LATEST NEWS
ನಾಪತ್ತೆಯಾದ ಮೀನುಗಾರರ ಪತ್ತೆ ಗೆ ಆಗ್ರಹಿಸಿ ಮೀನುಗಾರರ ಬೃಹತ್ ಪ್ರತಿಭಟನೆ
ನಾಪತ್ತೆಯಾದ ಮೀನುಗಾರರ ಪತ್ತೆ ಗೆ ಆಗ್ರಹಿಸಿ ಮೀನುಗಾರರ ಬೃಹತ್ ಪ್ರತಿಭಟನೆ
ಉಡುಪಿ ಜನವರಿ 6: ಮಲ್ಪೆ ಬಂದರಿನಿಂದ ಮೀನುಗಾರಿಕೆಗೆ ತೆರಳಿದ್ದ ಏಳು ಮಂದಿ ಮೀನುಗಾರರು ಕಣ್ಮರೆಯಾಗಿ 24 ದಿನಗಳು ಕಳೆದಿದ್ಗರೂ ಪತ್ತೆ ಹಚ್ಚುವಲ್ಲಿ ರಾಜ್ಯ ಸರಕಾರ ವಿಫಲವಾಗಿದೆ ಎಂದು ಆರೋಪಿಸಿ ಮೀನುಗಾರರು ಉಡುಪಿಯಲ್ಲಿ ಬೃಹತ್ ಪ್ರತಿಭಟನೆ ನಡೆಸಿದರು. ಸಂಸದೆ ಶೋಭಾ ಸೇರಿದಂತೆ ಹಲವಾರು ಸಂಘ ಸಂಸ್ಥೆಗಳ ಮುಖಂಡರು ಭಾಗಿಯಾಗಿದ್ದರು. ಸುಮಾರು 3 ಗಂಟೆಗೂ ಅಧಿಕ ರಸ್ತೆ ತಡೆ ಉಂಟಾಗಿತ್ತು.
21 ದಿನಗಳಿಂದ ಮಡುಗಟ್ಟಿದ್ದ ಮೀನುಗಾರರ ಆಕ್ರೋಶ ಇಂದು ಭುಗಿಲೆದ್ದಿತ್ತು. ಉತ್ತರ ಕನ್ನಡ, ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯ ಮೀನುಗಾರರು ಪ್ರತಿಭಟನೆಗೆ ಧುಮುಕಿ ರಾಜ್ಯ ಹಾಗೂ ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು.
ಬೆಳಿಗ್ಗೆ ಮಲ್ಪೆಯಲ್ಲಿ ತೆಂಗಿನಕಾಯಿ ಹೊಡೆದು ಪೂಜೆ ಸಲ್ಲಿಸಿಪ್ರತಿಭಟನಾ ಮೆರವಣಿಗೆಗೆ ಚಾಲನೆ ನೀಡಿದ ಕಡಲ ಮಕ್ಕಳು ಉಡುಪಿಯವರೆಗೂ ಸಾಗಿ ಸುಮಾರು 3 ಗಂಟೆ ಕಾಲ ರಾಷ್ಟ್ರೀಯ ಹೆದ್ದಾರಿ ಸಂಚಾರವನ್ನು ಸಂಪೂರ್ಣ ಬಂದ್ ಮಾಡಿ ಆಕ್ರೋಶ ವ್ಯಕ್ತಪಡಿಸಿದರು.
ಮಲ್ಪೆ, ಮಂಗಳೂರು, ಗಂಗೊಳ್ಳಿ, ಹೊನ್ನಾವರ, ಕಾರವಾರದ ಮೀನುಗಾರಿಕಾ ಬಂದರು ಚಟುವಟಿಕೆ ಸಂಪೂರ್ಣ ಬಂದ್ ಮಾಡಲಾಗಿತ್ತು. ನಗರದೊಳಗಿನ ಮೀನು ಮಾರುಕಟ್ಟೆಗಳೂ ಬಂದ್ ಆಗಿತ್ತು. ನಿರೀಕ್ಷೆಗೂ ಮೀರಿ ಪ್ರತಿಭಟನೆಯಲ್ಲಿ ಭಾಗುವಹಿಸುವ ಮೂಲಕ ಮೀನುಗಾರ ಶಕ್ತಿ ಹಾಗೂ ಒಗ್ಗಟ್ಟು ಪ್ರದರ್ಶಿಸಿದರು.