Connect with us

LATEST NEWS

ಇಂದು ಯಕ್ಷಗಾನ ನಾಳೆ ಕಂಬಳ, ಭೂತಕೋಲ ಆಚರಣೆಗಳನ್ನು ಕಾಂಗ್ರೆಸ್ ನಾಯಕರು ದೂರು ಕೊಟ್ಟರೆಂದು ನಿಲ್ಲಿಸುತ್ತೀರಾ – ಶಾಸಕ ಸುನಿಲ್ ಕುಮಾರ್ ಪ್ರಶ್ನೆ

ಕಾರ್ಕಳ ಜನವರಿ 16: ಧ್ವನಿವರ್ಧಕಗಳನ್ನು ಬಳಸಲು ಅನುಮತಿ ಪಡೆಯದ ಹಿನ್ನಲೆ ಯಕ್ಷಗಾನವನ್ನು ನಿಲ್ಲಿಸಲು ಮುಂದಾಗಿದ್ದ ಪೊಲೀಸರ ಕ್ರಮಕ್ಕೆ ಇದೀಗ ವ್ಯಾಪಕ ಆಕ್ರೋಶ ವ್ಯಕ್ತವಾಗಿದ್ದು, ಪೊಲೀಸರ ಕ್ರಮವನ್ನು ಕಾರ್ಕಳ ಶಾಸಕ ಸುನಿಲ್ ಕುಮಾರ್ ಖಂಡಿಸಿದ್ದಾರೆ.


ಈ ಕುರಿತಂತೆ ಟ್ವೀಟ್ ಮಾಡಿರುವ ಶಾಸಕ ಸುನಿಲ್ ಕುಮಾರ್ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಅವರೇ ಯಕ್ಷಗಾನದಿಂದ ಕಾನೂನು ಸುವ್ಯವಸ್ಥೆ ಹದೆಗೆಡುತ್ತದೆಯೇ ? ಅಥವಾ ಯಕ್ಷಗಾನದಿಂದ ಯಾರ ಮನಸಿಗಾದರೂ ನೋವಾಗುತ್ತದೆಯೇ ? ನೀವೊಬ್ಬರು ಸಭ್ಯ ಹಾಗೂ ಸುಸಂಸ್ಕೃತ ವ್ಯಕ್ತಿ ಎಂದು ನಾವೆಲ್ಲ ಭಾವಿಸಿದ್ದೇ ಈಗ ಸುಳ್ಳಾಗಿದೆ. ನಿಮ್ಮ ಅವಧಿಯಲ್ಲಿ ಪೊಲೀಸ್ ಇಲಾಖೆ ಎಂಬುದು ಅಭಿವ್ಯಕ್ತಿ ಸ್ವಾತಂತ್ರ್ಯದ ದಮನಕ್ಕೆ ಪದೇ ಪದೇ ಬಳಕೆಯಾಗುತ್ತಿದೆ ಎಂಬುದು ಆತ್ಯಂತ ಬೇಸರದ ಸಂಗತಿಯಾಗಿದ್ದು, ವಾಕ್ ಸ್ವಾತಂತ್ರ್ಯ, ಸಂವಿಧಾನ ಇತ್ಯಾದಿ ವಿಚಾರಗಳು ನಿಮಗೆ ಭಾಷಣದ ಸರಕಾಗಿ ಬಿಟ್ಟಿದೆ.


ಇಲ್ಲವಾದರೆ ಕಾರ್ಕಳ ತಾಲೂಕಿನ ಶಿರ್ಲಾಲು ಗ್ರಾಮದ ಮುಂಡ್ಲಿಯಲ್ಲಿ ನಿನ್ನೆ ನಡೆಯುತ್ತಿದ್ದ ಯಕ್ಷಗಾನ ಪ್ರದರ್ಶನವನ್ನು ಸ್ಥಳೀಯ ಕಾಂಗ್ರೆಸ್ ಮುಖಂಡನ ದೂರಿನ ಮೇರೆಗೆ ಸ್ಥಗಿತಗೊಳಿಸಲು ಹೊರಟಿದ್ದು ಎಷ್ಟು ಸರಿ ? ಯಕ್ಷಗಾನ ಕರಾವಳಿ ಜಿಲ್ಲೆಗಳ ಪ್ರಾರಂಪರಿಕ ಕಲೆಯಾಗಿದ್ದು ರಾತ್ರಿ ಪೂರ್ತಿ ಪ್ರದರ್ಶನಗೊಳ್ಳುತ್ತದೆ. ಆದರೆ ಕಾಂಗ್ರೆಸ್ ನಾಯಕ ದೂರು ಕೊಟ್ಟ ಎಂಬ ಕಾರಣಕ್ಕೆ ಎಸ್ಪಿಯೇ ಯಕ್ಷಗಾನ ನಿಲ್ಲಿಸಲು ಪೊಲೀಸರನ್ನು ಕಳುಹಿಸಿದ್ದು ಎಷ್ಟು ಸರಿ ?ಸಾಲದಕ್ಕೆ ಮರುದಿನ ಯಕ್ಷಗಾನ ಆಯೋಜಕರ ಮೇಲೆ ಮೊಕದ್ದಮೆ ದಾಖಲಿಸುವ ಮೂಲಕ ನಿಮ್ಮ ಪೊಲೀಸರು ಎಫ್ ಐಆರ್ ಸರ್ಕಾರ ನಡೆಸಲು ಹೊರಟಿದ್ದಾರಾ ?


ಇಂದು ಯಕ್ಷಗಾನ. ನಾಳೆ ಕಂಬಳ, ಭೂತಕೋಲ ಇತ್ಯಾದಿ ಧಾರ್ಮಿಕ ಆಚರಣೆಗಳನ್ನು ಕಾಂಗ್ರೆಸ್ ನಾಯಕರು ದೂರು ಕೊಟ್ಟರೆಂದು ನಿಲ್ಲಿಸುತ್ತೀರಾ ? ರಾಜ್ಯದ ಮುಖ್ಯಮಂತ್ರಿಯಾಗಬೇಕೆಂಬ ಕನಸು ಕಾಣುತ್ತಿರುವ ನಿಮಗೆ ನಾಡಿನ ಸಾಂಸ್ಕೃತಿಕ ಆಯಾಮದ ಬಗ್ಗೆ ಕಲ್ಫನೆ ಇಲ್ಲವೋ ಅಥವಾ ಇಲಾಖೆಯ ಮೇಲೆ ಹಿಡಿತವಿಲ್ಲವೋ ? ಎಂದು ಟ್ವಿಟ್ ಮಾಡಿದ್ದಾರೆ.

ಕೋಲ, ಯಕ್ಷಗಾನ, ನಾಟಕ ಕಂಬಳಗಳು ರಾತ್ರಿ ಹೊತ್ತು ನಡೆಯುತ್ತವೇ, ಪಾರಂಪರಿಕವಾಗಿ ನಡೆಯುವ ಈ ಕಾರ್ಯಕ್ರಮಗಳನ್ನು ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆ ತಡೆಯುವುದು ಸರಿಯಲ್ಲ, ಮುಂದೆ ಇಂತಹ ಘಟನೆಗಳು ನಡೆಯದಂತೆ ಎಚ್ಚರಿಕೆ ವಹಿಸಬೇಕು ಎಂದು ತಿಳಿಸಿದ್ದಾರೆ.

Share Information
Continue Reading
Advertisement
Click to comment

Leave a Reply

Your email address will not be published. Required fields are marked *