Connect with us

FILM

ಬಹುಭಾಷಾ ಹಿರಿಯ ನಟಿ ರಾಧಾ ವಿಧಿವಶ

ಬೆಂಗಳೂರು, ಸೆಪ್ಟೆಂಬರ್ 10 : ಬಹುಭಾಷಾ ಹಿರಿಯ ನಟಿ ಬಿ.ವಿ. ರಾಧಾ ಅವರು ಇಂದು ವಿಧಿವಶರಾಗಿದ್ದಾರೆ. 69 ವರ್ಷ ವಯಸ್ಸಿನ ರಾಧಾ ಅವರು ಇಂದು ಬೆಂಗಳೂರಿನಲ್ಲಿ ಹೃದಯಘಾತದಿಂದ ನಿಧನರಾದರು. ಬೆಳಗ್ಗಿನ ಜಾವಾ ಸುಮಾರು ನಾಲ್ಕು ಗಂಟೆಯ ವೇಳೆಗೆ ರಾಧಾ ಅವರಿಗೆ ತೀವ್ರ ಹೃದಯಾಘಾತವಾಗಿದ್ದು ಕೂಡಲೇ ಸ್ಥಳೀಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ಚಿಕಿತ್ಸೆಗೆ ಸ್ಪಂದಿಸದೆ ಕೊನೆಯುಸಿರೆಳೆದಿದ್ದಾರೆ.

ಮೂಲತ: ರಂಗಭೂಮಿಯಿಂದ ಬೆಳ್ಳಿತೆರೆಗೆ ಬಂದ ರಾಧಾ ಅವರು ರಂಗಭೂಮಿ, ಬೆಳ್ಳಿತೆರೆ ಮತ್ತು ಕಿರುತೆರೆಯಲ್ಲಿ ಜನಪ್ರಿಯರಾಗಿದ್ದರು.

ಕನ್ನಡ, ತಮಿಳು, ತೆಲುಗು, ಮಲಯಾಳಂ ಮತ್ತು ತುಳು ಭಾಷೆಯ 200 ಕ್ಕೂ ಅಧಿಕ ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ನಿರ್ದೇಶಕ ಕೆ.ಎಸ್.ಎಲ್.ಸ್ವಾಮಿ ಅವರನ್ನು ಮದುವೆಯಾಗಿದ್ದ ರಾಧಾ ಅವರಿಗೆ ಒರ್ವ ಪುತ್ರಿ ಇದ್ದು, ಪತಿ ಎರಡು ವರ್ಷಗಳ ಹಿಂದೆ ವಿಧಿವಶರಾಗಿದ್ದರು.

ಆರುವತ್ತರ ದಶಕದಲ್ಲಿ ತೆರೆಗೆ ಬಂದ ಡಾ. ರಾಜ್ ಕುಮಾರ್ ಮತ್ತು ಸಾಹುಕಾರ್ ಜಾನಕಿ ಮುಖ್ಯಭೂಮಿಕೆಯಲ್ಲಿದ್ದ ನವಕೋಟಿ ನಾರಾಯಣ ಚಿತ್ರದಲ್ಲಿ ಸಣ್ಣ ಪಾತ್ರದ ಮೂಲಕ ಕನ್ನಡದ ಬೆಳ್ಳಿತೆರೆಗೆ ಪಾದಾರ್ಪಣೆ ಮಾಡಿದ್ದರು ರಾಧಾ.

ಕೆ.ಎಸ್.ಎಲ್.ಸ್ವಾಮಿ ಅವರ ನಿರ್ದೇಶನದ ಮೊದಲ ಚಿತ್ರ ತೂಗುದೀಪ ದಲ್ಲಿ ನರಸಿಂಹರಾಜು ಅವರೊಂದಿಗಿನ ಹಾಸ್ಯ ಪಾತ್ರದ ಮೂಲಕ ಜನಪ್ರಿಯತೆ ಪಡೆದಿದ್ದರು. ಯಾವ ಜನ್ಮದ ಮೈತ್ರಿ, ದೇವರು ಕೊಟ್ಟ ತಂಗಿ ಮತ್ತು ಮಿಥಿಲೆಯ ಸೀತೆಯರು ಮುಂತಾದ ಚಿತ್ರಗಳಲ್ಲಿ ಅಪಾರ ಚಿತ್ರಪ್ರೇಮಿಗಳ ಮೆಚ್ಚುಗೆಗೆ ಪಾತ್ರರಾಗಿದ್ದರು. ಒಬ್ಬ ನಟಿ ಮಾಡಬಹುದಾದ ಎಲ್ಲ ವಿಧದ ಪಾತ್ರಗಳನ್ನು ಸಮರ್ಥವಾಗಿ ನಿರ್ವಹಿಸಿ ಅಪಾರ ಜನಮನ್ನಣೆ ಪಡೆದಿದ್ದರು.

ಚಿತ್ರ ನಿರ್ಮಾಪಕಿಯೂ ಆಗಿ ರಾಧಾ ಅವರು ಹೊರ ಹೊಮ್ಮಿದರು. ಜಂಬೂಸವಾರಿ ಮತ್ತು ಹರಕೆಯ ಕುರಿ ಗಳಂತಹ ಸದಭಿರುಚಿಯ ಚಿತ್ರಗಳನ್ನು ನಿರ್ಮಿಸಿ ರಾಷ್ಟ್ರಪ್ರಶಸ್ತಿಗೆ ಭಾಜನರಾಗಿದ್ದರು.

 

 

Facebook Comments

comments