ಅಕ್ರಮ ಕಳ್ಳಬಟ್ಟಿ‌ ತಯಾರಿಕೆ ಅಡ್ಡೆಗೆ ಪೊಲೀಸ್ ದಾಳಿ ಇಬ್ಬರ ಬಂಧನ

ಬಂಟ್ವಾಳ : ಅಕ್ರಮ ಕಳ್ಳಬಟ್ಟಿ ತಯಾರಿಕೆ ಮಾಡುತ್ತಿದ್ದಾರೆ ಎಂಬ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿ ಇಬ್ಬರು ಆರೋಪಿಗಳನ್ನು ಬಂಧಿಸಿದ ಘಟನೆ ಬಂಟ್ವಾಳ ನಗರ ಠಾಣಾ ವ್ಯಾಪ್ತಿಯ ಜಕ್ರಿಬೆಟ್ಟು ಎಂಬಲ್ಲಿ ನಡೆದಿದೆ. ಬಂಧಿತರನ್ನು ಅಗ್ರಾರ್ ಕೊಡಿ ನಿವಾಸಿಗಳಾದ ಅಲ್ಸ್ಟರ್ ಪಿಂಟೋ ಮತ್ತು ರೋಶನ್ ರ್ಯಾನಿ ಪೆರ್ನಾಂಡಿಸ್ ಎಂದು ಗುರುತಿಸಲಾಗಿದೆ.


ಆರೋಪಿಗಳು ಲಾಕ್ ಡೌನ್ ಹಿನ್ನಲೆ ರಾಜ್ಯದಾದ್ಯಂತ ಮದ್ಯ ನಿಷೇಧವಾಗಿರುವ ಲಾಭ ಪಡೆಯಲು ಅಕ್ರಮ ಕಳ್ಳಬಟ್ಟಿ ಸಾರಾಯಿ ಅಗ್ರಾರ್ ಕೋಡಿ ಯ ಮನೆಯೊಂದರಲ್ಲಿ ತಯಾರಿಸುತ್ತಿದ್ದರು. ಖಚಿತ ಮಾಹಿತಿಯ ಮೇರೆಗೆ ದಾಳಿ‌ ನಡೆಸಿರುವ ಬಂಟ್ವಾಳ ವೃತ್ತ ನಿರೀಕ್ಷಕ ಟಿ.ಡಿ.ನಾಗರಾಜ್ ನೇತ್ರತ್ವದ ಅಪರಾಧ ಪತ್ತೆದಳ ತಂಡ ಇಬ್ಬರನ್ನು ಬಂಧಿಸಿ, ಸಾರಾಯಿ ತಯಾರಿಸಲು ಬಳಸಿರುವ ಸಾಮಾಗ್ರಿಗಳು, ಸ್ಕೂಟರ್ ಸಮೇತ 20 ಲೀಟರ್ ಕಳ್ಳಬಟ್ಟಿ ಸಾರಾಯಿ ಯನ್ನು ವಶಕ್ಕೆ ಪಡೆದಿದ್ದಾರೆ. ಘಟನೆ ಕುರಿತಂತೆ ಬಂಟ್ವಾಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.