸಿಗರೇಟು ಇಲ್ಲಿ ನೈವೇದ್ಯ..!

    ಕಾರವಾರ : ದೇವರಿಗೆ ಹೂವು, ಹಣ್ಣು ಕಾಯಿ ಅರ್ಪಿಸೋದು ಸಾಮಾನ್ಯ. ಆದರೆ, ಉತ್ತರ ಕನ್ನಡದ ಕಾರವಾರ ನಗರದ ಕಾಳಿ ನದಿ ಸಂಗಮದಲ್ಲಿರುವ ಕಾಪ್ರಿ ದೇವರ ಜಾತ್ರಾ ಮಹೋತ್ಸವದಲ್ಲಿ ಬೀಡಿ, ಸಿಗರೇಟು ಹಾಗೂ ಹೆಂಡವೇ ದೇವರಿಗೆ ಅರ್ಪಣೆ.

    ಧಗಧಗ ಉರಿಯುವ ಬೆಂಕಿಯ ಕುಂಡಕ್ಕೆ ತೆಂಗಿನ ಕಾಯಿ, ಬೀಡಿ ಹಾಗೂ ಕುಂಡದ ಸುತ್ತಾ ಅಗರಬತ್ತಿ, ಕ್ಯಾಂಡಲ್ ಹಚ್ಚುತ್ತಿರುವ ಭಕ್ತರು.‌ ಇನ್ನೊಂದೆಡೆ ದೇವರ ದರ್ಶನ ಪಡೆಯುತ್ತಾ ತಮ್ಮ ಕಷ್ಟ ಕಾರ್ಪಣ್ಯಗಳನ್ನು ತೋಡಿಕೊಳ್ಳುತ್ತಿರುವ ಜನ ಸಮೂಹ. ಈ ಎಲ್ಲಾ ದೃಶ್ಯಗಳು ಭಾನುವಾರ ಸಂಪನ್ನಗೊಂಡ ಕಾರವಾರ ನಗರದ ಕಾಳಿ ನದಿ ಸಂಗಮದಲ್ಲಿರುವ ಕಾಪ್ರಿ ದೇವರ ಜಾತ್ರಾ ಮಹೋತ್ಸವದಲ್ಲಿ. ಸಾರಾಯಿ ದೇವರು ಅಂತಲೇ ಖ್ಯಾತಿ ಪಡೆದಿರುವ ಖಾಪ್ರಿ ದೇವರ ಜಾತ್ರಾ ಮಹೋತ್ಸವದ ಹಿನ್ನೆಲೆ ನೂರಾರು ಭಕ್ತರು ದೇವರಿಗೆ ಮದ್ಯ ನೈವೇದ್ಯ ಮಾಡಿ ಸಿಗರೇಟಿನ ಆರತಿ ಮಾಡುವ ಮೂಲಕವೂ ವಿಶಿಷ್ಟ ರಿತಿಯಲ್ಲಿ ಪೂಜೆ ಸಲ್ಲಿಸಿದ್ದಾರೆ. ಮಕ್ಕಳಾಗದೇ ಇದ್ದ ದಂಪತಿಗಳು ಮಕ್ಕಳಾಗುವಂತೆ ಇಲ್ಲಿ ಹರಕೆ ಕಟ್ಟಿಕೊಂಡರೆ, ಇನ್ನು ಕೆಲವರು ಅನಾರೋಗ್ಯ ಸಮಸ್ಯೆ ಪರಿಹಾರಕ್ಕಾಗಿ, ಕುಟುಂಬದ ನೆಮ್ಮದಿಗಾಗಿ ಹರಕೆ ಕಟ್ಟಿಕೊಂಡು ತಮ್ಮ ಕಷ್ಟ ಕಾರ್ಪಣ್ಯಗಳನ್ನು ಕಳೆದುಕೊಳ್ಳುತ್ತಾರೆ‌‌. ತಮ್ಮ ಇಷ್ಟಾರ್ಥ ಪ್ರಾಪ್ತಿಯಾದ ಬಳಿಕ ಕ್ಷೇತ್ರಕ್ಕೆ ಕೋಳಿ, ಕುರಿ, ಹೆಂಡ, ಸಿಗರೇಟ್, ಬೀಡಿಗಳು ಸೇರಿದಂತೆ ಹಣ್ಣು ಕಾಯಿ ಅರ್ಪಿಸುತ್ತಾರೆ‌‌. ಅಲ್ಲದೇ, ಮಕ್ಕಳಿಗೆ ತುಲಾಭಾರ ನೆರವೇರಿಸೋದು ಕೂಡಾ ಇದೆ..ಹಿಂದೂ, ಮುಸ್ಲಿಂ, ಕ್ರಿಶ್ಚಿಯನ್ನರು ಕೂಡಾ ಈ ದೇವಳಕ್ಕೆ ಭೇಟಿ ನೀಡಿ ಬೆಲ್ಲ, ಸಕ್ಕರೆ ಹಾಗೂ ಕ್ಯಾಂಡಲ್‌ಗಳನ್ನು ಹಚ್ಚಿ ಪ್ರಾರ್ಥನೆ ಮಾಡಿ ತಮ್ಮ ಇಷ್ಟಾರ್ಥಗಳನ್ನು ನೆರವೇರಿಸಿಕೊಳ್ಳುತ್ತಾರೆ. ಕಾರವಾರ ಮಾತ್ರವಲ್ಲದೇ ಹೊರರಾಜ್ಯಗಳಾದ ಮಹಾರಾಷ್ಟ್ರ,ಗೋವಾ ಜನರು ಕೂಡಾ ಈ ಆಗಮಿಸಿ ತಮ್ಮ ಹರಕೆ ತೀರಿಸಿಕೊಂಡಿದ್ದಾರೆ.


    ಅಂದ ಹಾಗೇ ಇನ್ನು ಖಾಪ್ರಿ ದೇವರಿಗೆ ತನ್ನದೇ ಆದ ಇತಿಹಾಸವಿದೆ. ಒಂದು ಕಥೆಯ ಪ್ರಕಾರ, ಆಫ್ರಿಕಾ ಮೂಲದ‌ ವ್ಯಕ್ತಿಯೋರ್ವ 300 ವರ್ಷಗಳ ಹಿಂದೆ ಇಲ್ಲಿಗೆ ಬಂದು ದೇವರನ್ನು ತಂದು ಪೂಜಿಸುತ್ತಿದ್ದನಂತೆ. ಅದಾದ ನಂತರ ಆತ ಕಣ್ಮರೆಯಾಗಿದ್ದು, ಇಲ್ಲಿನ ಪರಸಪ್ಪ ಮನೆತನದವರು ಇದೇ ಜಾಗದಲ್ಲಿ ಕೆಲಸ ಮಾಡುವಾಗ ದೇವರ ಕಲ್ಲು ಗೋಚರವಾಗಿತ್ತಂತೆ. ಬಳಿಕ ಕನಸ್ಸಿನಲ್ಲಿ ದೇವರು ಬಂದು ತನಗೆ ಕೋಳಿ, ಸಾರಾಯಿ ನೈವೇದ್ಯ ಮಾಡು ಅಂತಾ ಕೇಳಿಕೊಂಡಿದ್ದರಿಂದ ದೇವಸ್ಥಾನವನ್ನು ಕಟ್ಟಿ ಜಾತ್ರೆಯನ್ನು ನಡೆಸಿಕೊಂಡು ಬರಲಾಗುತ್ತಿದೆ ಎನ್ನಲಾಗಿದೆ. ಇನ್ನೊಂದು ಕಥೆಯ ಪ್ರಕಾರ,‌ ಈಸ್ಟ್ ಇಂಡಿಯಾ ಕಂಪೆನಿ ಆಳ್ವಿಕೆ ಸಮಯದಲ್ಲಿ ಕಾಪ್ರಿ ಎಂಬ ವಿದೇಶಿ ವ್ಯಕ್ತಿ ಗುಲಾಮನಾಗಿ ಭಾರತಕ್ಕೆ ಬಂದಿದ್ದನಂತೆ. ಆತ ಬ್ರಿಟಿಷರಿಂದ ಎಲ್ಲಾ ರೀತಿಯ ಕಷ್ಟ, ತೊಂದರೆಗಳನ್ನು ಸಹಿಸಿ ಅವುಗಳನ್ನು ನಿವಾರಿಸಿ ಗೆದ್ದು ಜೀವಿಸಿದನು.
    ಕಾರವಾರ ಭಾಗದಲ್ಲಿ ಬಡವರಿಗೆ ಸಹಾಯ ಮಾಡುತ್ತಾ ಅವರ ಸಂಕಷ್ಟ ನಿವಾರಿಸುತ್ತಿದ್ದನಂತೆ. ಈತನಿಗೆ ಬೀಡಿ, ಸಿಗರೇಟು, ಕೋಳಿ, ಕುರಿ ಮಾಂಸ ಬಲು ಪ್ರೀತಿ. ಹೀಗಾಗಿ ಈತನ ಬಳಿ ಸಂಕಷ್ಟ ತೋಡಿಕೊಂಡು ಬರುವವರು ಈತನಿಗೆ ಕಾಣಿಕೆಯಾಗಿ ಇವುಗಳನ್ನು ನೀಡುತಿದ್ದರು. ಆತ ಕ್ರೈಸ್ತ ಧರ್ಮದವನಾದರೂ ಕೂಡ ಎಲ್ಲಾ ಧರ್ಮವನ್ನು ಅನುಸರಿಸುತ್ತಿದ್ದನಂತೆ. ಅವನಲ್ಲಿ ದೈವೀ ಶಕ್ತಿಯಿತ್ತು ಎನ್ನುವ ನಂಬಿಕೆಯಿತ್ತು.ಕಾಪ್ರಿ ಸತ್ತ ನಂತರ ಅವನ ಬೂದಿಯನ್ನು ಕಾಳಿ ನದಿಯಲ್ಲಿ ವಿಸರ್ಜಿಸಲಾಯಿತಂತೆ. ಕಾಪ್ರಿ ತೀರಿಹೋದ 15 ದಿನಗಳ ನಂತರ ಆತನನ್ನು ಹೋಲುವ ಒಂದು ಮೂರ್ತಿ ಅಲ್ಲಿ ದೊರಕಿತಂತೆ.ಹಾಗಾಗಿ ಭಕ್ತರು ಅಲ್ಲಿ ಕಾಪ್ರಿ ದೇವಾಲಯ ಕಟ್ಟಿಸಿದರಂತೆ. ಕಾಪ್ರಿಗೆ ತಂಬಾಕು ಮತ್ತು ಮದ್ಯ ಸೇವನೆಯ ಚಟವಿತ್ತಂತೆ.ಹಾಗಾಗಿ ಮದ್ಯ, ಸಿಗರೇಟುಗಳನ್ನು ದೇವರಿಗೆ ಅರ್ಪಿಸುತ್ತಾರೆ. ಹೆಂಡ, ಸಾರಾಯಿ, ಬೀಡಿ, ಸಿಗರೇಟನ್ನೇ ಭಕ್ತರಿಂದ ಪ್ರೀತಿಯ ರೂಪದಲ್ಲಿ ಪಡೆಯುವ ಈ ದೇವರು ಜನರ ಕಷ್ಟ ಕಾರ್ಪಣ್ಯಗಳನ್ನು ಕಳೆದು ಇಷ್ಟಾರ್ಥ ನೆರವೇರಿಸುತ್ತಾನೆ ಭಕ್ತರ ಅಚಲ ನಂಬಿಕೆಯಾಗಿದೆ.

    Share Information
    Advertisement
    Click to comment

    You must be logged in to post a comment Login

    Leave a Reply