ಕೊರೊನಾಗೆ ಕಲಬುರಗಿಯಲ್ಲಿ ಮತ್ತೊಂದು ಬಲಿ

ಕಲಬುರಗಿ ಎಪ್ರಿಲ್ 8: ಕೊರೊನಾ ಮಹಾಮಾರಿ ತನ್ನ ಮರಣ ಮೃದಂಗವನ್ನು ಮುಂದುವರೆಸಿದೆ. ಕಟ್ಟು ನಿಟ್ಟಿ ಲಾಕ್ ಡೌನ್ ನಿಂದಾಗಿ ಕರ್ನಾಟಕದಲ್ಲಿ ಕೊರೊನಾ ಸಾವಿನ ಸಂಖ್ಯೆ ಕಡಿಮೆಯಾಗಿತ್ತು, ಆದರೆ ಮತ್ತೆ ಇಂದು ರಾಜ್ಯದಲ್ಲಿ ಕೋವಿಡ್-19 ಸೋಂಕಿಗೆ ಮತ್ತೊಂದು ಬಲಿಯಾಗಿದ್ದು, ಕಲಬುರಗಿಯ 65 ವರ್ಷದ ಸೋಂಕಿತ ವ್ಯಕ್ತಿಯೋರ್ವರು ಬಲಿಯಾಗಿದ್ದಾರೆ.

ರಾಜ್ಯದಲ್ಲಿ ಸೋಂಕಿತರ ಸಂಖ್ಯೆಯಲ್ಲಿ ಇಂದು ಆರು ಮಂದಿ ಹೆಚ್ಚಾಗಿದ್ದು, ರಾಜ್ಯದ ಸೋಕಿತರ ಸಂಖ್ಯೆ 181ಕ್ಕೇರಿದೆ. ಈ ಹೊಸ ಆರು ಸೋಂಕಿತರ ಪೈಕಿ ಇಬ್ಬರಿಗೆ ದೆಹಲಿಯ ಪ್ರಯಾಣದ ನಂಟಿದೆ.

176ನೇ ಪ್ರಕರಣದ ಸೋಂಕಿತೆ 26 ವರ್ಷದ ಉತ್ತರ ಕನ್ನಡದ ಮಹಿಳೆ. ಈಕೆಯ ಪತಿ ದುಬೈನಿಂದ ಆಗಮಿಸಿದ್ದರು ಎನ್ನಲಾಗಿದೆ. ಕಲಬುರಗಿಯ ಇಬ್ಬರಿಗೆ ಸೋಂಕು ತಾಗಿದ್ದು, 175ನೇ ಪ್ರಕರಣದ ವ್ಯಕ್ತಿಯ ತಾಯಿಗೆ ಸೋಂಕು ತಾಗಿದೆ.

134 ಮತ್ತು 138ನೇ ಪ್ರಕರಣದ ಸೋಂಕಿತರೊಂದಿಗೆ ಸಂಪರ್ಕ ಹೊಂದಿದ್ದ ಮಂಡ್ಯದ 35 ವರ್ಷದ ವ್ಯಕ್ತಿಗೆ ಸೋಂಕು ತಗುಲಿದೆ. ರಾಜ್ಯದಲ್ಲಿ ಇದುವರೆಗೆ ಒಟ್ಟು 181 ಜನರಿಗೆ ಸೋಂಕು ತಾಗಿದ್ದು, ಐವರು ಮೃತಪಟ್ಟಿದ್ದಾರೆ. 28 ಸೋಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.