Connect with us

    TECHNOLOGY

    ಮನೆ ಸ್ಚಚ್ಚ ಮಾಡುವುದು ನೋ ಟೆನ್ಶನ್, ಬಂದಿದೆ ಐರೋಬೋಟ್ ಬ್ರಾವಾ ಜೆಟ್ 240..!!

    ಕೆಲವು ತಿಂಗಳುಗಳ  ಹಿಂದೆ ಈ ಅಂಕಣದಲ್ಲಿ ಒಂದು ಬುದ್ಧಿವಂತ  ನಿರ್ವಾತ ಪೊರಕೆ (vacuum cleaner)  ಬಗ್ಗೆ ಬರೆಯಲಾಗಿತ್ತು. ಅದರ ಬಗ್ಗೆ ಬರೆಯುತ್ತ ಈ ರೀತಿ ಬರೆಯಲಾಗಿತ್ತು – ಗಂಡ ಹೆಂಡತಿ ಇಬ್ಬರೂ ದುಡಿಯುವವರಾದರೆ ಮನೆ ಸ್ವಚ್ಛ ಮಾ಼ಡಲು ಸಮಯ  ದೊರೆಯುವುದಿಲ್ಲ, ಇನ್ನು ಕೆಲವರಿಗೆ ದೇಹವನ್ನು ಬಗ್ಗಿಸಿ ಕಸ ಹೊಡೆಯಲು ಆಗುವುದಿಲ್ಲ.

     ವಾಕ್ಯೂಮ್ ಕ್ಲೀನರ್ ಅನ್ನು ಹಿಡಿದುಕೊಂಡು ಮನೆ ಪೂರ್ತಿ ನಡೆದಾಡಲು ಸಮಯವೇ ಇಲ್ಲದಿದ್ದರೆ ಏನು ಮಾಡಬೇಕು?  ಇಂತಹವರಿಗಾಗಿ  ಒಂದು ಬುದ್ಧಿವಂತ ಹೀರು ಪೊರಕೆ ಅಥವಾ ನಿರ್ವಾತ ಪೊರಕೆ   ಬಂದಿದೆ. ಅದು ಕಸ ಹೀರುತ್ತದೆ ಮಾತ್ರ. ನೆಲ ಒರೆಸಬೇಕಾದರೆ ಏನು ಮಾಡಬೇಕು? ಅದಕ್ಕೂ ಬಂದಿದೆ ಒಂದು ಬುದ್ಧಿವಂತ ಗ್ಯಾಜೆಟ್. ಅದುವೇ ಐರೋಬೋಟ್ ಬ್ರಾವಾ ಜೆಟ್ 240 ( iRobot Braava jet 240).   ಇದು ನಮ್ಮ ಈ ವಾರದ ಗ್ಯಾಜೆಟ್.

    ಗುಣವೈಶಿಷ್ಟ್ಯಗಳು

    ಚೌಕಾಕಾರದಲ್ಲಿದೆ, 17.8 x 17.8 x 8.4 ಸೆ.ಮೀ. ಗಾತ್ರ 1.25 ಕಿ.ಗ್ರಾಂ. ತೂಕ,1950mAh ಶಕ್ತಿಯ  ರಿಚಾರ್ಜೆಬಲ್  ಬ್ಯಾಟರಿ ಚಾರ್ಜಿಂಗ್  ಸಮಯ ಅಂದಾಜು 2 ಗಂಟೆ, ಒಮ್ಮೆ ಚಾರ್ಜ್‌ ಆದರೆ ಸುಮಾರು 200 ಚದರ ಅಡಿ ಒರೆಸುತ್ತದೆ. 2.4GHz ವೈಫೈ, ಕ್ಯಾಮೆರಾ, 7 ಪ್ಯಾಡ್‌ಗಳು, ಇತ್ಯಾದಿ.  ಬೆಲೆ ರೂ.19900.

    ಮೇಲ್ನೋಟಕ್ಕೆ ಇದು ನೆಲ ಒರೆಸುವ  ಯಂತ್ರ ಎಂದು ಅನ್ನಿಸುವುದೇ ಇಲ್ಲ. ಬಿಳಿಯ ಬಣ್ಣದಲ್ಲಿದೆ. ಚೌಕಾಕಾರದಲ್ಲಿದೆ. ಮೇಲ್ಭಾಗದಲ್ಲಿ ಮಧ್ಯದಲ್ಲಿ ಒಂದು ವೃತ್ತಾಕಾರದ ಬಟನ್ ಇದೆ. ಇದು ಆನ್/ಆಫ್ ಬಟನ್ ಆಗಿಯೂ,  ಒರೆಸುವಿಕೆಯನ್ನು ಪ್ರಾರಂಭಿಸುವ  ಮತ್ತು  ನಿಲ್ಲಿಸುವ ಬಟನ್ ಆಗಿಯೂ ಕೆಲಸ ಮಾಡುತ್ತದೆ. ಮೇಲ್ಭಾಗದ ಮೂಲೆಯಲ್ಲಿ  ನೀರು ತುಂಬಿಸುವ ತೊಟ್ಟಿಯ ಮುಚ್ಚಳವಿದೆ. ಇದನ್ನು ತೆರೆದು ನೀರು ತುಂಬಿಸಬೇಕು. ಮುಂಭಾಗದಲ್ಲಿ  ಮಧ್ಯಭಾಗದಲ್ಲಿ ಒಂದು ಚಿಕ್ಕ ಕಿಂಡಿಯಿದೆ. ಈ ಕಿಂಡಿಯ ಮೂಲಕ ನೀರು ಸಿಂಪಡಿಸಲಾಗುತ್ತದೆ. ಹಿಂಭಾಗದಲ್ಲಿ ರಿಚಾರ್ಜೆಬಲ್  ಬ್ಯಾಟರಿ ಇದೆ. ಇದನ್ನು ತೆಗೆದು ಅವರೇ ನೀಡಿರುವ ಚಾರ್ಜರ್ ನಲ್ಲಿ ಕುಳ್ಳಿರಿಸಿ ಚಾರ್ಜ್‌ ಮಾಡಬೇಕು. ಕೆಳಭಾಗದಲ್ಲಿ ನೆಲ ಒರೆಸುವ ಪ್ಯಾಡ್ ಜೋಡಿಸುವ ವ್ಯವಸ್ಥೆ ಇದೆ. ಮೂರು ನಮೂನೆಯ ಪ್ಯಾಡ್ ಗಳಿವೆ. ಕೆಳಭಾಗದಲ್ಲಿ  ಎರಡು ಚಕ್ರಗಳಿವೆ.

    ಇದರ ಬ್ಯಾಟರಿಯನ್ನು ತೆಗೆದು ಅವರದೇ ಚಾರ್ಜರಿನಲ್ಲಿಟ್ಟು ಚಾರ್ಜ್ ಮಾಡಬೇಕು. ಕ್ಲೀನ್ ಎಂದು ಬರೆದ ಬಟನ್ ಅನ್ನು ಒತ್ತಿದರೆ ಇದು ಆನ್ ಆಗುತ್ತದೆ. ಇದನ್ನೇ ಮತ್ತೊಮ್ಮೆ ಒತ್ತಿದರೆ ಆಗ ಇದು ಕೊಠಡಿಯನ್ನು ಒರೆಸಲು ಪ್ರಾರಂಭಿಸುತ್ತದೆ. ಇಡಿ ಕೋಣೆಯನ್ನು ಸುತ್ತಿ ಸುತ್ತಿ ಒರೆಸುತ್ತದೆ. ಕೋಣೆಯಲ್ಲಿ  ಇರುವ ಎಲ್ಲ ಅಡೆತಡೆಗಳನ್ನು ನಿವಾರಿಸಿಕೊಂಡು ಅವುಗಳ ಪಕ್ಕದಲ್ಲಿ ಹೋಗಿ, ಕೆಳಗೆ ನುಸುಳಿ ಇದು ಕೋಣೆಯನ್ನು ಒರೆಸುತ್ತದೆ. ಕುರ್ಚಿ, ಮಂಚ, ಇನ್ನಿತರ ಅಡೆತಡೆಗಳನ್ನು ಅದು ಅರ್ಥ ಮಾಡಿಕೊಂಡು ಅವುಗಳನ್ನು ನಿವಾರಿಸಿಕೊಂಡು ಚಲಿಸುತ್ತದೆ.  ಇಡಿಯ ಕೋಣೆಯನ್ನು ಒರೆಸಿದ ನಂತರ ಇದು ತಾನಾಗಿಯೇ ನಿಲ್ಲುತ್ತದೆ.

    ಕೋಣೆಯ ಬಾಗಿಲು ತೆರೆದುಕೊಂಡಿದ್ದರೆ ಇದು ಕೋಣೆಯಿಂದ ಕೋಣೆಗೆ ಹೋಗಿ ಇಡಿಯ ಮನೆಯನ್ನು ಒರೆಸಲು ಪ್ರಯತ್ನಿಸುತ್ತದೆ.  ಆದರೆ ಒಂದು ಸಲದ ಚಾರ್ಜಿನಲ್ಲಿ ಸುಮಾರು 200 ಚದರ ಅಡಿ ಮಾತ್ರ ಒರೆಸಬಲ್ಲದಾದ ಕಾರಣ  ದೊಡ್ಡ ಮನೆಯಾಗಿದ್ದರೆ ಅರ್ಧದಲ್ಲಿ ನಿಲ್ಲುತ್ತದೆ.  ಕೋಣೆಯಿಂದ ಹೊರಗೆ ಹೋಗಬಾರದಿದ್ದಲ್ಲಿ ಒಂದು ಮಿಥ್ಯಾ ಗೋಡೆಯನ್ನು ನಿರ್ಮಿಸಿ ಅದನ್ನು ದಾಟದಂತೆ ಆಯ್ಕೆ ಮಾಡಿಕೊಳ್ಳಬಹುದು. ಅದಕ್ಕಾಗಿ ಯಾವ ಸ್ಥಳದಿಂದ ಅದು ಹೊರಕ್ಕೆ ಹೋಗಬಾರದೋ ಆ ಸ್ಥಳದಲ್ಲಿ ಕೋಣೆಯ ಒಳಗೆ ಅದರ ಮುಖ ಬರುವಂತೆ ಇಟ್ಟು ಕ್ಲೀನ್ ಎಂದು ಬರೆದ ಬಟನ್ಅನ್ನು ಒತ್ತಿ ಹಿಡಿದುಕೊಳ್ಳಬೇಕು. ಆಗ ನೀಲಿ ಬೆಳಕು ಬಂದು ಮಿಥ್ಯಾ ಗೋಡೆ ನಿರ್ಮಾಣವಾಗಿರುವುದನ್ನು ಸೂಚಿಸುತ್ತದೆ. ನಂತರ ಮತ್ತೊಮ್ಮೆ ಕ್ಲೀನ್ ಎಂದು ಬರೆದ ಬಟನ್ ಅನ್ನು ಒತ್ತಿ ಒರೆಸುವಿಕೆಯನ್ನು  ಪ್ರಾರಂಭಿಸಿದರೆ ಅದು ಈ ಮಿಥ್ಯಾ ಗೋಡೆಯನ್ನು ದಾಟಿ ಹೋಗುವುದಿಲ್ಲ.

    ಈ ಯಂತ್ರದ ಜೊತೆ ಮೂರು ನಮೂನೆಯ ಒಟ್ಟು ಆರು ಪ್ಯಾಡ್ ಗಳನ್ನು ನೀಡಿದ್ದಾರೆ. ಬೇರೆ ಬೇರೆ ಸಂದರ್ಭಗಳಿಗೆ ಅನುಗುಣವಾಗಿ ಈ ಪ್ಯಾಡ್ ಗಳನ್ನು ಬಳಸಬೇಕು. ಉದಾ :- ಹೆಚ್ಚು ಕೊಳೆಯಿರುವ ಸ್ಥಳ, ಕಡಿಮೆ ಕೊಳೆಯಿರುವ ನೆಲ,ಒಣ ನೆಲ, ಇತ್ಯಾದಿ. ಜೋಡಿಸಿದ ಪ್ಯಾಡ್ ಅನ್ನು ಹೊಂದಿಕೊಂಡು ಅದು ನೇರವಾಗಿ ಇಲ್ಲವೇ ಎಡಬಲ ತಿರುಗಿಕೊಂಡು ಮುಂದೆ ಹೋಗುತ್ತದೆ. ಈ ಪ್ಯಾಡ್ ಗಳು ಸಂಪೂರ್ಣ ಕೊಳೆಯಾದಾಗ ಅವನ್ನು ಎಸೆದು ಹೊಸದನ್ನು ಜೋಡಿಸಬೇಕು. 10 ಪ್ಯಾಡ್ ಗಳಿಗೆ ಸುಮಾರು  ರೂ.700 ಬೆಲೆಯಿದೆ. ಈ ಪ್ಯಾಡ್ ಗಳಲ್ಲದೆ ಮತ್ತೆ ಮತ್ತೆ ತೊಳೆದು ಬಳಸಬಹುದಾದ ಒಂದು ಪ್ಯಾಡ್ ಕೂಡ ನೀಡಿದ್ದಾರೆ. ಈ ಪ್ಯಾಡ್ ಎಲ್ಲದಕ್ಕಿಂತ ಹೆಚ್ಚು ಉಪಯುಕ್ತ.

    ಈ ನೆಲ ಒರೆಸುವ ರೋಬಾಟ್ ಜೊತೆ ಬಳಸಲು ಸ್ಮಾರ್ಟ್ ಫೋನ್ ಕಿರುತಂತ್ರಾಂಶ  (ಆ್ಯಪ್) ಕೂಡ ಇದೆ. ಇದು ಅಂತಹ ವಿಶೇಷ ಕಿರುತಂತ್ರಾಂಶವೇನೂ ಅಲ್ಲ. ಅಂದರೆ ಇದನ್ನು ಬಳಸಿ ನೀವು ಮನೆಯಲ್ಲಿ  ಇಲ್ಲದಿದ್ದರೂ ನಿಗದಿತ ಸಮಯಕ್ಕೆ ಇದು ಕೋಣೆಯನ್ನು ಒರೆಸುವಂತೆ ಆಯ್ಕೆ ಮಾಡಿಕೊಳ್ಳಲು ಸಾಧ್ಯವಿಲ್ಲ.

    ನೆಲವನ್ನು ತಕ್ಕಮಟ್ಟಿಗೆ ಒರೆಸಿ ಸ್ವಚ್ಛ ಮಾಡುತ್ತದೆ. ಆದರೆ ಒಂದು ಸಲಕ್ಕೆ ಸಣ್ಣ ಕೋಣೆಯನ್ನು ಮಾತ್ರ ಒರೆಸಬಲ್ಲುದು. ಮತ್ತೆ ಪುನ: ಚಾರ್ಜ್ ಮಾಡಿ ಇನ್ನೊಂದು ಕೋಣೆಯನ್ನು ಒರೆಸಬೇಕು. ಇಷ್ಟು ಕೆಲಸ ಮಾಡಬಲ್ಲ ಈ ಯಂತ್ರಕ್ಕೆ ಬೆಲೆ ಸ್ವಲ್ಪ ಜಾಸ್ತಿಯೇ ಆಯಿತು ಎಂದು ನನ್ನ ಅಭಿಪ್ರಾಯ.

    ವಿಡಿಯೋಗಾಗಿ ಕ್ಲಿಕ್ ಮಾಡಿ..

    Share Information
    Advertisement
    Click to comment

    Leave a Reply

    Your email address will not be published. Required fields are marked *