Connect with us

    BANTWAL

    ಬಂಟ್ವಾಳದಲ್ಲೊಬ್ಬ ಗಣಿ ಧನಿ, ಅಧಿಕಾರಿಗಳ ಬಾಯಿ ಮುಚ್ಚಿಸಲು ಇವನಲ್ಲಿದೆ ಮನಿ

    ಬಂಟ್ವಾಳದಲ್ಲೊಬ್ಬ ಗಣಿ ಧನಿ, ಅಧಿಕಾರಿಗಳ ಬಾಯಿ ಮುಚ್ಚಿಸಲು ಇವನಲ್ಲಿದೆ ಮನಿ

    ಬಂಟ್ವಾಳ ಸೆಪ್ಟೆಂಬರ್ 25: ಅಕ್ರಮ ಕಲ್ಲು ಗಣಿಗಾರಿಕೆ ಹಾಗೂ ಮರಳು ಗಣಿಗಾರಿಕೆ ದಕ್ಷಿಣಕನ್ನಡ ಜಿಲ್ಲೆಯಾದ್ಯಂತ ರಾಜಾರೋಷವಾಗಿ ನಡೆಯುತ್ತಿದೆ. ಈ ಅಕ್ರಮಗಳನ್ನು ಪ್ರಶ್ನಿಸಿದವರಿಗೆ ಹಲ್ಲೆ, ಬೆದರಿಕೆಗಳು ಇಲ್ಲಿ ಸಾಮಾನ್ಯವಾಗಿ ಬಿಟ್ಟಿದೆ.

    ಜಿಲ್ಲೆಯ ಬಂಟ್ವಾಳ ತಾಲೂಕಿನ ಅಮ್ಟಾಡಿ ಗ್ರಾಮಪಂಚಾಯತ್ ವ್ಯಾಪ್ತಿಯಲ್ಲೂ ಒಂದು ಅಕ್ರಮ ಕಲ್ಲುಗಣಿಗಾರಿಕೆ ನಡೆಯುತ್ತಿದ್ದು, ಇದನ್ನು ಪ್ರಶ್ನಿಸಿದವರ ಮೇಲೆ ಕೊಲೆ ಬೆದರಿಕೆಗಳೂ ಬರುತ್ತಿದೆ.

    ಗಣಿಗಾರಿಕೆಗಾಗಿ ಸಿಡಿಸುವ ಸ್ಪೋಟಕದಿಂದಾಗಿ ಅಕ್ಕಪಕ್ಕದ ಮನೆಗಳೆಲ್ಲಾ ಕುಸಿದು ಬೀಳುವ ಸ್ಥಿತಿಯಲ್ಲಿದೆ. 2003 ರಿಂದ ಇತ್ತೀಚಿನ ವರೆಗೂ ಇಲ್ಲಿ ಅಕ್ರಮ ಕಲ್ಲು ಗಣಿಗಾರಿಕೆ ನಡೆಯುತ್ತಿದ್ದು, ಇದರ ವರದಿಗೆ ತೆರಳಿದ ಮಾದ್ಯಮ ವರದಿಗಾರರಿಗೂ ಬೆದರಿಸುವ ಪ್ರಯತ್ನಗಳು ಇದರ ಮಾಲಕನಿಂದ ನಡೆಯುತ್ತಿದೆ.ದಕ್ಷಿಣಕನ್ನಡ ಜಿಲ್ಲೆಯ ಉಸ್ತುವಾರಿ ಸಚಿವ ಹಾಗೂ ಅರಣ್ಯ ಸಚಿವರ ಮನೆಯ ಪಕ್ಕದಲ್ಲೇ ಇರುವ ಅಮ್ಟಾಡಿ ಗ್ರಾಮದ ಕಥೆಯಿದು. ಇಲ್ಲಿ ಸುಮಾರು ನಾಲ್ಕೈದು ವರ್ಷಗಳಿಂದ ಅಕ್ರಮ ಕಲ್ಲು ಗಣಿಗಾರಿಕೆ ನಡೆಯುತ್ತಿದೆ. ತನ್ನ ಸ್ವಂತ ಜಮೀನಿನಲ್ಲಿ ಗಣಿಗಾರಿಕೆಯನ್ನು ನಡೆಸುವುದನ್ನು ಬಿಟ್ಟು ಈ ಗಣಿ ಧನಿ ಪಕ್ಕದ ಅರಣ್ಯ ಜಮೀನನ್ನೂ ರಾಜಾರೋಷವಾಗಿ ಅಗೆದು ಕಲ್ಲು ಒಡೆಯುತ್ತಿದ್ದಾನೆ.

    ಇಲ್ಲಿ ಕಲ್ಲು ಒಡೆಯಲು ಸಿಡಿಸುವ ಸ್ಪೋಟಕದ ಶಬ್ದ ಪಕ್ಕದಲ್ಲೇ ಇರುವ ಅರಣ್ಯ ಸಚಿವ ರಮಾನಾಥ ರೈಗಳ ಮನೆಗೂ ಕೇಳಿಸುತ್ತದೆ. ಅಕ್ರಮ ಗಣಿಗಾರಿಕೆ ನಡೆಸುತ್ತಿದ್ದಾರೆ, ಇಲ್ಲಿ ಸಿಡಿಸುವ ಸ್ಪೋಟಕಗಳಿಂದಾಗಿ ಮನೆಯೆಲ್ಲಾ ಬೀಳುವ ಸ್ಥಿತಿಯಲ್ಲಿದೆ ಎಂದು ಸಚಿವರ ಗಮನಕ್ಕೆ ತಂದರೂ ಇಲ್ಲಿ ಊರಿನ ಜನರಿಗೆ ಯಾವುದೇ ಪ್ರಯೋಜನವಾಗಿಲ್ಲ.ಜೀವನ್ ನೊರೋನ್ಹಾ ಎನ್ನುವ ವ್ಯಕ್ತಿಯ ಹೆಸರಿನಲ್ಲಿ ಆತನ ತಂದೆ ಸಿಪ್ರಿಯನ್ ನೊರೋನ್ಹಾ ಇಲ್ಲಿ ಕಳೆದ 5 ವರ್ಷಗಳಿಂದ ಅಕ್ರಮವಾಗಿ ಗಣಿಗಾರಿಕೆ ನಡೆಸುತ್ತಿದ್ದಾರೆ.

    2008 ರಲ್ಲಿ ಜೀವನ್ ನೋರೋನ್ಹಾ ಹೆಸರಿನಲ್ಲಿ 35 ಸೆಂಟ್ಸ್ ಜಾಗದಲ್ಲಿ ಇಲ್ಲಿ ಕಲ್ಲು ಗಣಿಗಾರಿಕೆ ನಡೆದುಕೊಂಡು ಬರುತ್ತಿತ್ತು. ಇಲ್ಲಿ ಸಿಡಿಸುತ್ತಿದ್ದ ಸ್ಪೋಟಕಗಳ ತೀವೃತೆ ಹೆಚ್ಚಾಗಿ ಮನೆಗಳು ಅಲುಗಾಡಲು ಆರಂಭಿಸಿದಾಗ ಈ ಗಣಿಗಾರಿಕೆಯನ್ನು ಮುಚ್ಚಬೇಕೆಂದು ಗ್ರಾಮಸ್ಥರು ಸ್ಥಳೀಯ ಪಂಚಾಯತ್ ಹಾಗೂ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳಿಗೆ ಮನವಿಯನ್ನೂ ಮಾಡಿದ್ದರು. ಈ ನಡುವೆ ಗಣಿ ಧನಿ ತನ್ನ ಜಮೀನಿನ ಪಕ್ಕದಲ್ಲೇ ಇರುವ 1 ಎಕರೆ ಸರಕಾರಿ ಜಮೀನಿನಲ್ಲಿಯೂ ಗಣಿಗಾರಿಕೆಗೆ ಅವಕಾಶ ನೀಡಬೇಕೆಂದು ಗಣಿ ಮತ್ತು ಭೂ ವಿಜ್ಞಾನ ಇಲಾಖೆಗೆ ಮನವಿ ಮಾಡಿದ್ದರು.

    ಗಣಿಗಾರಿಕೆ ಪ್ರದೇಶ ಅರಣ್ಯ ಇಲಾಖೆಯ ವ್ಯಾಪ್ತಿ :

    ಅಕ್ರಮ ಗಣಿಗಾರಿಕೆಯ ಸ್ಥಳವು ಅರಣ್ಯ ಇಲಾಖೆಯ ವ್ಯಾಪ್ತಿಗೆ ಬರುವ ಹಿನ್ನಲೆಯಲ್ಲಿ ಅಲ್ಲಿ ಗಣಿಗಾರಿಕೆಗೆ ಅರಣ್ಯ ಇಲಾಖೆಯ ನಿರಪೇಕ್ಷಣ ಪತ್ರ ನೀಡದ ಹಿನ್ನಲೆಯಲ್ಲಿ 2013 ಕ್ಕೆ ಪರವಾನಿಗೆಯ ಗಡು ಮುಗಿದ ಬಳಿಕ ಗಣಿಗಾರಿಕೆಗೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅನುಮತಿಯನ್ನು ನಿರಾಕರಿಸಿತ್ತು.

    ಆದರೆ ಗಣಿ ಧನಿ ಮಾತ್ರ ಈಗಲೂ ನಿರಂತರವಾಗಿ ಕಲ್ಲುಗಳನ್ನು ಸ್ಪೋಟಿಸಿ ಗಣಿಗಾರಿಕೆಯನ್ನು ಎಗ್ಗಿಲ್ಲದೆ ಮಾಡುತ್ತಿದ್ದು, ಗ್ರಾಮಸ್ಥರ ಮನವಿಗಳು ಸ್ಪೋಟಕಗಳ ಶಬ್ದದಿಂದ ಅಧಿಕಾರಿಗಳ ಕಿವಿಯನ್ನೇ ತಲುಪದಂತಾಗಿದೆ ಎನ್ನುವುದು ಗ್ರಾಮದ ಹಿರಿಯರಾದ ಥೋಮಸ್ ಪಿಂಟೋ ಆರೋಪ.ಗಣಿಗಾರಿಕೆಯನ್ನು ಮುಚ್ಚಲೇ ಬೇಕೆಂಬ ಗ್ರಾಮಸ್ಥರ ನಿರಂತರ ಒತ್ತಡಕ್ಕೆ ಮಣಿದ ದಕ್ಷಿಣಕನ್ನಡ ಜಿಲ್ಲಾಧಿಕಾರಿ ತನ್ನ ಅಧೀನ ಅಧಿಕಾರಿಗಳನ್ನು ಸೆಪ್ಟಂಬರ್ 21 ಕ್ಕೆ ಸ್ಥಳ ಪರಿಶೀಲನೆಗಾಗಿ ಕಳುಹಿಸಿದ್ದರು.

    ಕಛೇರಿಯಿಂದ ಹೊರಟ ಅಧಿಕಾರಿಗಳು ಗಣಿಗಾರಿಕೆಯ ಸ್ಥಳ ತಲುಪುತ್ತಿಲ್ಲ !!

    ಕಛೇರಿಯಿಂದ ಹೊರಟ ಅಧಿಕಾರಿಗಳು ಇಂದಿನವರೆಗೂ ಗಣಿಗಾರಿಕೆ ನಡೆಯುತ್ತಿದ್ದ ಸ್ಥಳವನ್ನು ತಲುಪಿಲ್ಲ. ಈ ಬಗ್ಗೆ ಪ್ರಶ್ನಿಸಿದರೆ, ದಾರಿ ಮಧ್ಯೆ ಬ್ಲಾಕ್ ಇದ್ದ ಕಾರಣ ಬರಲಿಕ್ಕಾಗಲಿಲ್ಲ ಎನ್ನುವ ಸಬೂಬನ್ನೂ ನೀಡುತ್ತಾರೆ.

    ಅಕ್ರಮ ಗಣಿಗಾಕಿಕೆ ನಡೆಯುತ್ತಿರುವ ಕೋರೆ

    ಬ್ಲಾಕ್ ತಡೆಯಿತೇ ಅಥವಾ ಗಣಿ ಧನಿಯೇ ಅಧಿಕಾರಿಯನ್ನು ಬರದಂತೆ ಬ್ಲಾಕ್ ಮಾಡಿದರೇ ಎನ್ನುವ ಸಂಶಯ ಇದೀಗ ಗ್ರಾಮಸ್ಥರನ್ನು ಕಾಡುತ್ತಿದೆ. ಗಣಿಗಾರಿಕೆ ನಡೆಸಬೇಕಾದರೆ ಅದರ 200 ಮೀಟರ್ ಸುತ್ತಮುತ್ತ ಯಾವುದೇ ಜನವಸತಿ ಪ್ರದೇಶ, ಕಟ್ಟಡಗಳು ಇರಬಾರದೆಂಬ ನಿಯಮವಿದೆ.

    ಇಲ್ಲಿ ಮಾತ್ರ ಕೇವಲ 100 ಮೀಟರ್ ಅಂತರದಲ್ಲಿ ಜನವಸತಿ ಪ್ರದೇಶಗಳಿವೆ.ನೆಲದ ಮಟ್ಟದಿಂದ ಭೂಮಿಯ ಒಳಗೆ 6 ಮೀಟರ್ ಅಡಿಯಲ್ಲಿ ಮಾತ್ರ ಗಣಿಗಾರಿಕೆ ನಡೆಸಬೇಕೆಂಬ ಕಾನೂನಿದ್ದರೂ, ಇಲ್ಲಿ 50 ಮೀಟರೂ ಅಡಿಯಲ್ಲಿ ಕೊರೆಯಲಾಗುತ್ತಿದೆ. ಸ್ಪೋಟಕಗಳ ಶಬ್ದಕ್ಕೆ ಅಕ್ಕಪಕ್ಕದ ಮನೆಯು ಅಲುಗಾಡುತ್ತಿದ್ದು, ಆನ್ ಇದ್ದ ಟಿವಿ ಆಫ್ ಆಗುತ್ತಿದೆ ಎನ್ನುವುದು ಸ್ಥಳೀಯ ನಿವಾಸಿ ಚಿತ್ತರಂಜನ್ ಹಾಗೂ ಆತಂಕವಾಗಿದೆ.ಗ್ರಾಮಸ್ಥರ ಆತಂತವನ್ನು ವರದಿ ಮಾಡಲು ತೆರಳಿದ ಮಾಧ್ಯಮದವರ ಫೋಟೋಗಳನ್ನು ತೆಗೆದು ಅವರನ್ನು ಬೆದರಿಸುವ ಕೆಲಸವನ್ನೂ ಈ ಗಣಿ ಮಾಲಕ ಹಾಗೂ ಆತನ ಸಹಚರರು ಮಾಡುತ್ತಿದ್ದಾರೆ. ಅಲ್ಲದೆ ಸ್ಥಳ ಪರಿಶೀಲನೆ ನಡೆಸಲು ಬರದ ಅಧಿಕಾರಿಯ ಕುರಿತು ಪ್ರಶ್ನಿಸಿದರೆ, ಅಧಿಕಾರಿಯ ಪಿ.ಎ ಗ್ರಾಮಸ್ಥರನ್ನೇ ತರಾಟೆಗೆ ತೆಗೆದುಕೊಳ್ಳುವುದು ಅಕ್ರಮಗಳೂ ಇಲ್ಲಿ ಕಂಡು ಬರುತ್ತಿದೆ.ಈ ನಡುವೆ ಸೆಪ್ಟಂಬರ್ 24 ಕ್ಕೆ ಕಾಟಾಚಾರಕ್ಕೆಂದು ಭೇಟಿ ನೀಡಿದ ಎ.ಸಿ ಸಾಹೇಬರು ತಾವು ಬರುವ ಮೊದಲೇ ಗಣಿ ಧನಿಗೆ ಸಂದೇಶ ಮುಟ್ಟಿಸಿದ್ದು, ಎ.ಸಿ ಯವರು ಸ್ಥಳ ಪರಿಶೀಲನೆ ನಡೆಸಲು ಆಗಮಿಸಿದ ಸಂದರ್ಭದಲ್ಲಿ ಗಣಿಗಾರಿಕೆ ಕಾಮಗಾರಿ ಸದ್ಯಕ್ಕೆ ನಿಲ್ಲಿಸುವ ಮೂಲಕ ವಿಧೇಯತೆ ತೋರಿದ್ದಾನೆ. ಬಳಿಕ ಎ.ಸಿ ಯವರ ವಾಹನ ಸ್ಥಳದಿಂದ ತೆರಳಲು ಸ್ಟಾಟ್ ಆಗುವ ಮೊದಲು ಗಣಿಗಾರಿಕೆ ಮತ್ತೆ ಆರಂಭವಾಗಿದೆ.
    ಸ್ಥಳ ಪರಿಶೀಲನೆ ನಡೆಸಲು ಬಂದಿದ್ದ ಮಂಗಳೂರು ಎ.ಸಿ ಯವರಲ್ಲಿ ಈ ಕುರಿತು ವಿಚಾರಿಸಲು ಅವರ ಮೊಬೈಲ್ ಸಂಖ್ಯೆಗೆ ಕರೆ ಮಾಡಿದರೂ, ಕರೆ ಸ್ವೀಕರಿಸಿಲ್ಲ.ವಾಟ್ಸ್ ಅಪ್ ಸಂದೇಶ ಕಳುಹಿಸಿದರೂ, ಅದಕ್ಕೆ ಉತ್ತರಿಸುವ ಸೌಜನ್ಯವೂ ಎ.ಸಿ ತೋರಿಸಿಲ್ಲ.

    ಎ.ಸಿ. ಯವರ ಈ ನಡೆ ಕುತೂಹಲಕ್ಕೆ ಕಾರಣವಾಗಿದ್ದು, ಇದರ ಹಿಂದಿನ ಮರ್ಮವೇನು ಎನ್ನುವುದು ಬಹಿರಂಗವಾಗಬೇಕಿದೆ. ಅಕ್ರಮಗಳ ಬಗ್ಗೆ ಬಾಯಿ ಬಡಿದುಕೊಳ್ಳುವ ಉಸ್ತುವಾರಿ ಸಚಿವರ ಮನೆ ಪಕ್ಕದಲ್ಲೇ ಅಕ್ರಮ ನಡೆಯುತ್ತಿದ್ದರೂ ಬಾಯಿ ತೆರೆಯದ ಸಚಿವರ ಮೌನಕ್ಕೆ ಕಾರಣವೇನು ಎನ್ನುವುದೂ ತಿಳಿಯಬೇಕಿದೆ.

    Share Information
    Advertisement
    Click to comment

    You must be logged in to post a comment Login

    Leave a Reply